ಬೆಂಗಳೂರು,ಫೆ.26- ಮುಖ್ಯಮಂತ್ರಿ ಹುದ್ದೆಗಾಗಿ ಯಾವುದೇ ಲಾಬಿಯನ್ನು ಮಾಡುತ್ತಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಹೈಕಮಾಂಡ್ ಭೇಟಿಯಾ ಗಲು ದೆಹಲಿಗೂ ಹೋಗುತ್ತಿಲ್ಲ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಹೆಚ್ಚು ಗೊಂದಲವನ್ನೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನಾಯಕತ್ವ ಬದಲಾವಣೆ ಕುರಿತಂತೆ ಹೆಚ್ಚು ವ್ಯಾಖ್ಯಾನ ಮಾಡುವುದರಿಂದ ಯಾವುದೇ ಉತ್ತರ ಸಿಗುವುದಿಲ್ಲ. ಹೈಕಮಾಂಡ್ ಯಾವ ಸಂದರ್ಭದಲ್ಲಿ ಯಾವ ತೀರ್ಮಾನವನ್ನು ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ. ಈ ಬಗ್ಗೆ ಚರ್ಚೆ ಮಾಡಿದರೆ ಉಪಯೋಗವಿಲ್ಲ ಎಂದು ಹೇಳಿದರು.
ತಮ ಅಭಿಮಾನಿಗಳು, ಹಿತೈಷಿಗಳು ಕಾರ್ಯಕ್ರಮಗಳಲ್ಲಿ ಭಾಗಿಯಾದ ಸಂದರ್ಭದಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಅವರು ಅಪೇಕ್ಷೆ ಪಡುತ್ತಾರೆ. ಅವರ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಅದನ್ನು ತಡೆಯಲಾಗುವುದಿಲ್ಲ. ಈಗಾಗಲೇ ಆ ರೀತಿ ಭಾವನೆ ವ್ಯಕ್ತಪಡಿಸದಂತೆ ಅಭಿಮಾನಿಗಳು, ಹಿತೈಷಿಗಳಿಗೆ ಹೇಳಿದ್ದೇನೆ. ಆದರೂ ಅವರು ಮಾಡುತ್ತಿದ್ದಾರೆ. ನಾಯಕತ್ವದ ಗೊಂದಲಕ್ಕೆ ಕೈ ಜೋಡಿಸುವುದಿಲ್ಲ ಎಂದರು.
ಗಂಭೀರವಾಗಿ ಪರಿಗಣನೆ :
ರಾಜ್ಯದಲ್ಲಿ ನಾಪತ್ತೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಜಿಲ್ಲೆ ಮತ್ತು ರಾಜ್ಯ ಮಟ್ಟದ ಸಭೆಗಳಲ್ಲಿ ಈ ವಿಚಾರದ ಬಗ್ಗೆ ಗಂಭೀರ ಚರ್ಚೆ ಪರಿಶೀಲನೆಗಳನ್ನು ಮಾಡಲಾಗಿದೆ. ಬಹಳಷ್ಟು ಪ್ರಕರಣಗಳಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯ ಮೇಲಿನ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆ ಬಗ್ಗೆ ವರದಿ ಪಡೆಯಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಾಂಗ್ಲಾ ದೇಶ ಸೇರಿದಂತೆ ವಿದೇಶಗಳಿಂದ ಆಗಮಿಸಿ ವೀಸಾ ಅವಧಿ ಮುಗಿದರೂ ಇಲ್ಲೇ ಇರುವವರನ್ನು ಹುಡುಕಲಾಗುತ್ತಿದೆ. ಒಮೆ ಬಂದವರು ಮತ್ತೆ ಅವರ ದೇಶಗಳಿಗೆ ವಾಪಸ್ಸಾಗಿರುವ ಬಗ್ಗೆ ವಲಸೆ ವಿಭಾಗದಲ್ಲಿ ಮಾಹಿತಿ ಇರುವುದಿಲ್ಲ. ಅಂತವರನ್ನು ಹುಡುಕಲಾಗುತ್ತಿದೆ. ಅಲ್ಲದೆ ಬಾಂಗ್ಲಾದಿಂದ ಅಕ್ರಮವಾಗಿ ಬಂದಿದ್ದಾರೆ. ಗುರುತಿನ ಚೀಟಿಯನ್ನು ಮಾಡಿಸಿಕೊಂಡಿದ್ದಾರೆ. 15 ರಿಂದ 20 ಲಕ್ಷ ಇರಬಹುದು ಎಂಬ ಮಾತುಗಳು ಕೇಳಬಂದಿದ್ದು, ಈ ವಿಚಾರ ಸದನದಲ್ಲೂ ಚರ್ಚೆಯಾಗಿದ್ದು, ಅಂತವರನ್ನು ಹುಡುಕುವುದಾಗಿ ಭರವಸೆ ನೀಡಿದ್ದೆ ಎಂದರು.
ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಲು ಆಂದೋಲನ ಮಾಡಲಾಗುತ್ತಿದೆ. ಬೆಂಗಳೂರಿನಲ್ಲೂ ಅನಧಿಕೃತವಾಗಿ ಇರುವವರನ್ನು ಹುಡುಕಲಾಗುತ್ತಿದೆ. ಅವರು ಹೊಂದಿರುವ ಗುರುತಿನ ಚೀಟಿ ನಕಲಿಯೋ, ಅಸಲಿಯೋ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಹಂತಹಂತವಾಗಿ ಖಾಲಿ ಹುದ್ದೆ ಭರ್ತಿ :
ಯುವಕರಿಗೆ ಉದ್ಯೋಗ ಸಿಗದಿರುವುದು ಗಂಭೀರವಾದ ವಿಚಾರ. ಹೆಚ್ಚು ವಿದ್ಯಾವಂತರಾಗಬೇಕೆಂದು ಉತ್ತೇಜನ ನೀಡುತ್ತೇವೆ. ಅವರಿಗೆ ಉದ್ಯೋಗ ಸಿಗಬೇಕು. ಒಳಮೀಸಲಾತಿಯಿಂದಾಗಿ ನೇಮಕಾತಿ ನಿಧಾನವಾಗಿದೆ. ಈ ಪಕ್ಷದ ಪ್ರಣಾಳಿಕೆಯಲ್ಲಿ ಹಂತಹಂತವಾಗಿ ಖಾಲಿ ಹುದ್ದೆ ಭರ್ತಿ ಮಾಡುವುದಾಗಿ ಭರವಸೆ ನೀಡಿದ್ದೆವು. ಗೃಹ ಇಲಾಖೆಯಲ್ಲಿ 17 ಸಾವಿರ ಹುದ್ದೆಗಳು ಖಾಲಿ ಇದ್ದು, ಅವುಗಳ ಭರ್ತಿಗೆ ಅನುಮತಿ ಸಿಕ್ಕಿದೆ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ನಾವೆಲ್ಲಾ ಸೇರಿಯೇ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದೇವೆ. ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿಯಿಂದ ಹೊರೆಯಾಗಿದೆ ಎಂದು ಅನ್ನಿಸಿರಬಹುದು. ಅದು ಅವರ ಅಭಿಪ್ರಾಯ. ಈ ವಿಚಾರದಲ್ಲಿ ನಾವೆಲ್ಲಾ ಕೂತು ಚರ್ಚೆ ಮಾಡುತ್ತೇವೆ. ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಬಹುದು ಎಂದು ಅವರು ತಿಳಿಸಿದರು.
