Homeರಾಜ್ಯಹಿಜಾಬ್‌ಗೆ ಅನುಮತಿ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಕೊಳ್ಳಿಯಿಟ್ಟ ಕಾಂಗ್ರೆಸ್ ಸರ್ಕಾರ : ಜನರ ಆಕ್ರೋಶ

ಹಿಜಾಬ್‌ಗೆ ಅನುಮತಿ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಕೊಳ್ಳಿಯಿಟ್ಟ ಕಾಂಗ್ರೆಸ್ ಸರ್ಕಾರ : ಜನರ ಆಕ್ರೋಶ

Congress government destroyed social harmony by allowing hijab: People's outrage

ಬೆಂಗಳೂರು, ಮೇ 14- ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಬಳಕೆಗೆ ಸಂಬಂಧಪಟ್ಟಂತೆ ಪರಿಷ್ಕೃತ ಆದೇಶ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ಗಾಯವನ್ನು ಕೆರೆದು ಹುಣ್ಣು ಮಾಡಿಕೊಂಡಿದ್ದು, ಕೆಲವು ನಾಯಕರ ಹಿತಾಸಕ್ತಿಗಾಗಿ ಸಾಮಾಜಿಕ ಸಾಮರಸ್ಯಕ್ಕೆ ಕೊಳ್ಳಿಯಿಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿವೆ.

ಅಕಾಲಿಕ ಮತ್ತು ಅನಗತ್ಯವಾದ ನಿರ್ಧಾರದ ಮೂಲಕ ರಾಜ್ಯ ಸರ್ಕಾರ ಕೋಮು ಪ್ರಚೋದಿತ ಸಂಘರ್ಷಕ್ಕೆ ಮುನ್ನುಡಿ ಬರೆದಿರುವುದು ಕಾಂಗ್ರೆಸ್‌‍ನ ಒಳ ವಲಯದಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.2022ರ ಫೆಬ್ರವರಿ 5ರಂದು ಆಗಿನ ಬಿಜೆಪಿ ಸರ್ಕಾರ ಹೊರಡಿ ಸಿದ್ದ ವಿವಾದಿತ ಆದೇಶವನ್ನು ರದ್ದು ಪಡಿಸುವ ಮೂಲಕ ಶಾಲಾ- ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ ಹಾಗೂ ಕೇಸರಿ ಶಾಲುಗಳ ಸಂಘರ್ಷಕ್ಕೆ ಮುನ್ನುಡಿ ಬರೆಯಲಾಗಿದೆ.

ಈ ಹಿಂದೆ 2023ರ ಚುನಾವಣೆಗೂ ಮುನ್ನ ಹಿಜಾಬ್‌ ಸಂಘರ್ಷ ಸೂಕ್ಷ್ಮ ಹಾಗೂ ಸಂಕೀರ್ಣ ಪರಿಸ್ಥಿತಿಯನ್ನು ನಿರ್ಮಿಸಿತ್ತು. ಇದರ ಲಾಭ ಪಡೆದ ಕಾಂಗ್ರೆಸ್‌‍ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಹಿಜಾಬ್‌ ನಿಷೇಧವನ್ನು ತೆರವು ಮಾಡುವುದಾಗಿ ಪ್ರಣಾಳಿಕೆಯಲ್ಲೇ ಭರವಸೆ ನೀಡಿತ್ತು.
ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಈ ಬಗ್ಗೆ ಮರೆತಂತೆ ನಟಿಸುತ್ತಿತ್ತು. ಇತ್ತೀಚೆಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರನ್ನು ಕಡೆಗಣಿಸಿ, ಶ್ಯಾಮನೂರ ಶಿವಶಂಕರಪ್ಪ ಅವರ ಮೊಮಗ ಸಮರ್ಥ್‌ಗೆ ಟಿಕೆಟ್‌ ನೀಡಲಾಗಿತ್ತು. ಉಪ ಚುನಾವಣೆಯಲ್ಲಿ ಜಮೀರ್‌ ಅಹಮದ್‌ಖಾನ್‌ ಹೆಚ್ಚು ಆಸಕ್ತಿ ವಹಿಸಿ, ಪ್ರಚಾರ ನಡೆಸದೇ ಇದ್ದರೂ, ಕಾಂಗ್ರೆಸ್‌‍ ಮುಖಂಡರು ಹಾಗೂ ಸ್ಥಳೀಯ ನಾಯಕರು ತಮದೇ ಆದ ಕಾರ್ಯತಂತ್ರ ರೂಪಿಸುವ ಮೂಲಕ ಕಾಂಗ್ರೆಸ್‌‍ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬಂದಿದ್ದಾರೆ.

