ಬೆಂಗಳೂರು, ಫೆ.20- ನಾಡಿನ ಶಾಂತಿ-ನೆಮ್ಮದಿ ಭಂಗ ತರುವ ಯಾವುದೇ ಶಕ್ತಿಗಳನ್ನು ಸರ್ಕಾರ ಸಹಿಸುವುದಿಲ್ಲ. ಬಾಗಲಕೋಟೆಯಲ್ಲಿ ಕಲ್ಲು ತೂರಾಟ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ತಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಂದೇಶ ರವಾನಿಸಿರುವ ಅವರು, ಬಾಗಲಕೋಟೆಯಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಸಮಾಜದ ಶಾಂತಿ, ಸೌಹಾರ್ದತೆಗೆ ಮಾರಕ. ಇದನ್ನು ನಾನು ಮತ್ತು ನಮ ಸರ್ಕಾರ ಬಲವಾಗಿ ಖಂಡಿಸುತ್ತೇವೆ ಎಂದಿದ್ದಾರೆ.
ಘಟನೆಯ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಚರ್ಚಿಸಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ, ದುಷ್ಕೃತ್ಯ ಎಸಗಿದ ಪುಂಡರಿಗೆ ಕಾನೂನಿನ ಮೂಲಕ ತಕ್ಕ ಉತ್ತರ ನೀಡುವಂತೆ ಸೂಚನೆ ನೀಡಿದ್ದೇನೆ. ಈಗಾಗಲೇ ಪ್ರಕರಣದ ಸಂಬಂಧ ಕೆಲವು ಆರೋಪಿಗಳನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಘಟನೆಗೆ ಕಾರಣರಾದ ಪ್ರತಿಯೊಬ್ಬರಿಗೂ ಶಿಕ್ಷೆ ನಿಶ್ಚಿತ ಎಂದಿದ್ದಾರೆ.
ನಾಡಿನ ಜನರಿಗೆ ಭಯಮುಕ್ತ, ನೆಮದಿಯ ಬದುಕು ನೀಡುವುದು ನಮ ಮೊದಲ ಆದ್ಯತೆ. ಜನರ ಶಾಂತಿ-ನೆಮದಿಗೆ ಭಂಗ ತರುವ ಯಾವುದೇ ವ್ಯಕ್ತಿ – ಶಕ್ತಿಗಳನ್ನು ನಾವು ಸಹಿಸುವುದಿಲ್ಲ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೂ ಕಿವಿಗೊಡದೆ, ಸಂಯಮದಿಂದ ವರ್ತಿಸಿ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ನಿಷ್ಪಕ್ಷಪಾತವಾಗಿ ಮಾಡಲಿದೆ ಎಂದು ಹೇಳಿದ್ದಾರೆ.
