ಬೆಂಗಳೂರು, ಮೇ 3- ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತ ಪತ್ರಗಳನ್ನು ತಿರುಚುವ ಮೂಲಕ ವ್ಯವಸ್ಥಿತವಾದ ಅಪರಾಧ ಚಟುವಟಿಕೆ ನಡೆಸಿರುವುದು ದೇಶದಲ್ಲೇ ದೊಡ್ಡ ಉದಾಹರಣೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಇಡೀ ರಾತ್ರಿ ಮರು ಮತ ಎಣಿಕೆ ಸಂದರ್ಭದಲ್ಲಿನ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಮಾಜಿ ಶಾಸಕ ಜೀವರಾಜ್ ಅವರು, ತಮ ಬಳಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳನ್ನು ಯಾವ ರೀತಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ದೇಶಕ್ಕೆ ದೊಡ್ಡ ಸಾಕ್ಷಿಯಾಗಿದೆ. ಈ ಬಗ್ಗೆ ನನಗೆ ವರದಿ ಬಂದಿದೆ. ಅದನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದರು.
ಅಂಚೆ ಮತಪತ್ರಗಳಿದ್ದ ಬಾಕ್ಸ್ ಗಳನ್ನು ತೆರೆಯುವುದು, ಮತಪತ್ರಗಳನ್ನು ತಿರುಚುವುದು ನಂತರ ನ್ಯಾಯಾಲಯಕ್ಕೆ ಹೋಗಿ ಮರು ಎಣಿಕೆ ಆದೇಶ ತರುವುದು, ವ್ಯವಸ್ಥಿತವಾದ ಹುನ್ನಾರವಾಗಿದ್ದು ಅಪರಾಧವೂ ಆಗಿದೆ ಎಂದರು.
ಈ ಹಿಂದೆ ಅವರದೇ ಏಜೆಂಟ್ ಸಮುಖದಲ್ಲಿ ಮತ ಎಣಿಕೆಯಾಗಿತ್ತು. ಆ ಸಂಬಂಧಪಟ್ಟಂತೆ ಒಪ್ಪಿತ ಸಹಿಗಳನ್ನು ಪಡೆಯಲಾಗಿತ್ತು. ಆದರೆ ಜೀವರಾಜ್ ಅವರು ಕೋರ್ಟ್‌ಗೆ ಹೋಗಿ ನಾನಾ ರೀತಿಯ ಪ್ರಯತ್ನ ಮಾಡಿದ್ದಾರೆ. ಇದರ ವಿರುದ್ಧ ಕಾನೂನು ಸಮರ ನಡೆಸಿದ್ದೇವೆ. ಸರ್ಕಾರದ ವತಿಯಿಂದಲೂ ಕಾನೂನು ಸಮರಕ್ಕೆ ಏನೆಲ್ಲಾ ಮಾಡಲಿಕ್ಕೆ ಸಾಧ್ಯ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.
