ಬೆಂಗಳೂರು, ಫೆ.7- ನಮ ಮೆಟ್ರೋ ಪ್ರಯಾಣದರ ಏರಿಕೆಗೆ ರಾಜ್ಯ ಸರ್ಕಾರವೇ ಒತ್ತಡ ಹೇರಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಸ್ವಯಂ ಚಾಲಿತವಾಗಿ ಮೆಟ್ರೋ ಪ್ರಯಾಣದರ ಏರಿಕೆಯಾಗುವ ಸೂತ್ರ ರೂಪಿಸುವಂತೆ ದರ ನಿಗದಿ ಸಮಿತಿಯನ್ನು ರಾಜ್ಯ ಸರ್ಕಾರ ಕೋರಿದೆ ಎಂದರು.
ದೇಶದ ದೆಹಲಿ, ಮುಂಬೈ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಂದ ಬೆಂಗಳೂರಿನ ನಮ ಮೆಟ್ರೋ ಪ್ರಯಾಣದರ ದುಬಾರಿಯಾಗಿದೆ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ತನ್ನ ಮೇಲಿನ ಹೊರೆಯನ್ನು ಜನರ ಮೇಲೆ ಹೊರಿಸುತ್ತಿದೆ ಎಂದು ಅವರು ಟೀಕಿಸಿದರು.
ಸಾರ್ವಜನಿಕರ ಮಾಹಿತಿಗಾಗಿ ದರ ನಿಗದಿ ಸಮಿತಿಯ ವರದಿಯನ್ನು ನೀಡಿರಲಿಲ್ಲ. ಆ ವರದಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆ ಅಧಿಕಾರಿಗಳೇ ರಾಜ್ಯ ಸರ್ಕಾರ ಆರ್ಥಿಕ ಹೊರೆ ಭರಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮೆಟ್ರೋ ಪ್ರಯಾಣದ ದರ ಹೆಚ್ಚಳ ಮಾಡುವಂತೆ ಪ್ರಸ್ತಾಪಿಸಿದ್ದಾರೆ. 1126 ಮಂದಿ ಪ್ರಯಾಣದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದು, ಶೇ.51ರಷ್ಟು ಮಂದಿ ಮೆಟ್ರೋ ಪ್ರಯಾಣದರ ವಿರೋಧಿಸಿದ್ದಾರೆ ಎಂದರು.
ಪ್ರಯಾಣಿಕರಿಂದಲ್ಲದ ಪಾರ್ಕಿಂಗ್, ಬಾಡಿಗೆ, ಜಾಹೀರಾತು ಮೂಲಕ ಸಂಗ್ರಹಿಸುವ ಆದಾಯ ಕಡಿಮೆಯಾಗಿದ್ದು, ಪ್ರಯಾಣಿಕರಿಂದ ಸಂಗ್ರಹಿಸುವ ಆದಾಯ ಹೆಚ್ಚಳವಾಗಿದೆ. ಶ್ಯಾಡೋ ಕಾಸ್ಟ್ ಸಪೋರ್ಟ್ ಅನ್ನು ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ನಿಲ್ಲಿಸಿದೆ. ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಎಸ್‌ಸಿಎಸ್ ಮುಂದುವರೆಸಲಾಗದು, ವಾರ್ಷಿಕ ಶೇ.5ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕಳೆದ ವರ್ಷ ಶೇ.105ರಷ್ಟು ದುಪ್ಪಟ್ಟು ಮೆಟ್ರೋ ಪ್ರಯಾಣದರ ಪರಿಷ್ಕರಣೆ ಮಾಡಲಾಗಿತ್ತು. ಅಧಿಕಾರಿಗಳು ನೀಡಿರುವ ಮಾಹಿತಿ ನೋಡಿದರೆ, ರಾಜ್ಯ ಸರ್ಕಾರ ಆರ್ಥಿವಾಗಿ ದಿವಾಳಿಯಾಗಿದೆ. ತನ್ನ ಲೋಪ ಮುಚ್ಚಿಕೊಳ್ಳಲು ಜನರನ್ನು ದಾರಿತಪ್ಪಿಸುತ್ತಿದೆ ಎಂದು ಅವರು ಆರೋಪಿಸಿದರು.
ಈ ವಿಚಾರದ ಬಗ್ಗೆ ಜೆಡಿಎಸ್ ವತಿಯಿಂದ ಬೆಂಗಳೂರಿನ ನಾಗರಿಕರಿಗೆ ಅರಿವು ಮೂಡಿಸಲು ಅಭಿಯಾನ ಹಮಿಕೊಳ್ಳಲಾಗುವುದು. ಈ ವಿಚಾರದಲ್ಲಿ ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.
