Sunday, April 19, 2026
Homeರಾಜ್ಯಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸಿದ ಸುಪ್ರೀಂ ನ್ಯಾಯಮೂರ್ತಿಗಳು : ಸಿಎಂಗೆ ಅಶೋಕ್‌ ಎಚ್ಚರಿಕೆ

ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸಿದ ಸುಪ್ರೀಂ ನ್ಯಾಯಮೂರ್ತಿಗಳು : ಸಿಎಂಗೆ ಅಶೋಕ್‌ ಎಚ್ಚರಿಕೆ

R Ashok warns CM

ಬೆಂಗಳೂರು,ಏ.19- ಇನ್ನಾದರೂ ಆಡಳಿತ ಯಂತ್ರವನ್ನು ಎಚ್ಚರಿಸಿ ನ್ಯಾಯಾಂಗಕ್ಕೆ ಶಕ್ತಿ ತುಂಬುವ ಕೆಲಸ ಮಾಡಿ. ಇಲ್ಲದಿದ್ದರೆ ನಿಮ್ಮ ಈ ವಿಫಲ ಮತ್ತು ಸಂವಿಧಾನ ವಿರೋಧಿ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಶಾಸ್ತಿ ಮಾಡುವುದು ನಿಶ್ಚಿತ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಾರ್ವಜನಿಕ ವೇದಿಕೆಯಲ್ಲಿ, ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳೇ ರಾಜ್ಯ ಕಾಂಗ್ರೆಸ್‌‍ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸಿರುವುದು ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕಕ್ಕೆ ಆದ ಐತಿಹಾಸಿಕ ಅಪಮಾನ ಎಂದು ಕಿಡಿಕಾರಿದ್ದಾರೆ.

ಮಾತೆತ್ತಿದರೆ ಸಂವಿಧಾನದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ ಸಮುಖದಲ್ಲೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದ್ದಾರೆ ಎಂದರೆ ನಿಮ ಆಡಳಿತದ ದಕ್ಷತೆ ಯಾವ ಪಾತಾಳಕ್ಕೆ ಕುಸಿದಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಇದು ಕೇವಲ ಟೀಕೆಯಲ್ಲ, ಸಂವಿಧಾನದ ಹೆಸರಲ್ಲಿ ನೀವು ನಡೆಸುತ್ತಿರುವ ದುರಾಡಳಿತಕ್ಕೆ ನ್ಯಾಯಾಂಗವೇ ನೀಡಿದ ಕಪಾಳಮೋಕ್ಷ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ನ್ಯಾಯಾಂಗ ವ್ಯವಸ್ಥೆಯನ್ನು ಉಸಿರುಗಟ್ಟಿಸುತ್ತಿರುವ ನಿಮ ನಡೆಯಿಂದಾಗಿ ಇಂದು ಸಾಕ್ಷಾತ್‌ ನ್ಯಾಯದೇವತೆಯೇ ಕಣ್ಣೀರು ಹಾಕುವಂತಾಗಿದೆ. 2023 ರಲ್ಲಿ 17 ಲಕ್ಷವಿದ್ದ ಬಾಕಿ ಪ್ರಕರಣಗಳು ಇಂದು 22 ಲಕ್ಷದ ಗಡಿ ದಾಟಿದ್ದರೂ ನಿಮ ಸರ್ಕಾರ ಮಾತ್ರ ಕುಂಭಕರ್ಣ ನಿದ್ರೆಯಲ್ಲಿ ಮುಳುಗಿದೆ.

ನ್ಯಾಯಾಧೀಶರು ಹಾಗೂ ಸರ್ಕಾರಿ ಅಭಿಯೋಜಕರ ನೇಮಕಾತಿ ಪ್ರಸ್ತಾವನೆಗಳನ್ನು ಪದೇ ಪದೇ ಕಡಿತಗೊಳಿಸುವ ಅಥವಾ ಕಸದ ಬುಟ್ಟಿಗೆ ಎಸೆಯುವ ಮೂಲಕ ನೀವು ನ್ಯಾಯಾಂಗದ ಸ್ವಾಯತ್ತತೆಯನ್ನು ಹತ್ತಿಕ್ಕಲು ಸಂಚು ರೂಪಿಸುತ್ತಿದ್ದೀರಾ? ಲಕ್ಷಾಂತರ ಜನ ಸಾಮಾನ್ಯರು ನ್ಯಾಯಕ್ಕಾಗಿ ಕೋರ್ಟ್‌ ಮೆಟ್ಟಿಲು ಹತ್ತಿ ಅಲೆಯುತ್ತಿದ್ದರೆ, ನಿಮ ಸರ್ಕಾರ ನ್ಯಾಯಾಂಗವನ್ನು ದುರ್ಬಲಗೊಳಿಸುವ ಮೂಲಕ ಜನರಿಗೆ ನ್ಯಾಯವನ್ನು ನಿರಾಕರಿಸುತ್ತಿದೆ ಎಂದು ಟೀಕಿಸಿದ್ದಾರೆ.

ನ್ಯಾಯ ವಿಳಂಬ ಎಂದರೆ ಅದು ನ್ಯಾಯ ನಿರಾಕರಣೆಯೇ ಸರಿ ಎನ್ನುವ ಸತ್ಯ ನಿಮಗೂ ತಿಳಿದಿದೆ. ಆದರೆ ಸಂವಿಧಾನದ ಸಂರಕ್ಷಕರು ಎಂದು ಬೊಬ್ಬೆ ಹೊಡೆಯುವ ನೀವು, ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗದ ಬೆನ್ನೆಲುಬು ಮುರಿಯಲು ಹೊರಟಿರುವುದು ಖಂಡನೀಯ ಎಂದು ಅಶೋಕ್‌ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದ್ದಾರೆ.

RELATED ARTICLES

Latest News