Thursday, May 2, 2024
Homeರಾಜ್ಯರಾಜ್ಯದಲ್ಲಿ ಭಯಾನಕ ಬಿಸಿಲು, 12 ಕಡೆಗಳಲ್ಲಿ ಗರಿಷ್ಠ ತಾಪಮಾನ ದಾಖಲು

ರಾಜ್ಯದಲ್ಲಿ ಭಯಾನಕ ಬಿಸಿಲು, 12 ಕಡೆಗಳಲ್ಲಿ ಗರಿಷ್ಠ ತಾಪಮಾನ ದಾಖಲು

ಬೆಂಗಳೂರು,ಏ.5- ಬೇಸಿಗೆಯ ಸುಡು ಬಿಸಿಲು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗಾಗಲೇ ದಾಖಲೆ ಪ್ರಮಾಣದ ತಾಪಮಾನ ಕಂಡುಬರುತ್ತಿದೆ. ರಾಜ್ಯದ 12 ಕಡೆಗಳಲ್ಲಿ ನಿನ್ನೆ ಗರಿಷ್ಠ ತಾಪಮಾನ ದಾಖಲಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಹೆಚ್ಚೂ ಕಡಿಮೆ ಜೂನ್ವರೆಗೂ ಇದೇ ತಾಪಮಾನ ಮುಂದುವರೆಯುವ ನಿರೀಕ್ಷೆಯಿದೆ. ಚದುರಿದಂತೆ ಅಲ್ಲಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡು ಬಂದರೂ ವಾಡಿಕೆ ಪ್ರಮಾಣದ ಮುಂಗಾರು ಪೂರ್ವ ಮಳೆಯಾಗು ತ್ತಿಲ್ಲ. ಮಳೆಯಾಗುವ ಮುನ್ಸೂಚನೆ ಗಳೂ ಇಲ್ಲ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದಲೂ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ವಾಡಿಕೆ ಪ್ರಮಾಣದಲ್ಲಾಗಿಲ್ಲ. ಏಪ್ರಿಲ್ ತಿಂಗಳಿನಲ್ಲೂ ವಾಡಿಕೆ ಮಳೆಯಾಗುವ ಸೂಚನೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಹವಾಮಾನ ಇಲಾಖೆ ಮಾಹಿತಿ ಪ್ರಕಾರ ರಾಜ್ಯದ ಹಲವು ಭಾಗಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನ ಗಣನೀಯವಾಗಿ ಏರಿಕೆಯಾಗಿದೆ.

ಒಂದೂವರೆಯಿಂದ ಮೂರು ಡಿಗ್ರಿ ಸೆಂಟಿಗ್ರೇಡ್ನಷ್ಟು ಸರಾಸರಿಗಿಂತ ಹೆಚ್ಚಾಗಿ ಕಂಡುಬರುತ್ತಿದೆ.ನಿನ್ನೆ ಕೊಪ್ಪಳದಲ್ಲಿ 41.8, ಬಾಗಲ ಕೋಟೆ 41.1, ಬೀದರ್ 39.2, ಕಲಬುರಗಿಯಲ್ಲಿ 42.8, ಗದಗ 40.6, ವಿಜಯಪುರ 40, ಧಾರವಾಡ 39.8, ದಾವಣಗೆರೆ 40.5, ಹಾಸನ 37.4, ಮಂಡ್ಯ 38.2, ಮೈಸೂರು 37, ಬೆಂಗಳೂರು 37 ಡಿಗ್ರಿ ಸೆಂಟಿಗ್ರೇಡ್ನಷ್ಟು ಗರಿಷ್ಠ ತಾಪಮಾನ ದಾಖಲಾಗುತ್ತಿದೆ.

ಈಗಾಗಲೇ ಸರಾಸರಿ 35 ಡಿ.ಸೆ. ನಷ್ಟು ತಾಪಮಾನ ಎಲ್ಲೆಡೆ ಕಂಡುಬರುತ್ತಿದೆ. 36 ರಿಂದ 41 ಡಿ.ಸೆ. ನಷ್ಟು ಸಾಮಾನ್ಯವಾಗಿ ಕಂಡುಬರುತ್ತಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ 40 ಡಿ.ಸೆ. ನಷ್ಟು ಗಡಿಯನ್ನು ದಾಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ತಜ್ಞರು ತಿಳಿಸಿದ್ದಾರೆ.

ನಿರಂತರ ತಾಪಮಾನ ಏರಿಕೆಯಿಂದ ಬಿಸಿಗಾಳಿ ಕಂಡುಬರುತ್ತಿದ್ದು, ತೇವಾಂಶದಲ್ಲೂ ಭಾರೀ ಕುಸಿತವಾಗಿದೆ. ಯುಗಾದಿ ಹಬ್ಬಕ್ಕೂ ಮುನ್ನ ರಾಜ್ಯದ ದಕ್ಷಿಣ ಒಳನಾಡಿನ ಒಳಭಾಗಗಳಲ್ಲಿ ಚದುರಿದಂತೆ ಮಳೆಯಾಗುವ ಮುನ್ಸೂಚನೆಗಳಿವೆ.

ಏಪ್ರಿಲ್ 12 ರಿಂದ ಮೂರ್ನಾಲ್ಕು ದಿನಗಳ ಕಾಲ ಮೈಸೂರು, ಮಂಡ್ಯ, ಕೊಡಗು, ರಾಮನಗರ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಗ್ರಾಮದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆಗಳು ಕಂಡು ಬರುತ್ತಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ತಿಳಿಸಿದರು.

ಯುಗಾದಿ ಹಬ್ಬದ ನಂತರ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾದರೂ, ಉತ್ತರ ಕರ್ನಾಟಕದ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ. ಏಪ್ರಿಲ್, ಮೇ ತಿಂಗಳಿನಲ್ಲಿ ಗುಡುಗು, ಮಿಂಚು, ಗಾಳಿಯಿಂದ ಕೂಡಿದ ಮಳೆಯಾಗುವುದು
ಸಹಜ ಪ್ರಕ್ರಿಯೆ ಎಂದು ಅವರು ಹೇಳಿದರು.

RELATED ARTICLES

Latest News