ಬೆಂಗಳೂರು,ಜೂ.15- ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ಪರಿಸರ ಹೋರಾಟ ಕರ್ನಾಟಕ ಗಡಿಯಲ್ಲಿ ಕೊನೆಗೊಳ್ಳುವ ರಾಜಕೀಯ ನಾಟಕವೇ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ವ್ಯಂಗ್ಯಭರಿತವಾಗಿ ಪ್ರಶ್ನೆ ಮಾಡಿದ್ದಾರೆ.
ದೇಶದಾದ್ಯಂತ ಪುಕ್ಕಟೆ ಪ್ರಚಾರಕ್ಕಾಗಿ ಕ್ಷಣಾರ್ಧದಲ್ಲಿ ಪರಿಸರ ಹೋರಾಟಗಾರರಾಗಿ ಮಾರ್ಪಡುವ ರಾಹುಲ್ ಗಾಂಧಿ ನಮ್ಮ ಬಿಡದಿಯಲ್ಲಿ ಸಾವಿರಾರು ಎಕರೆ ಫಲವತ್ತಾದ ಭೂಮಿ, ಲಕ್ಷಾಂತರ ಮರಗಳು ಕಮಿಷನ್ ಮಾಸ್ಟರ್ ಡಿ.ಕೆ ಶಿವಕುಮಾರ್ ಅವರ ರಿಯಲ್ ಎಸ್ಟೇಟ್ ಮಾಫಿಯಾಗೆ ಬಲಿಯಾಗುತ್ತಿದ್ದರೂ ತುಟಿಕ್ ಪಿಟಿಕ್ ಎನ್ನುತ್ತಿಲ್ಲ ಎಂದು ವಾಗ್ದಳಿ ನಡೆಸಿದ್ದಾರೆ.
ಮುಂಬೈನ ಆರೇ ಕಾಲೋನಿಯಲ್ಲಿ ಮರಗಳ ಹೆಸರಿನಲ್ಲಿ ಪ್ರತಿಭಟನೆ, ಕಣ್ಣೀರು ಮತ್ತು ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ. ಗ್ರೇಟ್ ನಿಕೋಬಾರ್ ಯೋಜನೆಗೆ ನೈಸರ್ಗಿಕ ಪರಂಪರೆಯ ವಿರುದ್ಧದ ಮಹಾಪರಾಧ ಎಂಬ ಬಿರುದು.ಆದರೆ ಕರ್ನಾಟಕದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿರುವಾಗ ಪರಿಸರ ಪ್ರೇಮ ಎಲ್ಲಿಗೆ ಮಾಯವಾಗುತ್ತದೆ? ಎಂದು ಪ್ರಶ್ನೆಸಿದ್ದಾರೆ.
ಬೆಂಗಳೂರು ನಗರದ ಹಿತ್ತಲಲ್ಲೇ, ಕಮಿಷನ್ ಮಾಸ್ಟರ್ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ 9 ಗ್ರಾಮಗಳಲ್ಲಿ ಸುಮಾರು ಎರಡು ಲಕ್ಷ ಮರಗಳನ್ನು ಕಡಿಯಲು ಅಂತಿಮ ಅಧಿಸೂಚನೆ ಹೊರಡಿಸಿದೆ.ಇದು ಎಐ ಟೌನ್‌ಶಿಪ್ ಅಲ್ಲ.ಇದು ಕಾಂಗ್ರೆಸ್ ರಿಯಲ್ ಎಸ್ಟೇಟ್ ಟೌನ್‌ಶಿಪ್!ಈ ಪರಿಸರ ಹತ್ಯೆಯ ಪ್ರಮಾಣವನ್ನು ನೋಡಿ.
83,536 ಅಡಿಕೆ ಮರಗಳು ಕೊಡಲಿಗೆ ಬಲಿ . 87,903 ತೆಂಗಿನ ಮರಗಳು ಸಂಪೂರ್ಣ ನಾಶ. 12,550 ಮಾವಿನ ಮರಗಳು ನೆಲಸಮ. ಸಾವಿರಾರು ಎಕರೆ ಬಹುಬೆಳೆ ಕೃಷಿಭೂಮಿ ವಶಪಡಿಸಿಕೊಳ್ಳುವ ಯೋಜನೆ.ರಾಗಿ, ಭತ್ತ, ತೊಗರಿ, ಕಡಲೆ, ಜೋಳ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿರುವ ರೈತರ ಬದುಕನ್ನೇ ಕಸಿದುಕೊಳ್ಳುವ ಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರೇ,ಇದೀಗ ನಿಮ ಪರಿಸರದ ಭಾಷಣಗಳು ಎಲ್ಲಿವೆ? ಬೇರೆ ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳು ಪರಿಸರ ವಿರೋಧಿ ಅಪರಾಧ ಆಗಿದ್ದರೆ, ಕರ್ನಾಟಕದಲ್ಲಿ ಎರಡು ಲಕ್ಷ ಮರಗಳ ಮಾರಣಹೋಮ ಮಾತ್ರ ಅಭಿವೃದ್ಧಿಯೇ? ಕಾಂಗ್ರೆಸ್‌ಗೆ ಪರಿಸರ ಸಂರಕ್ಷಣೆ ಎಂಬುದು ಸಿದ್ಧಾಂತವೂ ಅಲ್ಲ, ಬದ್ಧತೆಯೂ ಅಲ್ಲ.ಅದು ಕೇವಲ ರಾಜಕೀಯ ಬೂಟಾಟಿಕೆ, ಮೊಸಳೆ ಕಣ್ಣೀರು ಎಂದು ವ್ಯಂಗ್ಯವಾಡಿದ್ದಾರೆ.
