Wednesday, May 13, 2026
Homeರಾಜ್ಯರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ : ಅಶೋಕ್‌ ಆಕ್ರೋಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ : ಅಶೋಕ್‌ ಆಕ್ರೋಶ

Law and order has completely collapsed in the state: Ashok

ಬೆಂಗಳೂರು,ಮೇ 13- ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರದ ಅವಧಿಯಲ್ಲಿ ಪೊಲೀಸ್‌‍ ಇಲಾಖೆ ಶಿಸ್ತು ನೈತಿಕತೆ ಮತ್ತು ಜನರ ವಿಶ್ವಾಸ ಕಳೆದುಕೊಂಡು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿದ್ದರಾಮಯ್ಯನವರೇ ಗ್ಯಾರೆಂಟಿ ಸರ್ಕಾರದಲ್ಲಿ ರಾಜ್ಯದ ಜನರಿಗೆ ಜೀವ ಆಸ್ತಿ ಮತ್ತು ಮಾನದ ರಕ್ಷಣೆಗಾಗಿ ಗ್ಯಾರಂಟಿ ನೀಡುವವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ರಕ್ಷಕರೇ ಭಕ್ಷಕರಾಗಿದ್ದಾರೆ. ಪೊಲೀಸ್‌‍ ಇಲಾಖೆ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಕಿಅಂಶಗಳು ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಬೆಚ್ಚಿ ಬೀಳಿಸುವ ಸತ್ಯವನ್ನು ಬಯಲಿಗೆ ಎಳೆದಿವೆ ಎಂದು ಆತಂಕ ಹೊರಹಾಕಿದ್ದಾರೆ.

ಕೇವಲ ಎರಡು ವರ್ಷಗಳಲ್ಲಿ 713 ಪೊಲೀಸ್‌‍ ಅಧಿಕಾರಿಗಳ ಅಮಾನತುಪಡಿಸಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯ ಅಮಾನತುಗಳು ಎಂದರೆ ಇದು ಯಾರೋ ಕೆಲವರ ವೈಯಕ್ತಿಕ ತಪ್ಪಲ್ಲ, ಸಂಪೂರ್ಣ ವ್ಯವಸ್ಥೆಯೇ ಕುಸಿದುಬಿದ್ದಿದೆ ಎಂಬುದಕ್ಕೆ ಸಾಕ್ಷಿ. ಗಂಭೀರ ಅಪರಾಧಗಳಲ್ಲಿ 95 ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿವೆ. ಸಾಮಾನ್ಯ ನಾಗರಿಕರು ಯಾರನ್ನು ನಂಬಬೇಕು? ಸುರಕ್ಷತೆಯ ಸಂಕೇತವಾಗಿರಬೇಕಾದ ಖಾಕಿ, ಇಂದು ಭಯ ಮತ್ತು ಅನುಮಾನಗಳ ಪ್ರತೀಕವಾಗುತ್ತಿರುವುದೇಕೆ? ಎಂದು ಪ್ರಶ್ನೆಸಿದ್ದಾರೆ.

ದರೋಡೆ, ಕಳ್ಳತನ, ಕೊಲೆ ಆರೋಪಗಳಲ್ಲೂ ಪೊಲೀಸರ ಹೆಸರುಗಳು ಕೇಇ ಬಂದಿವೆ. ಇದು ಕೇಳುವುದಕ್ಕೂ ನಾಚಿಕೆಯಾಗುತ್ತದೆ. ಕಾನೂನು ಜಾರಿ ಮಾಡಬೇಕಾದವರೇ ಕಾನೂನನ್ನು ಗಾಳಿಗೆ ತೂರಿ ಉಲ್ಲಂಘಿಸಲು ಆರಂಭಿಸಿದರೆ ರಾಜ್ಯದಲ್ಲಿ ನ್ಯಾಯ ಹೇಗೆ ಉಳಿಯುತ್ತದೆ? ಅಮಾನತುಗೊಂಡವರಲ್ಲಿ ಬಹುಪಾಲು ಅಧಿಕಾರಿಗಳು ಬೆಂಗಳೂರಿನವರೇ ಎಂಬ ಸಂಗತಿ ಆತಂಕಕಾರಿ. ದೇಶದ ತಂತ್ರಜ್ಞಾನ ರಾಜಧಾನಿ ಎಂದು ಹೆಮೆಪಡುವ ನಗರದಲ್ಲಿ ಕಾನೂನು ಸುವ್ಯವಸ್ಥೆ ಈ ಮಟ್ಟಿಗೆ ಹದಗೆಟ್ಟರೆ ಬೆಂಗಳೂರಿನ ಬ್ರ್ಯಾಂಡ್‌ ವ್ಯಾಲ್ಯೂ, ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲವೇ? ಎಂದು ಸರ್ಕಾರವನ್ನು ತರಾಟೆಗೆತಗೆದುಕೊಂಡಿದ್ದಾರೆ.

