ಬೆಂಗಳೂರು,ಅ.10- ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಬಡಮಕ್ಕಳು ಓದುವ ವಿದ್ಯಾರ್ಥಿ ನಿಲಯಗಳ ದುಃಸ್ಥಿತಿ ನಾಚಿಕೆಗೇಡು. ಅನಾಗರಿಕತೆಯ ಪರಮಾವಧಿ. ಆಡಳಿತ ವ್ಯವಸ್ಥೆ ತಲೆ ತಗ್ಗಿಸಬೇಕಾದ ಸಂಗತಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ತಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಕಸಾಯಿಖಾನೆಗಳಿಗಿಂತ ಕಡೆಯಾಗಿರುವ ಇಂತಹ ಜಾಗದಲ್ಲಿ ಮಕ್ಕಳು ಗುಣಾತಕ ವಿದ್ಯಾಭ್ಯಾಸ ಮಾಡುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ. 2026-27ನೇ ಸಾಲಿನ ಬಜೆಟ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ 42,632 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
ಇಷ್ಟು ಹಣ ಕಾಗದದ ಮೇಲಷ್ಟೇ ಮೀಸಲು ಇದೆಯೋ? ಅಥವಾ ಆ ಹಣ ಭ್ರಷ್ಟರ ಕಿಸೆಗಳ ಪಾಲಾಗಿದೆಯೋ? ಸರ್ಕಾರವೇ ಹೇಳಬೇಕು. ತಂದೆ-ತಾಯಿಯನ್ನು ಗ್ಯಾರಂಟಿಗಳ ಆಮಿಷದಲ್ಲಿ ಮುಳುಗಿಸಿ ಅವರ ಮಕ್ಕಳ ಭವಿಷ್ಯವನ್ನು ಸರ್ವನಾಶ ಮಾಡುತ್ತಿರುವ ಈ ಕೆಟ್ಟ ವ್ಯವಸ್ಥೆ ಆತಂಕಕಾರಿ ಎಂದು ಅವರು ಟೀಕಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಎಂದು ಜಾಗಟೆ ಹೊಡೆಯುತ್ತಿರುವ ಕಾಂಗ್ರೆಸ್ ಸರ್ಕಾರದ ದೆಸೆಯಿಂದ ಸಮೃದ್ಧ ಕರ್ನಾಟಕ ತನ್ನ ಹೆಮೆ, ಹಿರಿಮೆ ಗರಿಮೆಗಳನ್ನು ಕಳೆದುಕೊಂಡು ಜಂಗಲ್ ರಾಜ್ಯವಾಗಿ ಬದಲಾಗುತ್ತಿದೆ. ಹಾಸ್ಟೆಲ್ ಕೊಠಡಿಗಳಲ್ಲಿ ಕುರಿಗಳಂತೆ ಮಕ್ಕಳನ್ನು ತುಂಬಲಾಗಿದೆ. ಶೌಚಾಲಯ, ಸ್ನಾನದ ಗೃಹಗಳು ದುರ್ನಾತದಿಂದ ನಾರುತ್ತಿವೆ.
ಕಳಪೆ ಆಹಾರ, ಅನ್ನದಲ್ಲಿ ಕಲ್ಲು, ಕೊಳೆತ ತರಕಾರಿ. ಜೈಲುಗಳಿಗಿಂತ ಕೆಟ್ಟ ಸ್ಥಿತಿಯಲ್ಲಿರುವ ಹಾಸ್ಟೆಲ್ ಕೋಣೆಗಳು. ಸ್ವಚ್ಛತೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುತ್ತಿರುವ ಮಕ್ಕಳು – ಇವು ಹಾಸ್ಟೆಲ್ಗಳ ವಾಸ್ತವ ಚಿತ್ರಣ ತೋರಿಸುತ್ತವೆ ಎಂದಿದ್ದಾರೆ.
ಶಿಕ್ಷಣವೇ ಸಮಾಜದ ಅಭಿವೃದ್ಧಿಯ ಅಡಿಪಾಯ. ಜ್ಞಾನವೇ ಎಲ್ಲದರ ತಳಹದಿ ಎಂದು ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಆದರೆ ಅವರ ಹೆಸರಿನ ಹಾಸ್ಟೆಲ್ಗಳ ದಯನೀಯ ಸ್ಥಿತಿ ಕರ್ನಾಟಕಕ್ಕೆ ಕಳಂಕ. ಸಮಾಜ ಕಲ್ಯಾಣ ಸಚಿವರು ಹಾಸ್ಟೆಲ್ಗಳಲ್ಲಿ ವಾಸ್ತವ್ಯ ಹೂಡಬೇಕು, ಮಕ್ಕಳೊಂದಿಗೆ ಊಟ ಮಾಡಬೇಕು. ಅವರ ಉತ್ತಮ ಶಿಕ್ಷಣಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳದ ಹೊರತು ಸುಧಾರಣೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
