Homeರಾಜ್ಯಸಮವಸ್ತ್ರದ ಜೊತೆ ಸಾಂಪ್ರದಾಯಿಕ ಸಂಕೇತಗಳನ್ನು ಮಾತ್ರ ಧರಿಸಲು ಅವಕಾಶ : ಸಿಎಂ

ಸಮವಸ್ತ್ರದ ಜೊತೆ ಸಾಂಪ್ರದಾಯಿಕ ಸಂಕೇತಗಳನ್ನು ಮಾತ್ರ ಧರಿಸಲು ಅವಕಾಶ : ಸಿಎಂ

Only traditional symbols allowed with uniform: CM

ಮೈಸೂರು, ಮೇ 14- ಚಾಲ್ತಿಯಲ್ಲಿರುವ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಮಾತ್ರ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ಜೊತೆಗೆ ಧರಿಸಲು ಅವಕಾಶ ಇದೆ. ಕೇಸರಿ ಶಾಲು ಅಥವಾ ಹೊಸದಾಗಿ ಕೇಸರಿ ಟರ್ಬನ್‌ ಬಳಸಲು ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನಿನ್ನೆ ಹೊರಡಿಸಿರುವ ಆದೇಶದಲ್ಲಿ ಹಿಜಾಬ್‌ ಧರಿಸಲು ಮಾತ್ರ ಅವಕಾಶ ನೀಡಿಲ್ಲ, ಪೇಟ-ಟರ್ಬನ್‌, ಜನಿವಾರ-ಪವಿತ್ರದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ-ಹಿಜಾಬ್‌ ಧರಿಸಲೂ ಅವಕಾಶ ನೀಡಿದೆ. ಅವರವರ ನಂಬಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳು 12ನೇ ತರಗತಿವರೆಗೂ ಪದ್ಧತಿ ಆಧಾರಿತ ಸಂಕೇತಗಳನ್ನು ಧರಿಸಬಹುದು ಎಂದರು.

ಬಿಜೆಪಿಯವರ ಹೇಳಿಕೆಯಂತೆ ಕೇಸರಿ ಶಾಲು ಅಥವಾ ಕೇಸರಿ ಟರ್ಬನ್‌ ಹಾಕಲು ಅವಕಾಶ ಇಲ್ಲ. ಈವರೆಗೂ ನಂಬಿಕೆ ಆಧಾರಿತವಾಗಿ ಚಾಲ್ತಿಯಲ್ಲಿರುವ ಸಂಕೇತಗಳನ್ನು ಮಾತ್ರ ಬಳಸಬಹುದು ಎಂದರು.

ಶಾಶ್ವತ ಪರಿಹಾರ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಎದುರಾಗಿರುವ ಆರ್ಥಿಕ ಸಂಕಷ್ಟಗಳನ್ನು ನಿಭಾಯಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ ಬೆಂಗಾವಲು ಪಡೆಯ ವಾಹನ ಸಂಖ್ಯೆಯನ್ನು ಕಡಿತಗೊಳಿಸಿರುವುದು ಸೂಕ್ತ ಪರಿಹಾರ ಅಲ್ಲ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ. ಬೇರೆ ಬೇರೆ ದೇಶಗಳ ಜೊತೆ ಚರ್ಚೆ ಮಾಡಿ, ತೈಲ ಸಂಪತ್ತನ್ನು ಖರೀಸುವ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ. ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ಸರ್ವಾನುಮತದ ವ್ಯವಸ್ಥೆ ರೂಢಿಸಿಕೊಳ್ಳುವ ಅಗತ್ಯ ಇದೆ. ಅದನ್ನು ಬಿಟ್ಟು ಬೆಂಗಾವಲು ಪಡೆಗಳ ಸಂಖ್ಯೆ ಕಡಿತ ಸೂಕ್ತವಲ್ಲ ಎಂದರು.ಪ್ರಧಾನಿಯವರ ಕರೆಯ ಮೇರೆಗೆ ಬೇರೆ ರಾಜ್ಯಗಳು ಯಾವ ಪದ್ಧತಿಯನ್ನು ಅನುಸರಿಸುತ್ತಿವೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.

ಕೇಂದ್ರದಿಂದ ವಿದ್ಯಾರ್ಥಿಗಳಿಗೆ ಅನ್ಯಾಯ: ನೀಟ್‌ ಪರೀಕ್ಷೆ ರದ್ದು ಗೊಳಿಸಿರುವುದರಿಂದ ಕಷ್ಟ ಪಟ್ಟು ಓದಿ ಪರೀಕ್ಷೆ ಬರೆದವರಿಗೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ಸಿಇಟಿ ಪರೀಕ್ಷೆಯನ್ನು ಅತ್ಯುತ್ತಮವಾಗಿ ನಡೆಸುತ್ತಿದೆ. ಕೇಂದ್ರ ಸರ್ಕಾರಕ್ಕೆ ಪಾರದರ್ಶಕವಾಗಿ ನೀಟ್‌ ಪರೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ ಎಂದು ತಿರುಗೇಟು ನೀಡಿದರು.

ಈ ಮೊದಲು ಸಿಇಟಿ ಮೂಲಕವೇ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನೀಡಲಾಗಿತ್ತು. ಕೇಂದ್ರ ಸರ್ಕಾರ ಅದನ್ನು ಬದಲಾವಣೆ ಮಾಡಿ ನೀಟ್‌ ಪದ್ದತಿ ಜಾರಿ ಮಾಡಿದೆ. ಈ ಎಲ್ಲಾ ವಿಷಯಗಳಿಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರವನ್ನು ವಿಶ್ಲೇಷಣೆಗೊಳಪಡಿಸುವ ಅಗತ್ಯ ಇದೆ ಎಂದು ಅವರು ಹೇಳಿದರು.

RELATED ARTICLES

Latest News