ಬೆಂಗಳೂರು,ಫೆ.25-ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ 40 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿರುವುದಾಗಿ ಹೇಳಿದೆ. ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಗಳನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಅವರು ನಮ ಪಕ್ಷ ಅಧಿಕಾರಕ್ಕೆ ಬಂದ ನಂತರ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿದ್ದ 40 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ದಾಖಲೆಗಳನ್ನು ಬಿಡುಗಡೆ ಮಾಡಲು ಮೀನಾಮೇಷ ಏಕೆ ಎಂದು ಪ್ರಶ್ನಿಸಿದರು.
ಧಾರವಾಡದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಹಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ ಸರ್ಕಾರ ಕುಂಬಕರ್ಣ ನಿದ್ದೆಯಲ್ಲಿರುವುದರಿಂದ ಇಂಥ ಸಮಸ್ಯೆಗಳು ಅವರ ಗಮನಕ್ಕೆ ಬಂದಿಲ್ಲ. ಅಲ್ಲದೆ ಅವರ ನಾಯಕರು ಕೂಡ ಮಾತನಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣೆಗೂ ಮುನ್ನ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದೇ ವರ್ಷದಲ್ಲಿ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಯುವಜನತೆಗೆ ವಾಗ್ದಾನ ಕೊಟ್ಟು ಮತ ಪಡೆದರು. ಆದರೆ ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನು ಮರೆತಿದ್ದಾರೆ. ಸಿಎಂ ಸಿದ್ದರಾಮಯ್ಯನವರನ್ನು ಬಿಟ್ಟು ಬಿಡಿ. ರಾಹುಲ್ ಗಾಂಧಿಗೂ ಇದು ಮರೆತು ಹೋಗಿರಬಹುದು ಎಂದು ವ್ಯಂಗ್ಯವಾಡಿದರು.
ಸಿಎಂ ಕುರ್ಚಿ ಕಿತ್ತಾಟದಿಂದ ಇಂಥ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಸಿದ್ದರಾಮಯ್ಯನವರು ನಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದೆ. ಗಂಭೀರವಾಗಿ ಪರಿಗಣಿಸಲು ನಿಮಗೆ ಇಷ್ಟು ದಿನ ಬೇಕಿತ್ತೇ? ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಯುವಕರ ಜೊತೆ ಮಾತನಾಡಲು ಸಮಯ ಸಿಕ್ಕಿಲ್ಲ. ಪ್ರತಿಯೊಂದಕ್ಕೂ ನಮ ಪಕ್ಷದ ಮೇಲೆ ಗೂಬೆ ಕೂರಿಸುತ್ತಿದ್ದೀರಿ ಎಂದು ಆರೋಪಿಸಿದರು.
24,300 ಹುದ್ದೆ ಭರ್ತಿ ಮಾಡಲು ನಾಲ್ಕೈದು ತಿಂಗಳ ಹಿಂದೆಯೇ ಭರ್ತಿ ಮಾಡಲು ಸರ್ಕಾರ ಕ್ಲಿಯರೆನ್ಸ್ ನೀಡಿದೆ. ಮೀಸಲಾತಿ ವಿಚಾರವಾಗಿ ಪ್ರಕರಣ ಇದೆ ಎಂದು ಹೇಳಿದ್ದಾರೆ. ಪ್ರಕರಣ ಇರುವುದು ಎಷ್ಟು ಸತ್ಯವೋ? ಹೆಚ್ಚುವರಿ ಇರುವ ಮೀಸಲಾತಿ ಬದಿಗಿಟ್ಟು ಉಳಿಕೆ ತುಂಬಿ ಎಂದು ಹೈಕೋರ್ಟ್ ಕೂಡ ಹೇಳಿದೆ. ಅದರ ಬಗ್ಗೆ ಅಫಿಡವಿಟ್ ಕೊಟ್ಟರೆ ಆಯಿತು ಎಂದರು.
