ಬೆಂಗಳೂರು,ಮೇ 7- ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳನ್ನು ತಿದ್ದಿರುವ ಅನುಮಾನವಿದ್ದು, ಈ ಬಗ್ಗೆ ನ್ಯಾಯಯುತ ತನಿಖೆಯಾಗಬೇಕು ಎಂದು ಮಾಜಿ ಶಾಸಕ ಟಿ.ಡಿ.ರಾಜೇಗೌಡ ಕೇಂದ್ರ ಚುನಾವಣಾ ಆಯೋಗವನ್ನು ಆಗ್ರಹಿಸಿದರು.
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್‌ರವರಿಗೆ ಈ ಸಂಬಂಧ ಇಂದು ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023 ರ ಮೇ 13 ರಂದು ನಡೆದ ಮತ ಎಣಿಕೆ ಸಂದರ್ಭದಲ್ಲಿ ಮಾನ್ಯವಾಗಿದ್ದ ಅಂಚೆ ಮತಪತ್ರಗಳು, ಮರು ಎಣಿಕೆ ಸಂದರ್ಭದಲ್ಲಿ ಅಮಾನ್ಯವಾಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ವಿಚಾರದಲ್ಲಿ ಸತ್ಯಾಂಶ ಹೊರಬರಲು ನ್ಯಾಯಯುತ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಮತ ಎಣಿಕೆ ಸಂದರ್ಭದಲ್ಲಿ ಹಾಜರಿದ್ದರು. ಆಗ ಯಾವುದೇ ಆಕ್ಷೇಪ ವ್ಯಕ್ತಪಡಿಸದೆ ಎಲ್ಲಾ ಏಜೆಂಟರು ಸಹಿ ಮಾಡಿದ್ದಾರೆ. ಆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನನ್ನನ್ನು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದರು.
ಆ ನಂತರ ಬಿಜೆಪಿ ಅಭ್ಯರ್ಥಿಯಾಗಿದ್ದ ಶಾಸಕ ಡಿ.ಎನ್.ಜೀವರಾಜ್ ಅವರು ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದರು. ಆ ಆರೋಪಗಳು ನ್ಯಾಯಾಲಯದಲ್ಲಿ ತಿರಸ್ಕೃತವಾಗಿವೆ. ರಾಜ್ಯ ಹೈಕೋರ್ಟ್ ಅಮಾನ್ಯವಾಗಿದ್ದ 279 ಅಂಚೆ ಮತಗಳು ಸೇರಿದಂತೆ ಅಂಚೆ ಮತಗಳ ಮರು ಎಣಿಕೆಗೆ ಸೂಚಿಸಿತ್ತು.
ಮರು ಎಣಿಕೆ ಸಂದರ್ಭದಲ್ಲಿ ಅಂಚೆ ಮತಪತ್ರಗಳಿದ್ದ ಟ್ರಂಕ್ ತೆರೆದಿತ್ತು. ಸೀಲ್ ಕೂಡಾ ತೆರೆದಿತ್ತು ಎಂದು ಅವರು ಆರೋಪಿಸಿದರು.ಈ ರೀತಿ ಅನ್ಯಾಯ ಜಗತ್ತಿನಲ್ಲಿ ಎಲ್ಲಿಯೂ ಆಗಬಾರದು, ಯಾರಿಗೂ ಆಗಬಾರದು. ನನಗೆ ಆಯೋಗದ ಮೇಲೆ ನಂಬಿಕೆಯಿದೆ. ಈ ವಿಚಾರದಲ್ಲಿ ಸರಿಯಾದ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಆಗಬೇಕು.
ತಿದ್ದಿರುವ ಅನುಮಾನ ಇರುವ ಮತಪತ್ರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಬೇಕು. ಚುನಾವಣಾ ಆಯೋಗವನ್ನು ಬಳಸಿಕೊಂಡಿರುವ ಅನುಮಾನವೂ ಇದೆ. ತನಿಖೆಯಾದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ ಅವರು, ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ನನ್ನ ಮನವಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸುವುದಾಗಿ ಹೇಳಿದ್ದಾರೆ ಎಂದರು.
ರಾಜೇಗೌಡ ಅವರ ಏಜೆಂಟ್ ಆಗಿದ್ದ ರಾಜ್ಯ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 2023 ರ ಮೇ 13 ರಂದು ನಡೆದ ಮತ ಎಣಿಕೆ ಸಂದರ್ಭದಲ್ಲೂ ನಾನು ರಾಜೇಗೌಡರ ಚುನಾವಣಾ ಏಜೆಂಟ್ ಆಗಿದ್ದೆ. ಆಗ 201 ಮತಗಳ ಅಂತರದಿಂದ ರಾಜೇಗೌಡರು ಜಯ ಗಳಿಸಿದ್ದರು. ನ್ಯಾಯಾಲಯದ ಆದೇಶದಂತೆ ಅಂಚೆ ಮತಗಳ ಮರು ಎಣಿಕೆ ಮಾಡಿದ ಸಂದರ್ಭದಲ್ಲಿ ತಿದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇಂಕ್ ವ್ಯತ್ಯಾಸವಿದೆ. ಹೆಬ್ಬೆಟ್ಟು ಹಾಕಿರುವುದು, ಟಿಕ್ ಮಾಡಿರುವುದು ಕಂಡುಬಂದಿದೆ. ಇದರಿಂದ ಮತ ಡಕಾಯಿತಿ ಆಗಿದೆ ಎಂದು ಆರೋಪಿಸಿದರು.2023 ರಲ್ಲಿ ಮತ ಎಣಿಕೆ ನಡೆದಾಗ ಅಭ್ಯರ್ಥಿಗಳ ಚುನಾವಣಾ ಏಜೆಂಟರುಗಳು ಆಕ್ಷೇಪವೆತ್ತಿರಲಿಲ್ಲ. ಆನಂತರ ಆರೋಪ ಮಾಡಲಾಗಿದೆ. ಅಂಚೆ ಮತಪತ್ರ ತಿದ್ದಿರುವ ಬಗ್ಗೆ ತನಿಖೆಯಾಗಬೇಕು. ಆದರೆ ತನಿಖೆಯನ್ನು ತಡೆಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.
ಚುನಾವಣಾ ಆಯೋಗವು ಮತ ಎಣಿಕೆಯನ್ನು ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಯಲ್ಲಿ ಮಾಡಬೇಕು. ನಾವು ನ್ಯಾಯ ದೇವತೆ ಎದುರು ಹಾಗೂ ಧರ್ಮಕ್ಷೇತ್ರಗಳಲ್ಲಿ ನ್ಯಾಯ ಕೇಳುತ್ತೇವೆ. ಈ ವಿಚಾರದಲ್ಲಿ ಗಂಭೀರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯೆ ಆರತಿಕೃಷ್ಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
