ಬೆಂಗಳೂರು, ಮೇ 3- ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಬಳಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಅವರ ಆರ್ಥಿಕ ಸಲಹೆಗಾರ ಮತ್ತು ಹಿರಿಯ ಶಾಸಕ ಬಸವರಾಜರಾಯರೆಡ್ಡಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೀಡಿರುವ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸ್ಫೋಟಕ ಪರಿಣಾಮವನ್ನುಂಟು ಮಾಡಿದೆ.
ತಾವು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ರಾಜ್ಯದಲ್ಲಿ ಇನ್ನೂ ಎರಡು ವರ್ಷ ಕಾಂಗ್ರೆಸ್ ಆಡಳಿತ ಇರಲಿದೆ. ಅನಂತರ ಮತ್ತೆ ವಿಧಾನಸಭಾ ಚುನಾವಣೆ ಎದುರಿಸಬೇಕು. ಅದಕ್ಕಾಗಿ ಜನಪರ ಆಡಳಿತ ನೀಡುವ ಅಗತ್ಯ ಇದೆ. ಸಚಿವ ಸಂಪುಟ ಪುನರ್‌ರಚನೆ, ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಶಾಸಕರು, ಹಿರಿಯ ನಾಯಕರು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮನವಿ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ವೇಳೆ ತಮೊಂದಿಗೆ ಮಾಹಿತಿ ಹಂಚಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು ಈಗಾಗಲೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯೆಂದು ಆಯ್ಕೆ ಮಾಡಲಾಗಿದೆ. ಬದಲಾವಣೆ ಸದ್ಯಕ್ಕಿಲ್ಲ, ಒಂದು ವೇಳೆ ಅಂತಹ ಪರಿಸ್ಥಿತಿ ಬಂದರೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಶಾಸಕರ ಅಭಿಪ್ರಾಯವನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು ಎಂದು ಹೇಳಿದ್ದಾರೆ.
2023ರ ಮೇ ನಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ ಶಾಸಕಾಂಗ ಸಭೆ ನಡೆಸಿ, ಅಲ್ಲಿ ಆಂತರಿಕ ಚುನಾವಣೆ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ. ಈಗ ಬದಲಾವಣೆ ಮಾಡಬೇಕಾದರೂ ಮತ್ತೆ ಮತಪೆಟ್ಟಿಗೆ ಇಟ್ಟು ಚುನಾವಣೆ ನಡೆಸಿ ಶಾಸಕರ ಅಭಿಪ್ರಾಯ ಕೇಳಬೇಕು. ಬದಲಾವಣೆ ಅಷ್ಟು ಸುಲಭವಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಬಸವರಾಜರಾಯರೆಡ್ಡಿ ಒಂದು ಕಾಲದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪರಮಾಪ್ತರಾಗಿದ್ದರು. ನಾಯಕತ್ವ ವಿಚಾರ ಬಂದಾಗಲೆಲ್ಲಾ ಬಸವರಾಜರಾಯರೆಡ್ಡಿ, ಸಿದ್ದರಾಮಯ್ಯ ಅವರ ಪರವಾಗಿಯೇ ವಕಾಲತ್ತು ವಹಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಬಣ ನಾಯಕತ್ವಕ್ಕೆ ಸಂಬಂಧಪಟ್ಟಂತೆ ನಾನಾ ರೀತಿಯ ವ್ಯಾಖ್ಯಾನ ನಡೆಸಿದೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡುವವರ ಸಂಖ್ಯೆ ಇತ್ತೀಚೆಗೆ ಕ್ಷೀಣಿಸಿತ್ತು. ಸಚಿವರು ಅಲ್ಲಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದರಾದರೂ, ಬಹಿರಂಗ ಹೇಳಿಕೆಗಳನ್ನು ನೀಡುವಾಗ ಹಿಂದೇಟು ಹಾಕುತ್ತಿದ್ದರು. ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಯರೆಡ್ಡಿ ಹೇಳಿಕೆ ಸಿದ್ದರಾಮಯ್ಯ ಅವರ ಬಣಕ್ಕೆ ಬಲ ತಂದುಕೊಟ್ಟಿದೆ.
ಮಲ್ಲಿಕಾರ್ಜುನ ಖರ್ಗೆ ಖುದ್ದು ಹೇಳಿಕೆ ನೀಡಿ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು. ಇದನ್ನು ಉಲ್ಲೇಖಿಸಿ ಬಸವರಾಯರೆಡ್ಡಿ ನೇರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ತಮ ಬಳಿ ಖರ್ಗೆ ಅವರೇ ಹೇಳಿದ್ದಾರೆ ಎಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಒಂದು ವೇಳೆ ನಾಯಕತ್ವ ಬದಲಾವಣೆಯಾಗಬೇಕು ಎಂದಾದರೆ, ಖುದ್ದು ನೀವೇ ಮುಖ್ಯಮಂತ್ರಿಯಾಗಬೇಕೆಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಹ್ವಾನ ನೀಡಿರುವುದಾಗಿ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಹಿರಿಯ ಮುತ್ಸದ್ದಿ. ಅವರ ನಂತರ ಮುಖ್ಯಮಂತ್ರಿಯಾಗುವವರು ಕೂಡ ಸಾಕಷ್ಟು ಅನುಭವ ಮತ್ತು ಹಿರಿತನ ಹೊಂದಿರಬೇಕು. ಸಿದ್ದರಾಮಯ್ಯ ಅವರ ಪ್ರಭಾವಕ್ಕೆ ಸರಿಸಮಾನವಾದ ನಾಯಕತ್ವ ಇದ್ದರೆ, ಅದು ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ. ನಾಯಕತ್ವದ ಬದಲಾವಣೆ ಮಾಡಲೇಬೇಕಾದರೆ, ಮಲ್ಲಿಕಾರ್ಜುನ ಖರ್ಗೆ ಅವರೇ ರಾಜ್ಯಕ್ಕೆ ಬಂದು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ರಾಯರೆಡ್ಡಿ ಪ್ರತಿಪಾದಿಸುವುದಾಗಿ ತಿಳಿಸಿದರು.
