Sunday, April 12, 2026
Homeರಾಜ್ಯಕರ್ನಾಟಕ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಅಯ್ಕೆಗೂ ಮುನ್ನ ಫೀಲ್ಡ್ ಗಿಳಿದ ಸುರ್ಜೇವಾಲಾ

ಕರ್ನಾಟಕ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಅಯ್ಕೆಗೂ ಮುನ್ನ ಫೀಲ್ಡ್ ಗಿಳಿದ ಸುರ್ಜೇವಾಲಾ

Karnataka by-elections: Surjewala hits the field before Congress candidates are selected

ಬೆಂಗಳೂರು, ಮಾ.20- ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಕಾಂಗ್ರೆಸ್‌‍ ಪಕ್ಷ ಶತಾಯಗತಾಯ ಗೆಲ್ಲಲೇಬೇಕೆಂದು ಪಟ್ಟು ಹಿಡಿದಿದ್ದು, ಅಭ್ಯರ್ಥಿಗಳ ಅಯ್ಕೆಗೂ ಮುನ್ನ ಕ್ಷೇತ್ರಗಳಲ್ಲಿ ಒಮ್ಮತ ಮೂಡಿಸಲು ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ಸಿಂಗ್‌ ಸುರ್ಜೇವಾಲ ಅವರೇ ಖುದ್ದಾಗಿ ಸಭೆ ನಡೆಸಲು ಮುಂದಾಗಿದ್ದಾರೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಆಗಮಿಸಿರುವ ರಣದೀಪ್‌ಸಿಂಗ್‌ ಸುರ್ಜೇವಾಲ ಮೂರು ಹಂತಗಳಲ್ಲಿ ಸಭೆ ನಡೆಸುತ್ತಿದ್ದಾರೆ.ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಕ್ಷೇತ್ರಗಳ ಪ್ರಮುಖ ಕಾರ್ಯಕರ್ತರು ಹಾಗೂ ಟಿಕೆಟ್‌ ಆಕಾಂಕ್ಷಿಗಳ ಜೊತೆಗೆ ಸಮಾಲೋಚನೆ ನಡೆಸುವ ರಣದೀಪ್‌ಸಿಂಗ್‌ ಸುರ್ಜೇವಾಲ ಒಗ್ಗಟ್ಟಿನ ಮಂತ್ರ ಬೋಧಿಸುವ ಸಾಧ್ಯತೆ ಇದೆ.

ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಎದುರಾಗಿರುವ ಉಪಚುನಾವಣೆಯಲ್ಲಿ 8 ಮಂದಿ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಆದರೆ ಶ್ಯಾಮನೂರು ಶಿವಶಂಕರಪ್ಪ ಅವರ ಮೊಮಗ ಮತ್ತು ಎಸ್‌‍.ಎಸ್‌‍. ಮಲ್ಲಿಕಾರ್ಜುನ್‌ ಅವರ ಪುತ್ರ ಸಮರ್ಥ್‌ಗೆ ಟಿಕೆಟ್‌ ದೊರೆಯುವುದು ಬಹುತೇಕ ಖಚಿತವಾಗಿದೆ. 1994ರಿಂದಲೂ ದಾವಣಗೆರೆ ಜಿಲ್ಲಾ ರಾಜಕಾರಣದ ಮೇಲೆ ಪ್ರಬಲ ಹಿಡಿತ ಹೊಂದಿದ್ದ ಶ್ಯಾಮನೂರು ಕುಟುಂಬ, ತನ್ನ ಆಧಿಪತ್ಯ ಮುಂದುವರೆಸಲು ಬಯಸಿದೆ. ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆಯನ್ನು ಬಹುತೇಕ ತಳ್ಳಿಹಾಕಿದಂತಾಗಿದೆ.

2008ರಲ್ಲಿ ಕ್ಷೇತ್ರ ವಿಭಜನೆಯಾದ ಬಳಿಕ ಸೃಷ್ಟಿಯಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪ ನಿರಂತರವಾಗಿ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಅವರ ಮತ ಗಳಿಕೆ ಪ್ರಮಾಣ ಏರಿಕೆಯಾಗುತ್ತಲೇ ಬಂದಿದೆ. 2008ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶವಂತರಾವ್‌ ಜಾಧವ್‌ ಅವರಿಗಿಂತ 6358 ಹೆಚ್ಚು ಮತಗಳನ್ನು ಪಡೆದು ಶ್ಯಾಮನೂರು ಗೆಲುವು ಸಾಧಿಸಿದ್ದರು.