ಇದರಿಂದಾಗಿ ಮುಸ್ಲಿಂ ನಾಯ ಕತ್ವದ ಆಧಿಪತ್ಯ ಪ್ರತಿಪಾದಿಸುತ್ತಿದ್ದ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರಿಗೆ ಭಾರೀ ಹಿನ್ನಡೆ ಯಾದಂತಾಗಿದೆ. ಫಲಿತಾಂಶ ಘೋಷಣೆಯಾದ ಬಳಿಕ ಏನೂ ಆಗೇ ಇಲ್ಲ ಎಂಬಂತೆ ವರ್ತಿಸಿ ಜಮೀರ್‌ ಅವರು, ಡ್ಯಾಮೇಜ್‌ ಕಂಟ್ರೋಲ್‌ಗೆ ಪ್ರಯತ್ನ ಮಾಡಿದ್ದರು. ಆದರೆ ಅದು ಸಾಲಲಿಲ್ಲ. ಹೀಗಾಗಿ ಶಾಲಾ- ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡುವುದಾಗಿ ಈ ಹಿಂದೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಅನುಷ್ಠಾನಕ್ಕೆ ತರುವ ಅಸ್ತ್ರ ಪ್ರಯೋಗ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದು ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದಾಗಿಯೂ ಲೆಕ್ಕಿಸದೇ, ಹಿಜಾಬ್‌ಗೆ ಅವಕಾಶ ನೀಡುವ ಆದೇಶ ಹೊರಡಿಸಲಾಗಿದೆ. ಅದನ್ನು ಪ್ರಕಟಿಸಲು ಶಾಲಾ ಶಿಕ್ಷಣ ಅಥವಾ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತನ್ನ ಎಡಗಡೆ ಸಚಿವ ದಿನೇಶ್‌ ಗುಂಡೂರಾವ್‌ ಅವರನ್ನು, ಬಲಗಡೆ ಶಾಸಕ ರಿಜ್ವಾನ್‌ ಅರ್ಷದ್‌ ಅವರನ್ನು ಕೂರಿಸಿಕೊಂಡಿದ್ದರು.

ಹಿಜಾಬ್‌ಗೆ ಅವಕಾಶ ನೀಡಿದಂತೆ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಧರಿಸಲು ಅನುಮತಿಸಲಾಗು ತ್ತದೆಯೇ ಎಂದು ಪತ್ರಕರ್ತರು ಪದೇ ಪದೇ ಪ್ರಶ್ನಿಸಿದಾಗ ಸಚಿವರು ಉತ್ತರ ನೀಡಲಾಗದೆ ಮುಜುಗರ ಅನುಭವಿಸಬೇಕಾಯಿತು.

ಸರ್ಕಾರಕ್ಕೆ ಉತ್ತರ ನೀಡಲಾಗದ ವಿವಾದವನ್ನು ಅಕಾಲಿಕವಾಗಿ ಕೆಣಕಿರುವ ಬಗ್ಗೆ ಕಾಂಗ್ರೆಸ್‌‍ನಲ್ಲಿ ತೀವ್ರ ಅಸಮಾಧಾನಗಳಿವೆ. ಸಚಿವ ಜಮೀರ್‌ ಅಹಮದ್‌ಖಾನ್‌ ಅವರ ನಾಯಕತ್ವವನ್ನು ಪುನರ್‌ ಸ್ಥಾಪಿಸಲು ಇಂತಹ ದುಬಾರಿ ವಿವಾದಕ್ಕೆ ಸರ್ಕಾರ ಕೈಹಾಕಬೇಕಿರಲಿಲ್ಲ ಎಂಬ ಆಕ್ರೋಶಗಳು ಕೇಳಿ ಬರುತ್ತಿವೆ.