400ಕ್ಕೂ ಹೆಚ್ಚು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ. ಇದು ಕೇವಲ ಆರೋಪಗಳ ಹಂತದಲ್ಲಿಲ್ಲ.ವಿಭಾಗೀಯ ತನಿಖೆಗಳಲ್ಲೇ ತಪ್ಪಿತಸ್ಥರೆಂದು ಸಾಬೀತಾದರೂ, ಈ ಸರ್ಕಾರ ಯಾವ ಕಠಿಣ ಕ್ರಮ ತೆಗೆದುಕೊಂಡಿದೆ?ಇಂದು ಜನರಲ್ಲಿ ಮೂಡಿರುವ ಭಯ ಏನೆಂದರೆ, ರೌಡಿ ಶೀಟರ್ಗಳ ಜೊತೆ ಕೈಜೋಡಿಸುವವರು, ನಕಲಿ ದಾಖಲೆಗಳ ಜಾಲ ನಡೆಸುವವರು, ಅಮಾಯಕರ ಮೇಲೆ ದೌರ್ಜನ್ಯ ಎಸಗುವವರು ಕಾನೂನಿನ ಭಯವಿಲ್ಲದೆ ಸಂಚರಿಸುತ್ತಿದ್ದಾರೆ ಎಂಬುದು.ಇದು ಕೇವಲ ಪೊಲೀಸ್‌‍ ಇಲಾಖೆಯ ವೈಫಲ್ಯವಲ್ಲ, ಇದು ಗೃಹ ಇಲಾಖೆಯ ಸಂಪೂರ್ಣ ದಿವಾಳಿತನ ಎಂದು ವಾಗ್ದಳಿ ನಡೆಸಿದ್ದಾರೆ.

ಈ ಸರ್ಕಾರ ಅಪರಾಧಿಗಳನ್ನು ನಿಯಂತ್ರಿಸುತ್ತಿದೆಯೇ? ಅಥವಾ ಅಪರಾಧಿಗಳಿಗೆ ರಾಜಕೀಯ ರಕ್ಷಣೆ ನೀಡುತ್ತಿದೆಯೇ? ಖಾಕಿಯ ಮೇಲಿನ ಜನರ ನಂಬಿಕೆಯನ್ನು ನಾಶಮಾಡಿದ ಈ ವ್ಯವಸ್ಥೆಯನ್ನು ತಕ್ಷಣವೇ ಶುದ್ಧೀಕರಿಸಬೇಕು. ಇಲ್ಲದಿದ್ದರೆ ಕರ್ನಾಟಕದ ಜನರ ಆಕ್ರೋಶವೇ ಈ ಸರ್ಕಾರವನ್ನು ಅಧಿಕಾರದ ಕುರ್ಚಿಯಿಂದ ಕೆಳಗಿಳಿಸುವ ದಿನ ದೂರವಿಲ್ಲ ಎಂದು ಸರ್ಕಾರಕ್ಕೆ ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 38,163 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದರೆ, ಇದು ಸಾಮಾನ್ಯ ಆಡಳಿತ ವೈಫಲ್ಯವಲ್ಲ, ಇದು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ನಿಧಾನವಾಗಿ ಕುಸಿಯಲು ಬಿಡುತ್ತಿರುವ ಕ್ರೂರ ನಿರ್ಲಕ್ಷ್ಯ, ಶೇ.22ರಷ್ಟು ಶಿಕ್ಷಕರ ಹುದ್ದೆಗಳು ಖಾಲಿ, ಅಂದರೆ ಪ್ರತಿ ಐದು ಹುದ್ದೆಗಳಲ್ಲಿ ಒಂದು ಹುದ್ದೆ ಖಾಲಿ ಇದ್ದರೆ ಶಾಲೆಗಳು ಹೇಗೆ ನಡೆಯಬೇಕು? ನಿಮ ಱಗ್ಯಾರಂಟಿೞ ಯೋಜನೆಗಳು ಮಕ್ಕಳಿಗೆ ಪಾಠ ಹೇಳುತ್ತವೆಯೇ? ತರಗತಿಯಲ್ಲಿ ಶಿಕ್ಷಕರೇ ಇಲ್ಲದಿದ್ದರೆ ಬಡ ಮಕ್ಕಳಿಗೆ ಅಕ್ಷರ ಯಾರು ಕಲಿಸಬೇಕು? ಅವರ ಕನಸುಗಳನ್ನು ಯಾರು ಕಟ್ಟಿಕೊಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.