ಪ್ರತಿಭಟನೆಗಳಿಗೆ, ಪತ್ರಿಕಾಗೋಷ್ಠಿಗಳಿಗೆ, ಟಿವಿ ಹೇಳಿಕೆಗಳಿಗೆ ಮತ್ತು ರಾಜಕೀಯ ಲಾಭಕ್ಕೆ ಬೇಕಾದಾಗ ಮಾತ್ರ ಧರಿಸುವ ಮುಖವಾಡ.ಭೂ ಮಾಫಿಯಾ ಮತ್ತು ರಿಯಲ್ ಎಸ್ಟೇಟ್ ಹಿತಾಸಕ್ತಿಗಳ ಕರೆ ಬಂದಾಗ ಆ ಮುಖವಾಡವನ್ನು ಬಿಸಾಡಲಾಗುತ್ತದೆ. ಈ ಯೋಜನೆ ಬೆಂಗಳೂರಿನ ಹಸಿರು ಶ್ವಾಸಕೋಶದ ಮೇಲಿನ ನೇರ ದಾಳಿ.ಇದು ರೈತರ ಬದುಕಿನ ಮೇಲಿನ ದ್ರೋಹ.
ಇದು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಭಾರೀ ಭೂಗಳ್ಳತನ ಎಂದು ಸರ್ಕಾರದ ವಿರುದ್ದ ಟೀಕಾಪ್ರಹಾರ ನಡೆಸಿದ್ದಾರೆ. ಬಿಜೆಪಿ ಬಿಡದಿಯ ರೈತರ ಜೊತೆ ದೃಢವಾಗಿ ನಿಂತಿದೆ. ಕಾಂಗ್ರೆಸ್‌ನ ಈ ರಿಯಲ್ ಎಸ್ಟೇಟ್ ಸರ್ಕಾರ ಕರ್ನಾಟಕದ ಪರಿಸರವನ್ನು ಹಾಗೂ ರೈತರ ಬದುಕನ್ನು ಬಲಿಕೊಟ್ಟು ರಾಜಕೀಯ ಲಾಭ ಪಡೆಯಲು ನಾವು ಎಂದಿಗೂ ಅವಕಾಶ ನೀಡುವುದಿಲ್ಲ.ರಾಹುಲ್ ಗಾಂಧಿಯವರೇ, ಕರ್ನಾಟಕದ ಜನತೆಗೆ ಉತ್ತರ ಕೊಡಿ.ಬಿಡದಿಯ ರೈತರಿಗೆ ಉತ್ತರ ಕೊಡಿ.ನಿಮ ಪರಿಸರ ಪ್ರೇಮ ಕರ್ನಾಟಕದ ಗಡಿಯಲ್ಲೇ ಏಕೆ ಕೊನೆಗೊಳ್ಳುತ್ತದೆ? ಎಂದು ತರಾಟೆಗೆತೆಗೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸರೇ ಕಳ್ಳರು!ಈ ಹಿಂದೆಯೇ ಡ್ರಗ್‌್ಸ ಮಾರಾಟ, ದರೋಡೆ ಮೊದಲಾದ ಪ್ರಕರಣಗಳಲ್ಲಿ ಶಾಮೀಲಾದ ರಾಜ್ಯದ 124 ಪೊಲೀಸರು ಅಮಾನತುಗೊಂಡಿರುವುದು ಇಡೀ ಗೃಹ ಇಲಾಖೆಗೆ ನಾಚಿಕೆಗೇಡಿನ ಸಂಗತಿ. ಅಂತಹ ಇಲಾಖೆಯ ಹೊಣೆಯನ್ನು ಸಚಿವ ಪ್ರಿಯಾಂಕ ಖರ್ಗೆ ವಹಿಸಿಕೊಂಡ ನಂತರ ಇಲಾಖೆಯ ಮಾನ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಹರಾಜಾಗುತ್ತಿದೆ. ವರದಕ್ಷಿಣೆ ಕಿರುಕುಳ ಪ್ರಕರಣದ ತನಿಖೆಗೆ ರಾಜಸ್ತಾನಕ್ಕೆ ತೆರಳಿದ್ದ ಎಚ್ ಎಎಲ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಲಂಚ ಪಡೆಯುವಾಗ ಅಲ್ಲಿನ ಎಸಿಬಿ ಬಳಿ ಸಿಕ್ಕಿಬಿದ್ದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಆರ್ ಎಸ್ ಎಸ್ ಸ್ ಗೆ ನಿಯಂತ್ರಣ ಹೇರಲು, ಧರ್ಮಸ್ಥಳದ ಬುರುಡೆ ಪ್ರಕರಣದ ಬಗ್ಗೆ ಚರ್ಚೆ ನಡೆಸುವ ಬದಲು, ಪೊಲೀಸ್ ಇಲಾಖೆಯಲ್ಲಿ ಶಿಸ್ತು ತರಲು ಸಭೆ ನಡೆಸಿದ್ದರೆ ರಾಜ್ಯದ ಕಾನೂನು ವ್ಯವಸ್ಥೆ ಈ ರೀತಿ ನಗೆಪಾಟಲಿಗೀಡಾಗುತ್ತಿರಲಿಲ್ಲ. 10 ರೂಪಾಯಿ ಲಂಚ ಕೇಳಿದರೂ ಕರೆ ಮಾಡಿ ಎನ್ನುವ ಸಿಎಂ ಡಿ.ಕೆ ಶಿವಕುಮಾರ್ ಅವರೇ, ನಿಮ ಸರ್ಕಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿರುವಾಗ ಜನರು ದೂರುಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಅಶೋಕ್ ಪ್ರಶ್ನೆಸಿದ್ದಾರೆ.
