ಬೆಂಗಳೂರು,ಮೇ 11-ಪ್ರಧಾನಿ ನರೇಂದ್ರ ಮೋದಿಯವರು ಚಿನ್ನದ ಮೇಲೆ ಹೂಡಿಕೆ ಮಾಡಬೇಡಿ, ಖರೀದಿ ಮಾಡಬೇಡಿ ಎಂದು ಕರೆ ಕೊಟ್ಟಿರುವುದನ್ನು ಸ್ವಾಗತಿಸಲಾಗುವುದು ಎಂದು ಕರ್ನಾಟಕ ಜ್ಯೂವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶಿ ಕರೆನ್ಸಿ ಬಳಕೆಯನ್ನು ತಡೆಗಟ್ಟಲು ಪ್ರಧಾನಿಯವರು ಆ ರೀತಿ ಕರೆ ಕೊಟ್ಟಿರಬಹುದು ಎಂದು ಭಾವಿಸುತ್ತೇನೆ. ಅಂದರೆ ಚಿನ್ನದ ಬಿಸ್ಕತ್, ನಾಣ್ಯ ಖರೀಸುವುದು, ಚಿನ್ನದ ಮೇಲೆ ಬಂಡವಾಳ ಹೂಡಿಕೆ ಮಾಡುವುದು, ಇಂತಹುದನ್ನು ನಿಲ್ಲಿಸಿ ಎಂದು ಪ್ರಧಾನಿ ಹೇಳಿರಬಹುದು ಎಂದು ಭಾವಿಸುತ್ತೇನೆ. ಆದರೆ ಮದುವೆ, ನಾಮಕರಣದಂತಹ ಶುಭ ಸಮಾರಂಭಗಳಿಗೆ ಖರೀದಿಸುವ ಬಳಕೆಯ ಆಭರಣ ಚಿನ್ನ ಖರೀದಿಗೆ ಯಾವುದೇ ರೀತಿಯ ತೊಂದರೆ ಅವರ ಹೇಳಿಕೆಯಿಂದ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪೆಟ್ರೋಲ್, ಡೀಸೆಲ್, ಚಿನ್ನವನ್ನು ಹೆಚ್ಚಿನ ರೀತಿಯಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ವ್ಯಾವಹಾರಿಕವಾಗಿ ಡಾಲರ್ ಬಳಕೆ ಮಾಡುವುದರಿಂದ ವಿದೇಶಿ ವಿನಿಮಯದ ರೂಪದಲ್ಲಿ ವಿದೇಶಗಳಿಗೆ ಲಾಭವಾಗುತ್ತದೆ. ಆ ಕಾರಣಕ್ಕೆ ಚಿನ್ನ ಖರೀದಿಸಬಾರದು ಎಂದು ಅವರು ಹೇಳಿರಬಹುದು ಎಂದು ಶರವಣ ವ್ಯಾಖ್ಯಾನಿಸಿದರು.
