Sunday, April 19, 2026
Homeರಾಜ್ಯಗ್ಯಾರಂಟಿ ಸರ್ಕಾರಕ್ಕೆ ಸಾಲುಸಾಲು ಮುಷ್ಕರದ ತಲೆ ಬಿಸಿ

ಗ್ಯಾರಂಟಿ ಸರ್ಕಾರಕ್ಕೆ ಸಾಲುಸಾಲು ಮುಷ್ಕರದ ತಲೆ ಬಿಸಿ

The guarantee government is facing a series of strikes.

ಬೆಂಗಳೂರು,ಫೆ.25- ಸಾರಿಗೆ ನೌಕರರು, ಸರ್ಕಾರಿ ವೈದ್ಯರು ಹಾಗೂ ರಾಜ್ಯ ಗುತ್ತಿಗೆದಾರರ ಸಂಘದವರು, ತಮ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ, ಮಾರ್ಚ್‌ ತಿಂಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದು, ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರಕ್ಕೆ ಸಾಲುಸಾಲು ಮುಷ್ಕರದ ಬಿಸಿ ತಟ್ಟಲಿದೆ.

ಸಂಪೂರ್ಣ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು, ವೈದ್ಯರು, ಗುತ್ತಿಗೆದಾರರು ಹಾಗೂ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಬೃಹತ್‌ ಪ್ರತಿಭಟನೆ ನಡೆಸಲು ಮುಂದಾಗಿರುವುದರಿಂದ ಇದು ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಲಿದೆ.

ರಾಜ್ಯ ಗುತ್ತಿಗೆದಾರರ ಸಂಘವು ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸುಮಾರು 37,000 ಕೋಟಿ ರೂ. ಬಾಕಿ ಬಿಲ್‌ ಪಾವತಿಗೆ ಆಗ್ರಹಿಸಿದರೆ, ಸರ್ಕಾರಿ ಆಸ್ಪತ್ರೆಗಳ ವೈದ್ಯರು ತಮ ಬೇಡಿಕೆಗಳ ಪಟ್ಟಿಯನ್ನೇ ಸರ್ಕಾರದ ಮುಂದಿಟ್ಟಿದ್ದಾರೆ. ಸಾರಿಗೆ ಸಂಘಟನೆಗಳು ಮಾರ್ಚ್‌ 2ರಂದು ಬಸ್‌‍ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸ ಮುಂದಾಗಿದ್ದು, ವೈದ್ಯರು ಒಪಿಡಿ ಬಂದ್‌ ಮಾಡಿ ಹೋರಾಟಕ್ಕೆ ಇಳಿಯುತ್ತಿದ್ದಾರೆ.

38 ತಿಂಗಳ ಹಿಂಬಾಕಿ ಹಾಗೂ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೆ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಮಾರ್ಚ್‌ 2ರಂದು 4 ನಿಗಮಗಳ ಸಾರಿಗೆ ನೌಕರರು ಪ್ರತಿಭಟನೆ ನಡೆಸಲಿದ್ದು, ಬಸ್‌‍ ಸಂಚಾರ ಬಂದ್‌ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಇತ್ತ ಸಿಎಂ ಸಿದ್ದರಾಮಯ್ಯ ಅವರಿಗೆ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಪತ್ರ ಬರೆದಿದ್ದು, ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದೆ. ಬಿಡುಗಡೆಯಾದ ಹಿಂಬಾಕಿ ಹಣ 1.271 ಕೋಟಿ ಶೀಘ್ರದಲ್ಲಿಯೇ ಪಾವತಿಸಬೇಕು ಎಂದು ಕೋರಿದೆ.