ಸಿಎಂ ವಾಸ್ತವವಾಗಿ ಸತ್ಯ ಒಪ್ಪಿಕೊಳ್ಳಬೇಕು. ರಾಜ್ಯದ ಜನರ ಕ್ಷಮೆ ಕೇಳಬೇಕು. ಐದು ಗ್ಯಾರಂಟಿಗಳ ಹೊರೆಯಾಗುತ್ತಿದೆ. ಅದನ್ನು ತೆಗೆಯಲು ಒಪ್ಪಿಕೊಳ್ಳುತ್ತಿಲ್ಲ. ಮೂರು ವರ್ಷಗಳಾಗುತ್ತಿದೆ. ಈಗಲೂ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಆರೋಪ ಮಾಡೋದು ಬಿಟ್ಟು, ಪತ್ರಿಕಾ ಹೇಳಿಕೆ ನೀಡದೆ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಬೇಕು. ಇಲ್ಲದೇ ಹೋದರೆ ಬಿಜೆಪಿ ಕೂಡ ಹೋರಾಟಕ್ಕೆ ಕರೆ ನೀಡಲಿದೆ ಎಂದು ಎಚ್ಚರಿಸಿದರು.
ಖಾಸಗಿ ಶಿಕ್ಷಣದ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಹುದ್ದೆ ಭರ್ತಿಗೆ 7-8-20204ರಂದೇ ನೇಮಕಾತಿಗೆ ಅನುಮತಿ ನೀಡಿದೆ. ಆ ಆದರೂ ಈವರೆಗೂ ನೇಮಕಾತಿ ಮಾಡಿಕೊಂಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ 50 ಸಾವಿರ, ಆರೋಗ್ಯ ಕ್ಷೇತ್ರದಲ್ಲಿ 30 ಸಾವಿರ ಹುದ್ದೆಗಳು ಖಾಲಿ ಇದೆ. ಸತ್ಯವನ್ನು ಜನತೆ ಮುಂದಿಟ್ಟು, ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಅನೇಕ ಸಮಸ್ಯೆಗಳು ನಮನ್ನು ಕಾಡುತ್ತಿವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಇಚ್ಚಾ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ. ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿಲ್ಲ. ಕಾಂಗ್ರೆಸ್‌ನ ಈ ಧೋರಣೆ ಜನರಿಗೆ ಆತಂಕದಲ್ಲಿದ್ದಾರೆ ಎಂದರು.
ಯಾವುದೇ ಸಮಸ್ಯೆ ಬಂದರೂ ಕೇಂದ್ರ ಸರ್ಕಾರದ ಮೇಲೆ ಹಾಕುವುದು ತಮ ಜವಾಬ್ದಾರಿಯಿಂದ ನುಳುಚಿಕೊಳ್ಳುವ ಷಡ್ಯಂತ್ರ ಮಾಡಿಕೊಂಡು. ಸುಳ್ಳು ಹೇಳುವುದೇ ಕಾಂಗ್ರೆಸ್ ಕೆಲಸ ಆಗಿದೆ.. ಸುಳ್ಳೆ ಕಾಂಗ್ರೆಸ್ ಮನೆ ದೇವರು ಆಗಿದೆ. ಸಿಎಂ ಅವರೇ ಸುಳ್ಳಾಟ ಕಳ್ಳಾಟ ನಿಲ್ಲಿಸಿ ಸಮಸ್ಯೆಗಳಿಗೆ ಪರಿಹಾರ ನೀಡಿ ಎಂದು ಆಗ್ರಹಿಸಿದರು.