15,000 ಶಿಕ್ಷಕರ ನೇಮಕಾತಿ ಮಾಡುತ್ತೇವೆ ಎಂದು ಘೋಷಿಸಿದ್ದ ನಿಮ ಸರ್ಕಾರ ಈಗ ಮೌನ ವಹಿಸಿರುವುದೇಕೆ? ಜಾಹೀರಾತುಗಳಲ್ಲಿ ಶಿಕ್ಷಣ ಪ್ರೀತಿ ತೋರಿಸಿ, ವಾಸ್ತವದಲ್ಲಿ ಶಾಲೆಗಳನ್ನು ಶಿಕ್ಷಕರಿಲ್ಲದೆ ಬಿಟ್ಟುಬಿಡುವುದು ಯಾವ ರೀತಿಯ ಸಾಮಾಜಿಕ ನ್ಯಾಯ?ಹಣದ ಕೊರತೆಯೇ? ಅಥವಾ ಕಾಳಜಿಯ ಕೊರತೆಯೇ? ಗ್ಯಾರೆಂಟಿ ಅನುಷ್ಠಾನ ಸಮಿತಿಗಳ ಹೆಸರಿನಲ್ಲಿ ಅತೃಪ್ತ ಕಾಂಗ್ರೆಸ್ಸಿಗರಿಗೆ ಗಂಜಿ ಕೇಂದ್ರ ನಡೆಸುವುದಕ್ಕೆ ನೂರಾರು ಕೋಟಿ ಇದೆ, ಐಷಾರಾಮಿ ಸಮಾವೇಶಗಳಿಗೆ ಹತ್ತಾರು ಕೋಟಿ ಹಣ ಇದೆ, ಅಲ್ಪಸಂಖ್ಯಾತರ ಓಲೈಕೆಗೆ ಹಣ ಇದೆ.

ಆದರೆ ಮಕ್ಕಳಿಗೆ ಅಕ್ಷರ ಕಲಿಸುವ ಶಿಕ್ಷಕರ ನೇಮಕಾತಿಗೆ ಮಾತ್ರ ಖಜಾನೆ ಖಾಲಿಯೇ? ಇದು ಆರ್ಥಿಕ ಸಮಸ್ಯೆಯಲ್ಲ? ಇದು ಇಚ್ಛಾಶಕ್ತಿಯ ಕೊರತೆ ಎಂದು ಅವರು ಕಿಡಿಕಾರಿದ್ದಾರೆ.
ಶಿಕ್ಷಕರಿಲ್ಲದ ಶಾಲೆ ಎಂದರೆ ಅದು ಕೇವಲ ಖಾಲಿ ಕಟ್ಟಡ.ಅಲ್ಲಿ ಶಿಕ್ಷಣ ಸಾಯುತ್ತದೆ. ಅಲ್ಲಿ ಬಡ ಮಕ್ಕಳ ಭವಿಷ್ಯ ಕತ್ತಲೆಯಾಗುತ್ತದೆ.ಅಲ್ಲಿ ಸಮಾಜದ ಸಮಾನತೆ ಕುಸಿಯುತ್ತದೆ.ಇಂದು ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ, ನಾಳೆ ಱಱವಿದ್ಯಾರ್ಥಿಗಳೇ ಇಲ್ಲೞೞ ಎಂಬ ನೆಪದಲ್ಲಿ ಅವುಗಳಿಗೆ ಬೀಗ ಹಾಕುವ ಹುನ್ನಾರ ನಡೆಯುತ್ತಿದೆಯೇ ಎಂಬ ಅನುಮಾನ ಜನರಲ್ಲಿ ಮೂಡಿದೆ.

ರಾಜ್ಯದ ಅಕ್ಷರ ದಾಸೋಹವನ್ನು ಹಾಳುಮಾಡುತ್ತಿರುವ ಈ ಕಾಂಗ್ರೆಸ್‌‍ ಸರ್ಕಾರಕ್ಕೆ ಕರ್ನಾಟಕದ ಜನ ತಕ್ಕ ಉತ್ತರ ನೀಡಲಿದ್ದಾರೆ.ತಕ್ಷಣವೇ ಪೂರ್ಣ ಪ್ರಮಾಣದ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಹುನ್ನಾರವನ್ನು ನಿಲ್ಲಿಸಬೇಕು ಎಂದು ಅಶೋಕ್‌ ಆಗ್ರಹಿಸಿದ್ದಾರೆ.

RELATED ARTICLES

Latest News