Homeರಾಜ್ಯಬೆಂಗಳೂರಿನ ವೀರಸಂದ್ರ ಸಿಗ್ನಲ್‌ ಬಳಿ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ಹಣ ಪತ್ತೆ

ಬೆಂಗಳೂರಿನ ವೀರಸಂದ್ರ ಸಿಗ್ನಲ್‌ ಬಳಿ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ಹಣ ಪತ್ತೆ

ಬೆಂಗಳೂರು,ಆ.21- ನಗರದ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌‍ ಠಾಣಾ ವ್ಯಾಪ್ತಿಯ ವೀರಸಂದ್ರ ಸಿಗ್ನಲ್‌ ಬಳಿ ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಬರೋಬ್ಬರಿ 9 ಕೋಟಿ ರೂಪಾಯಿ ನಗದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಈ ಹಣ ತಮಿಳುನಾಡಿನ ತೂತುಕುಡಿಯ ಸಿಂಧು ಜ್ಯುವೆಲ್ಲರ್ಸ್‌ ಮಾಲೀಕ ಸಚಿನ್‌ ಎಂಬುವವರಿಗೆ ಸೇರಿದ್ದು ಎಂದು ತನಿಖೆಯಿಂದ ತಿಳಿದುಬಂದಿದೆ. ಐಟಿ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಆ.18 ರಂದು ವೀರಸಂದ್ರ ಸಿಗ್ನಲ್‌ ಬಳಿ ಈ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ. ಹಣ ಹಾಗೂ ಕಾರಿನಲ್ಲಿದ್ದ ಸಚಿನ್‌ ಎಂಬುವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಆದಾಯ ತೆರಿಗೆ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆ ಮುಂದುವರೆಸಿದ ಐಟಿ ಅಧಿಕಾರಿಗಳು ಸಚಿನ್‌ ಅವರ ನಿವಾಸದ ಮೇಲೆ ನಡೆಸಿದ ಶೋಧದ ವೇಳೆ ಹೆಚ್ಚುವರಿಯಾಗಿ 1.3 ಕೋಟಿ ರೂ. ನಗದು ಸಹ ಪತ್ತೆಯಾಗಿದೆ. ಒಟ್ಟು 10.3 ಕೋಟಿ ರೂ.ಗೂ ಅಧಿಕ ನಗದಿನ ಮೂಲ, ಸಾಗಣೆಯ ಉದ್ದೇಶದ ಬಗ್ಗೆ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಇದು ಹವಾಲಾ ಹಣ ಇರಬಹುದು ಎಂಬ ಶಂಖೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೀವ್ರ ವಿಚಾರಣೆ ಮತ್ತು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ 9 ಕೋಟಿ ರೂ. ಹಣದ ಜೊತೆಗೆ ಮನೆಯಲ್ಲಿ ಸಿಕ್ಕಿರುವ 1.3 ಕೋಟಿ ರೂ. ತನಿಖೆಯ ವ್ಯಾಪ್ತಿಗೆ ಬಂದಿರುವುದರಿಂದ, ಎರಡೂ ಮೊತ್ತಗಳ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನೂ ಐಟಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಪ್ರಮಾಣದ ದಾಖಲೆರಹಿತ ನಗದು ಪತ್ತೆಯಾಗುತ್ತಿರುವುದು ಇದೇ ಮೊದಲಲ್ಲ. ಚುನಾವಣಾ ಸಂದರ್ಭಗಳಲ್ಲಿಯೂ ಇಂತಹ ಪ್ರಕರಣಗಳು ಹಲವು ಬಾರಿ ಬೆಳಕಿಗೆ ಬಂದಿವೆ.ಈ 10.3 ಕೋಟಿ ರೂ.ಗೆ ಸಂಬಂಧಿಸಿದಂತೆ ಮುಂದಿನ ಹೆಚ್ಚಿನ ವಿವರಗಳು ಐಟಿ ಅಧಿಕಾರಿಗಳ ತನಿಖೆಯ ಬಳಿಕ ಹೊರಬರಬೇಕಿದೆ.

RELATED ARTICLES
spot_img

Latest News