Thursday, May 14, 2026
Homeರಾಜ್ಯಪ್ರಧಾನಿ ಭೇಟಿ ವೇಳೆ ಭದ್ರತಾ ವೈಫಲ್ಯ : ಕೆಲವು ಹಿರಿಯ ಪೊಲೀಸ್‌‍ ಅಧಿಕಾರಿಗಳ ತಲೆದಂಡ ಸಾಧ್ಯತೆ

ಪ್ರಧಾನಿ ಭೇಟಿ ವೇಳೆ ಭದ್ರತಾ ವೈಫಲ್ಯ : ಕೆಲವು ಹಿರಿಯ ಪೊಲೀಸ್‌‍ ಅಧಿಕಾರಿಗಳ ತಲೆದಂಡ ಸಾಧ್ಯತೆ

Security lapse during PM's visit: Some senior police officers likely to be suspended

ಬೆಂಗಳೂರು,ಮೇ11- ಪ್ರಧಾನಿ ನರೇಂದ್ರಮೋದಿ ಅವರು ನಗರಕ್ಕೆ ಭಾನುವಾರ ಆಗಮಿಸಿದ ವೇಳೆ ಭದ್ರತಾ ವೈಫಲ್ಯ ಉಂಟಾಗಿರುವ ಹಿನ್ನೆಲೆಯಲ್ಲಿ ಕೆಲವು ಹಿರಿಯ ಪೊಲೀಸ್‌‍ ಅಧಿಕಾರಿಗಳ ತಲೆದಂಡವಾಗುವ ಸಾಧ್ಯತೆ ಇದೆ.

ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಇದು ಪ್ರಧಾನಿಯನ್ನು ಗುರಿಯಾಗಿಟ್ಟುಕೊಂಡು ನಡೆಸಿರುವ ವ್ಯವಸ್ಥಿತ ಸಂಚು ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಹಿರಿಯ ಅಧಿಕಾರಿಗಳನ್ನು ಅಮಾನತುಪಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ರಾಜ್ಯ ಗುಪ್ತಚರ ವಿಭಾಗದ ಎಡಿಜಿಪಿ ಲಾಬೂರಾಮ್‌, ಬೆಂಗಳೂರು ದಕ್ಷಿಣ ಜಿಲ್ಲಾ ಎಸ್ಪಿ ಶ್ರೀನಿವಾಸ್‌‍ ಗೌಡ ಸೇರಿದಂತೆ ಪ್ರಧಾನಿಗಳ ಭದ್ರತಾ ಉಸ್ತುವಾರಿ ವಹಿಸಿದ್ದ ಪೊಲೀಸ್‌‍ ಅಧಿಕಾರಿಗಳಿಗೆ ಅಮಾನತು ಶಿಕ್ಷೆ ಕಾದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಈಗಾಗಲೇ ಜಿಲಿಟಿನ್‌ ಕಡ್ಡಿ ಪತ್ತೆಯಾದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ರಾಷ್ಟ್ರೀಯ ಭದ್ರತಾ ದಳ(ಎನ್‌ಎಸ್‌‍ಜಿ), ಸಂಶೋಧನೆ ಮತ್ತು ವಿಶ್ಲೇಷಣೆ(ರಾ) ಸೇರಿದಂತೆ ವಿವಿಧ ಕೇಂದ್ರೀಯ ಸಂಸ್ಥೆಗಳು ತನಿಖೆಯನ್ನು ಕೈಗೆತ್ತಿಕೊಂಡಿವೆ.

ಪ್ರಕರಣ ಸಂಬಂಧ 3 ತಂಡಗಳು ಪ್ರತ್ಯೇಕಾಗಿ ಜಿಲಿಟಿನ್‌ ಕಡ್ಡಿ ಹಾಗೂ ಬೆಂಕಿ ಪೊಟ್ಟಣ ಪತ್ತೆಯಾದ ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲೀಪುರ ಸಮೀಪವಿರುವ ಒಡೇರಹಳ್ಳಿ ಕೆರೆಗೆ ಭೇಟಿ ಕೊಟ್ಟು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆಯುತ್ತಿದೆ.