ಮೊದಲಿಗೆ ಆಸ್ಪತ್ರೆಗಳ ಪರಿಸ್ಥಿತಿ ಸರಿ ಇಲ್ಲ.. ಔಷಧಿಗಳು ಸಿಗುತ್ತಿಲ್ಲ. ವೈದ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಇವರ ಬೇಜಾಬ್ದಾರಿಯಿಂದ ಆರೋಗ್ಯ ಇಲಾಖೆ ನಷ್ಟದಲ್ಲಿದೆ. ಕೇಂದ್ರದ ಜನೌಷಧಿಯನ್ನು ಕೇಂದ್ರವನ್ನ ಮುಚ್ಚುವ ಕೆಲಸ ಮಾಡಿದರು. ಖಾಸಗಿ ಫಾರ್ಮಾಸಿಗಳಲ್ಲಿ ಔಷಧಿ ತೆಗೆದುಕೊಳ್ಳಿ ಎಂದು ಸರ್ಕಾರ ವೈದ್ಯರೇ ಹೇಳುತ್ತಿದ್ದಾರೆ.
ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಸೇವೆಗಳಿಗೆ ಬಾಕೀ ಹಣ ಉಳಿಸಿಕೊಂಡಿದ್ದಾರೆ. ಇದರಿಂದ ಬಡ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ಸಾಧನ ಸಮಾವೇಶ ಮಾಡುತ್ತಿದ್ದಾರೆ. ಆದರೆ ಜನರು ಯಾವ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಗೊತ್ತಾ? ಎಂದು ಪ್ರಶ್ನೆ ಮಾಡಿದರು.
ನನ್ನ ಪ್ರಕಾರ ಕಾಂಗ್ರೆಸ್ ನುಡಿದಂತೆ ನಡೆಯುತ್ತಿರುವ ಸರ್ಕಾರ ಅಲ್ಲ. ಜನರಿಗೆ ಇರುವ ಸರ್ಕಾರ ಅಲ್ಲ.. ದಲ್ಲಾಳಿಗಳಿಗೆ ಇರುವ ಸರ್ಕಾರ. ಔಷಧಿ ಕೊರತೆ ಉಂಟಾಗಲು ಸರ್ಕಾರ ಸಚಿವರು ಕಾರಣ. ಪ್ರಭಾವಿಗಳ ಒತ್ತಡಕ್ಕೆ ಮಣಿದು ಔಷಧಿ ಖರೀದಿಯಲ್ಲಿ ಅವ್ಯಾವಾಹರ ನಡೆಯುತ್ತಿದೆ. ಟೆಂಡರ್ ಕರೆದರೂ ಯಾರು ಭಾಗಿಯಾಗ್ತಿಲ್ಲ. ನಾನು ನೇರವಾಗಿ ಆರೋಪ ಮಾಡ್ತಿದ್ದೀನಿ.. 15-20% ಕಮಿಷನ್ ಹಾವಳಿಯಿಂದ ಟೆಂಡರ್‌ನಲ್ಲಿ ಯಾರು ಭಾಗಿಯಾಗುತ್ತಿಲ್ಲ ಎಂದರು.
ಉಗ್ರಾಣದಿಂದ ಔಷಧಿ ಖರೀದಿ ಸ್ಟಾಪ್ ಮಾಡಿ ಬಹಳ ದಿನಗಳು ಆಗಿವೆ. ತುಂಡು ಗುತ್ತಿಗೆ ಮೇಲೆ ಔಷಧಿ ಖರೀದಿ ಮಾಡ್ತಿದ್ದಾರೆ.. ಇದರಿಂದ ಔಷದಿ ಕೊರತೆಗೆ ಕಾರಣ ಆಗಿದೆ. ಮಂಗಳೂರಿನ ಒಬ್ಬ ವ್ಯಕ್ತಿ ಇಡೀ ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡುತ್ತಿದ್ದಾರೆ. ಮಂಗಳೂರು ವ್ಯಕ್ತಿಯ ಪ್ರಭಾವದಿಂದ ಇಡೀ ವ್ಯವಸ್ಥೆ ಕುಸಿದು ಬಿಂದಿದೆ. ಇದರಿಂದ ಬಡವರು ಪರದಾಡುತ್ತಿದ್ದಾರೆ ಎಂದು ವಿಷಾದಿಸಿದರು.