2013ರಲ್ಲಿ ಜೆಡಿಎಸ್‌‍ನ ಕರೆಕಟ್ಟೆ ಸೈಯದ್‌ ಸೈಫುಲ್ಲಾ ಅವರ ವಿರುದ್ಧ 40 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2018ರಲ್ಲಿ ಮತ್ತೆ ಬಿಜೆಪಿಯ ಯಶವಂತರಾವ್‌ ಜಾಧವ್‌ ಅವರ ವಿರುದ್ಧ 15 ಸಾವಿರ ಮತಗಳಿಂದ 2023ರಲ್ಲಿ ಬಿಜೆಪಿಯ ಅಜಯ್‌ಕುಮಾರ್‌ ಬಿಜಿ ಅವರ ವಿರುದ್ಧ, 27 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಕಂಡಿದ್ದರು. ಈಗ ಬಿಜೆಪಿ ಅಭ್ಯರ್ಥಿಯನ್ನು ಬದಲಾಯಿಸಿದ್ದು, ಎಸ್‌‍ಟಿ ಮೋರ್ಚಾದ ಮುಖಂಡ ಶ್ರೀನಿವಾಸ ಟಿ. ದಾಸ ಕರಿಯಪ್ಪ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಕಾಂಗ್ರೆಸ್‌‍ ಹುಮಸ್ಸಿನಲ್ಲಿದ್ದು, ಸಮರ್ಥ್‌ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಉಮೇದಿನಲ್ಲಿದೆ. ಬಾಕಿ ಇರುವ 7 ಜನ ಆಕಾಂಕ್ಷಿಗಳ ಜೊತೆ ಸುರ್ಜೇವಾಲ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌‍ ಪಾಲಿಗೆ ಕಬ್ಬಿಣದ ಕಡಲೆಯಾಗಿ 1952ರಿಂದಲೂ ಇಲ್ಲಿ ಕಾಂಗ್ರೆಸ್‌‍ ಇತರ ಪಕ್ಷಗಳ ಜೊತೆ ಹಾವು-ಏಣಿ ಆಟ ನಡೆದಿದೆ.1952, 1957, 1962ರಲ್ಲಿ ಕಾಂಗ್ರೆಸ್‌‍ನ ಮುರನಾಳ್‌ ಬಸಪ್ಪ ತಮಣ್ಣ ಆಯ್ಕೆಯಾಗಿದ್ದರೆ, 1962ರಲ್ಲಿ ಎಸ್‌‍. ನಿಜಲಿಂಗಪ್ಪ ಗೆಲುವು ಸಾಧಿಸಿದ್ದರು. ಅನಂತರ 1976 ಮತ್ತು 1972ರಲ್ಲಿ ಮತ್ತೆ ಮುರನಾಳ್‌ ಬಸಪ್ಪ ಗೆಲುವು ಕಂಡಿದ್ದರೆ, 1978ರಲ್ಲಿ ಪರಪ್ಪ ಕಾಳಿಗುಡ್ಡ ಗೆಲುವು ಸಾಧಿಸಿದ್ದರು.

1983ರಲ್ಲಿ ಗುಲ್ಲಪ್ಪ ಮಂಟೂರ್‌ ಪಕ್ಷೇತರರಾಗಿ ಗೆಲುವು ಕಂಡರೆ, 1985 ರಲ್ಲಿ ಜನತಾಪಕ್ಷದಿಂದ ಆಯ್ಕೆಯಾಗಿದ್ದರು. 1989, 1994 ರಲ್ಲಿ ಜನತಾದಳದ ಅಜಯ್‌ಕುಮಾರ್‌ ಸರ್‌ನಾಯಕ್‌ ಗೆಲುವು ಸಾಧಿಸಿದ್ದರು. 1998-1999ರಲ್ಲಿ ಪ್ರಹ್ಲಾದ್‌ ಪೂಜಾರಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರು. 2004 ಮತ್ತು 2008ರಲ್ಲಿ ವೀರಣ್ಣ ಚರಂತಿಮಠ್‌ ಗೆಲುವು ಸಾಧಿಸಿದ್ದರು. 2013 ಮತ್ತು 2023ರಲ್ಲಿ ಎಚ್‌.ವೈ. ಮೇಟಿ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು.

ಅದಕ್ಕೂ ಮೊದಲು ಎಚ್‌.ವೈ.ಮೇಟಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದಿಂದ 5 ಬಾರಿ ಶಾಸಕರಾಗಿದ್ದರು. ಬಾಗಲಕೋಟೆ ಕ್ಷೇತ್ರ ಅತೀ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌‍ಗೆ ಒಲಿದಿತ್ತು. ಎಚ್‌.ವೈ.ಮೇಟಿ ಅವರ ಕುಟುಂಬದ ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಲು ಪೈಪೋಟಿ ನಡೆಸುತ್ತಿದ್ದಾರೆ. ಬಹುತೇಕ ಮೇಟಿ ಅವರ ಪುತ್ರಿ ಬಾಯಕ್ಕ ಅವರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ.ಮಲ್ಲಿಕಾರ್ಜುನ್‌, ಉಮಾದೇವಿ ಮತ್ತು ಉಮೇಶ್‌ ಅವರು ಕೂಡ ಟಿಕೆಟ್‌ ಕೇಳುತ್ತಿದ್ದಾರೆ. ಗೊಂದಲಗಳನ್ನು ಬಗೆಹರಿಸಲು ಖುದ್ದು ಸುರ್ಜೇವಾಲ ಅವರೇ ಅಖಾಡಕ್ಕಿಳಿದಿದ್ದಾರೆ.

RELATED ARTICLES

Latest News