ಪೊಲೀಸರ ವಶದಲ್ಲಿರುವ ಸಂಶಯಾಸ್ಪದ ವ್ಯಕ್ತಿ ಯಾವುದಾದರು ಭಯೋತ್ಪಾದಕ ಸಂಘಟನೆಗೆ ಸೇರಿದವನೇ? ಈತನಿಗೆ ಯಾರಾದರೂಊ ಪ್ರಚೋದನೆ ನೀಡಿದ್ದರೆ? ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳ ಸಂಪರ್ಕವಿದೆಯೇ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆದಿದೆ.

ಪ್ರಕರಣದಲ್ಲಿ ಪೊಲೀಸರ ಭದ್ರತಾ ವೈಫಲ್ಯದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ತನಿಖಾ ಸಂಸ್ಥೆಗಳು ಹಿರಿಯ ಅಧಿಕಾರಿಗಳ ಅಮಾನತಿಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ.

ಪ್ರಧಾನಿ ಭದ್ರತೆಗೆ ಪೊಲೀಸರು ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ನಿಯೋಜನೆ ಮಾಡಲಾಗಿರುತ್ತದೆ. ಇಷ್ಟು ಭದ್ರತೆ ನಡುವೆಯೇ ಜಿಲಿಟಿನ್‌ ಕಡ್ಡಿ ಪತ್ತೆಯಾಗಿರುವುದು ಪೊಲೀಸರ ವೈಫಲ್ಯವೇ ಎಂದು ಸಂಶಯ ವ್ಯಕ್ತವಾಗಿದೆ.

ಕೋರಮಂಗಲ ಮೂಲದ ವ್ಯಕ್ತಿಯೋರ್ವ ನಗರ ಪೊಲೀಸ್‌‍ ಆಯುಕ್ತರ ಕಚೇರಿಗೆ ದೂರವಾಣಿ ಕರೆ ಮಾಡಿ ಬೆದರಿಕೆವೊಡ್ಡಿದ್ದ. ಇದಕ್ಕೂ ಜಿಲಿಟಿನ್‌ ಕಡ್ಡಿ ಪತ್ತೆಯಾಗಿರುವುದಕ್ಕೂ ಒಂದಕ್ಕೊಂದು ಸಾಮ್ಯತೆ ಇದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಸಿಎಂ ಅಸಮಾಧಾನ:
ಪ್ರಧಾನಿ ನರೇಂದ್ರಮೋದಿ ಅವರ ಭದ್ರತಾ ವೈಫಲ್ಯವಾಗಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್‌ ಕೂಡ ಅಸಮಾಧಾನಗೊಂಡಿದ್ದಾರೆಂದು ತಿಳಿದುಬಂದಿದೆ.

ಶಾಂತಿ ಸುವ್ಯವಸ್ಥೆಗೆ ಹೆಸರಾಗಿ ದೇಶಕ್ಕೆ ಮಾದರಿಯಾಗಿರುವ ಕರ್ನಾಟಕದಲ್ಲಿ ಪೊಲೀಸರ ಭದ್ರತಾ ವೈಫಲ್ಯಕ್ಕೆ ರಾಜ್ಯ ಸರ್ಕಾರಕ್ಕೆ ಕಪ್ಪು ಚುಕ್ಕೆ ಎಂದು ಸಿಎಂ ಹಾಗೂ ಗೃಹಸಚಿವರು ಬೇಸರ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.

ತಪ್ಪಿತಸ್ಥರು ಯಾರೇ ಇದ್ದರೂ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಅಲ್ಲದೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕೆಲವು ಹಿರಿಯ ಅಧಿಕಾರಿಗಳು ಬೇಜಾವಬ್ದಾರಿಯಿಂದ ವರ್ತಿಸಿರುವುದು ಸಾಬೀತಾದರೆ ಅವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆಂದು ತಿಳಿದುಬಂದಿದೆ.

RELATED ARTICLES

Latest News