Sunday, April 12, 2026
Homeರಾಜ್ಯಏಪ್ರಿಲ್‌ ಮೊದಲ ವಾರದ ತನಕ ಬೇಸಿಗೆ ಮಳೆ ಮುಂದುವರಿಕೆ

ಏಪ್ರಿಲ್‌ ಮೊದಲ ವಾರದ ತನಕ ಬೇಸಿಗೆ ಮಳೆ ಮುಂದುವರಿಕೆ

Summer rains to continue till first week of April

ಬೆಂಗಳೂರು,ಮಾ.27- ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಚದುರಿದಂತೆ ಅಲ್ಲಲ್ಲಿ ಬೇಸಿಗೆ ಮಳೆಯಾಗುತ್ತಿದ್ದು, ಏಪ್ರಿಲ್‌ ಮೊದಲ ವಾರದವರೆಗೂ ಮುಂದುವರೆಯುವ ಮುನ್ಸೂಚನೆಗಳಿವೆ.ಆದರೆ ರಾಜ್ಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಭಾರೀ ಮಳೆಯಾಗುವುದಿಲ್ಲ. ಕೆಲವೆಡೆ ಮಾತ್ರ ಸಂಜೆ ಹಾಗೂ ರಾತ್ರಿ ವೇಳೆ ಚದುರಿದಂತೆ ಮಳೆಯಾಗಲಿದೆ. ಮತ್ತೆ ಕೆಲವೆಡೆ ಬಿರುಗಾಳಿ, ಗುಡುಗು, ಸಿಡಿಲು, ಮಿಂಚಿನ ಆರ್ಭಟ, ಆಲಿಕಲ್ಲು ಸೇರಿದ ಮಳೆಯಾಗುವ ಲಕ್ಷಣಗಳು ಕಂಡುಬಂದಿವೆ.

ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 35 ಡಿ.ಸೆ. ಗಿಂತ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ 37-38 ಡಿ.ಸೆ.ನಷ್ಟು ಕಂಡುಬರುತ್ತಿದ್ದು, ಸದ್ಯದಲ್ಲೇ 40 ಡಿ.ಸೆ. ತಲುಪುವ ಸಾಧ್ಯತೆಗಳಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ರಾಜ್ಯಾದ್ಯಂತ ಒಣಹವೆ ಮುಂದುವರೆಯಲಿದೆ. ಬಿಸಿಲಿನ ತೀವ್ರತೆಯು ದಿನದಿಂದ ದಿನಕ್ಕೆ ಹೆಚ್ಚಾಗಲಿದೆ.ಮಧ್ಯಾಹ್ನದ ನಂತರ ಕೆಲವು ಕಡೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹೇಳಿದೆ.

ಈಗಾಗಲೇ ಚಾಮರಾಜನಗರ, ಧಾರವಾಡ, ಗದಗ ಸೇರಿದಂತೆ ಆಲಿಕಲ್ಲು ಸಹಿತ ಮಳೆಯಾಗಿದೆ. ಮುಂಗಾರುಪೂರ್ವ ಮಳೆಯ ಸಂದರ್ಭದಲ್ಲಿ ಗಾಳಿ, ಗುಡುಗು, ಮಿಂಚು, ಸಿಡಿಲಿನ ಆರ್ಭಟ ಸಹಜವಾಗಿದ್ದು, ವ್ಯಾಪಕ ಮಳೆಯಾಗುವುದಿಲ್ಲ. ಮಾರ್ಚ್‌, ಏಪ್ರಿಲ್‌, ಮೇ ತಿಂಗಳಿನಲ್ಲಿ ಬೇಸಿಗೆ ಮಳೆಯಾಗುವುದು ಸಹಜ. ಆದರೆ ಅಲ್ಪಪ್ರಮಾಣದ ಮಳೆಯಾಗುತ್ತದೆ ಎಂದು ಹವಾಮಾನ ತಜ್ಞರ ಅಭಿಪ್ರಾಯವಾಗಿದೆ ಎಂದರು.

ಜನವರಿ 1 ರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದೆ. 11.9 ಮಿ.ಮೀ ವಾಡಿಕೆ ಪ್ರಮಾಣದ ಮಳೆಯಾಗಿದ್ದು, 22.9 ಮಿ.ಮೀ.ನಷ್ಟು ಮಳೆಯಾಗಿದೆ. ಮಾ.1ರಿಂದ ನಿನ್ನೆವರೆಗೂ ಕೂಡ ಅಲ್ಲಲ್ಲಿ ಬಿದ್ದಿರುವ ಮಳೆಯೂ ವಾಡಿಕೆಗಿಂತ ಹೆಚ್ಚಾಗಿದೆ.

7.5 ಮಿ.ಮೀ ವಾಡಿಕೆ ಮಳೆಗೆ 17 ಮಿ.ಮೀ.ನಷ್ಟು ಮಳೆಯಾಗಿದೆ. ಕಳೆದ ಒಂದು ವಾರದಲ್ಲೂ ಕೂಡ ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕಂಡುಬರುತ್ತದೆ. ಆದರೆ ಜನವರಿ, ಫೆಬ್ರವರಿಯಲ್ಲಿ ಬೇಸಿಗೆ ಮಳೆಯು ವಾಡಿಕೆಗಿಂತ ಕಡಿಮೆಯಾಗಿತ್ತು.

ಕಳೆದ ಒಂದು ವಾರದಲ್ಲಿ ದಾವಣಗೆರೆ ಹೊರತುಪಡಿಸಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿದೆ. ಆದರೆ ಉತ್ತರ ಒಳನಾಡಿನಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದೆಲ್ಲಾ ಜಿಲ್ಲೆಗಳಲ್ಲಿ ವಾಡಿಕೆ ಮತ್ತು ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆ ಬಿದ್ದಿದೆ.

ಮಲೆನಾಡು ಭಾಗದಲ್ಲಿ ಹಾಸನ, ಕೊಡಗು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಬಿದ್ದಿದ್ದರೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆಯಾಗಿದ್ದು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ.ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಒಂದು ವಾರ ಬೇಸಿಗೆ ಮಳೆ ಕೆಲವೆಡೆ ಬೀಳುವ ಸಾಧ್ಯತೆ ಕಂಡುಬಂದಿದೆ.

RELATED ARTICLES

Latest News