ಮಾ.11ರಿಂದ ವೈದ್ಯರ ಮುಷ್ಕರ
ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಸರ್ಕಾರದ ವಿರುದ್ಧ ಸೆಡ್ಡು ಹೊಡೆದು ಮಾರ್ಚ್‌ 11ರಿಂದ ಮುಷ್ಕರ ಮಾಡುವುದಾಗಿ ಘೋಷಿಸಿದೆ. ಸರ್ಕಾರದ ಜೊತೆ ನಡೆದ ಹಲವು ಸುತ್ತಿನ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಮುಷ್ಕರವನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತವಾಗಿ ಮಾರ್ಚ್‌ 11ರಿಂದ 15ರವರೆಗೆ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಡಿಸ್ಪೆನ್ಸರಿಗಳಲ್ಲಿ ಕಪ್ಪು ಪಟ್ಟಿಧರಿಸಿ ಹೊರರೋಗಿ (ಓಪಿಡಿ) ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಎರಡನೇ ಹಂತವಾಗಿ ಮಾರ್ಚ್‌ 16ರಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಮುಷ್ಕರ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

ತುಂಬಾ ತಾಳೆಯಿಂದ ಇದ್ದೇವೆ. ಹತ್ತಾರು ಸಭೆಗಳನ್ನು ನಡೆಸಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದೇವೆ. ವರ್ಷಗಳಿಂದ ಕಾದಿದ್ದೇವೆ. ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶ ನಮಗಿಲ್ಲ. ಆದರೆ ಸರ್ಕಾರ ಸ್ಪಂದಿಸದ ಕಾರಣ ಮುಷ್ಕರಕ್ಕೆ ಹೋಗುವುದು ಅನಿವಾರ್ಯವಾಗಿದೆ ಎಂದು ವೈದ್ಯರ ಸಂಘದ ಅಧ್ಯಕ್ಷ ಡಾ ರವೀಂದ್ರನಾಥ್‌ ಮೇಟಿ ತಿಳಿಸಿದ್ದಾರೆ.

ಕೌನ್ಸೆಲಿಂಗ್‌ ಸರಿಯಾಗಿ ಮಾಡಿಲ್ಲ, ಪರಸ್ಪರ ವರ್ಗಾವಣೆ ಆಗಿಲ್ಲ, ಅಂಗವಿಕಲರಿಗೆ ನ್ಯಾಯಯುತ ವರ್ಗಾವಣೆ ನೀಡಿಲ್ಲ. ಕಾಲಕಾಲಕ್ಕೆ ಔಷಧ ಪೂರೈಕೆ ಆಗುತ್ತಿಲ್ಲ. ಔಷಧಗಳಿಲ್ಲದಿದ್ದರೂ ಇದೆ ಎಂದು ತೋರಿಸಲಾಗುತ್ತಿದೆ. ಸರ್ಕಾರವೇ ತಂದ ನಿಯಮ ಪ್ರಕಾರ ಹೊರಗಡೆಗೆ ಚೀಟಿ ಬರೆಯಬಾರದು, ಆದರೆ ಅನಿವಾರ್ಯವಾಗಿ ಬರೆಯಬೇಕಾದ ಪರಿಸ್ಥಿತಿ ಬಂದಿದೆ ಎಂದು ರವೀಂದ್ರನಾಥ್‌ ಮೇಟಿ ಆರೋಪಿಸಿದ್ದಾರೆ.