ಜಿಬಿಎ, ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯತ್‌ ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲೇ ಕೋಮು ಪ್ರಚೋದಿತ ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಕಿರಲಿಲ್ಲ ಎಂದು ಹಿರಿಯ ನಾಯಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಪ್ರಣಾಳಿಕೆಯಲ್ಲಿ ನೀಡಿದ್ದ ಬಹಳಷ್ಟು ಭರವಸೆಗಳನ್ನು ಇನ್ನೂ ಸರ್ಕಾರ ಈಡೇರಿಸಿಲ್ಲ. ಎಲ್ಲವನ್ನು ಬಿಟ್ಟು ಹಿಜಾಬ್‌ ಧರಿಸಲು ಅನುಮತಿಸುವ ತುರ್ತು ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಸದ್ಯಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಇದೆೆ. ರಾಜಕೀಯ ಚರ್ಚೆಗಳು ಬಿರುಸು ಪಡೆದರೂ ಶೈಕ್ಷಣಿಕ ಚಟುವಟಿಕೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಮುಂದಿನ ತಿಂಗಳು ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತಿದ್ದಂತೆ ಈ ವಿವಾದ ಗೊಂದಲದ ಪರಿಸ್ಥಿತಿ ಸೃಷ್ಟಿಸಬಹುದು ಎಂದು ಆತಂಕ ವ್ಯಕ್ತವಾಗಿದೆ.

2022ರಲ್ಲಿನ ಆದೇಶವನ್ನು ಪ್ರಶ್ನಿಸಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿ ಹಿಜಾಬ್‌ ನಿಷೇಧವನ್ನು ಎತ್ತಿ ಹಿಡಿಯಲಾಗಿತ್ತು. ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದಾಗ, ಭಿನ್ನ ತೀರ್ಪು ಬಂದಿದೆ. ಒಬ್ಬ ನ್ಯಾಯಾಧೀಶರು ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದರೆ, ಮತ್ತೊಬ್ಬರು ಹಿಜಾಬ್‌ ನಿಷೇಧ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದಂತೆ ಎಂದು ವ್ಯಾಖ್ಯಾನಿಸಿದ್ದಾರೆೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ. ಅಲ್ಲಿ ಇನ್ನೂ ವಿಚಾರಣೆ ಬಾಕಿಯಿದ್ದು, ತೀರ್ಪು ಹೊರ ಬಿದ್ದಿಲ್ಲ.

ಈ ಹಂತದಲ್ಲಿ ರಾಜ್ಯ ಸರ್ಕಾರ ಹಿಜಾಬ್‌-ತಲೆವಸ್ತ್ರ, ಪೇಟ-ಟರ್ಬನ್‌, ಜನಿವಾರ-ಪವಿತ್ರದಾರ, ಶಿವದಾರ, ರುದ್ರಾಕ್ಷಿ ಹಾಗೂ ಇತರ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧರಿತ ಸಂಕೇತಗಳ ಬಳಕೆಗೆ ಅನುಮತಿಸಿ ಆದೇಶ ಹೊರಡಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಕೆಲವು ಸಚಿವರ ವ್ಯಕ್ತಿಗತ ಅಸ್ತಿತ್ವ ಉಳಿವಿಗಾಗಿ ಹಿಜಾಬ್‌ ವಿವಾದಕ್ಕೆ ನೀರೆರೆಯಲಾಗಿದೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

RELATED ARTICLES

Latest News