ಇತ್ತೀಚೆಗೆ 30 ಕೋಟಿ ರೂಪಾಯಿ ಬಿಡುಗಡೆ ಮಾಡಿದರೂ ಔಷಧ ಪೂರೈಕೆಯಲ್ಲಿ ವ್ಯತ್ಯಯ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ. 496 ಔಷಧಗಳಲ್ಲಿ ಕೇವಲ 26 ಮಾತ್ರ ಸರಬರಾಜಾಗುತ್ತಿವೆ. ಹಲವೆಡೆ ಐವಿ ಫ್ಲೂಯಿಡ್‌ ಕೊರತೆ ಉಂಟಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಗುತ್ತಿಗೆದಾರರಿಂದ ಸರ್ಕಾರಕ್ಕೆ ಗಡುವು
ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ 37,000 ಕೋಟಿ ರೂಪಾಯಿ ಬಿಲ್‌ ಬಿಡುಗಡೆಗೆ ಗುತ್ತಿಗೆದಾರರು ಆಗ್ರಹಿಸಿದ್ದಾರೆ. ಈ ಹಣ ಲೋಕೋಪಯೋಗಿ, ಜಲಸಂಪನೂಲ, ಆರ್ಡಿಪಿಆರ್‌ ಸೇರಿದಂತೆ ವಿವಿಧ ಇಲಾಖೆಗಳಿಗೆ ಸೇರಿದೆ. ಬಾಕಿ ಪಾವತಿಸದಿದ್ದಲ್ಲಿ ಫೆಬ್ರವರಿ ಅಂತ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿ ಮಾರ್ಚ್‌ 6ರಂದು ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ಗುತ್ತಿಗೆದಾರರ ಸಂಘದ ಎಚ್ಚರಿಕೆ ನೀಡಿದೆ.

ಹಿಂದಿನ ಬಿಜೆಪಿ ಹಾಗೂ ಹಾಲಿ ಕಾಂಗ್ರೆಸ್‌‍ ಸರಕಾರದಿಂದ ಬಾಕಿ ಉಳಿದಿರುವ 37 ಸಾವಿರ ಕೋಟಿ ರೂ. ಬಿಲ್‌ ಬಾಕಿ ಬಿಡುಗಡೆಗೆ ಒತ್ತಾಯಿಸಿ ಮಾಚ್‌ 6 ರಂದು ಕಾಮಗಾರಿ ಸ್ಥಗಿತಗೊಳಿಸಿ ಸಾಂಕೇತಿಕ ಧರಣಿ ನಡೆಸುತ್ತೇವೆ. ಇದಕ್ಕೆ ಸ್ಪಂದಿಸದಿದ್ದಲ್ಲಿ ಏಪ್ರಿಲ್‌ ತಿಂಗಳಲ್ಲಿಅನಿರ್ದಿಷ್ಟಾವಧಿ ಕೆಲಸ ಬಂದ್‌ ಮಾಡಿ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ.

ಬಿಲ್‌ ಬಿಡುಗಡೆ ಸಂಬಂಧಿಸಿ ಪತ್ರ ಮೂಲಕ ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಸಭೆ ನಡೆಸುವುದಾಗಿ ಹೇಳಿ ಎರಡುಮೂರು ಬಾರಿ ಮುಂದೂಡಿದ್ದಾರೆ. ಪ್ರತಿ ಬಾರಿ ಬಾಕಿ ಬಿಲ್‌ ಕೇಳಿದರೂ ಅದು ಹಳೆಯ ಸರಕಾರದ್ದು ಎಂದು ಸಬೂಬು ಹೇಳುವ ಮೂಲಕ ಸಿಎಂ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಮಾ.6 ರಂದು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ಸಂಘದ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದ್ದಾರೆ.

100, 200 ಕೋಟಿ ರೂ.ಗಳ ಪ್ಯಾಕೇಜ್‌ ಮಾಡಿ ಹೊರರಾಜ್ಯದ ಗುತ್ತಿಗೆದಾರರಿಗೆ ಕೆಲಸ ಕೊಡಲಾಗುತ್ತಿದೆ. ಇದನ್ನು ಕೈ ಬಿಡುವಂತೆ ಕೋರಲಾಗಿದೆ. ಬಾಕಿ ಹಣ ಬಿಡುಗಡೆ ಪ್ರಕ್ರಿಯೆಯಲ್ಲಿ ಉದ್ದೇಶಪೂರ್ವಕ ವಿಳಂಬವಾಗುತ್ತಿರುವುದಕ್ಕೆ ಇದೂ ಒಂದು ಕಾರಣ ಎಂಬುದು ಸಂಘದ ಆರೋಪವಾಗಿದೆ.

RELATED ARTICLES

Latest News