ನವದೆಹಲಿ,ಜೂ.17- ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಮೈಸೂರು -ಕೊಡಗು ಭಾಗಕ್ಕೆ ಸಂಬಂಧಿ ಸಿದ ಎರಡು ಮಹತ್ವದ ವಿಷಯಗಳ ಕುರಿತು ಮನವಿ ಸಲ್ಲಿಸಿದರು.
ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆನೆ ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸುವುದು ಮತ್ತು ಮೈಸೂರಿನ ತಿಪ್ಪಯ್ಯನ ಕೆರೆಯಲ್ಲಿ ನಗರ್‌ವನ್ ಯೋಜನೆ ಜಾರಿಗೊಳಿಸುವ ಕುರಿತು ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಆನೆಗಳು ಕೃಷಿ ಭೂಮಿಗಳು ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚುತ್ತಲೇ ಇದೆ, ಇದು ಜಿಲ್ಲೆಯ ಜನರ ಪ್ರಮುಖ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಸಚಿವರ ಗಮನಕ್ಕೆ ತಂದರು.
ಆನೆಗಳ ದಾಳಿಯಿಂದ ಮಾನವ ಜೀವಹಾನಿ, ಬೆಳೆ ನಷ್ಟ, ಆಸ್ತಿ ಹಾನಿ ಮತ್ತು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ವಿಶೇಷವಾಗಿ ಅರಣ್ಯ ಅಂಚಿನ ಗ್ರಾಮಗಳಲ್ಲಿ ವಾಸಿಸುವ ರೈತರು, ತೋಟಗಾರರು ಮತ್ತು ಕಾರ್ಮಿಕರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಆನೆ ಮಾನವ ಸಂಘರ್ಷವನ್ನು ಕಡಿಮೆಗೊಳಿಸಲು ಸಮಗ್ರ ಹಾಗೂ ದೀರ್ಘಕಾಲೀನ ಕಾರ್ಯತಂತ್ರವನ್ನು ರೂಪಿಸಲು ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎಂದು ಅವರು ಮನವಿ ಮಾಡಿದರು. ಆನೆ ತಡೆಗೋಡೆಗಳ ಬಲವರ್ಧನೆ, ಸೌರ ಬೇಲಿ ವ್ಯವಸ್ಥೆ, ಆನೆಗಳ ಚಲನವಲನದ ವೈಜ್ಞಾನಿಕ ಮೇಲ್ವಿಚಾರಣೆ, ಮುನ್ನೆಚ್ಚರಿಕೆ ವ್ಯವಸ್ಥೆ, ಅರಣ್ಯ ವಾಸಸ್ಥಳಗಳ ಸುಧಾರಣೆ, ತ್ವರಿತ ಪ್ರತಿಕ್ರಿಯಾ ತಂಡಗಳ ರಚನೆ ಹಾಗೂ ಪೀಡಿತ ಕುಟುಂಬಗಳಿಗೆ ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡುವ ವ್ಯವಸ್ಥೆಯನ್ನು ಬಲಪಡಿಸುವಂತೆ ಅವರು ಕೋರಿದರು.
ಸಂಸದರು ಇದೇ ಸಂದರ್ಭದಲ್ಲಿ ಮೈಸೂರಿನ ಹೊರವರ್ತುಲ ರಸ್ತೆಯ ಸಮೀಪ, ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದ ಬಳಿ ಇರುವ ತಿಪ್ಪಯ್ಯನ ಕೆರೆಯನ್ನು ನಗರ ವನ ಯೋಜನೆಯಡಿ ಅಭಿವೃದ್ಧಿಪಡಿಸುವಂತೆ ಪ್ರತ್ಯೇಕ ಮನವಿಯನ್ನೂ ಸಲ್ಲಿಸಿದರು.
ಸಭೆಯ ನಂತರ ಮಾತನಾಡಿದ ಯದುವೀರ್ ಒಡೆಯರ್ ಅವರು, ಕೊಡಗಿನ ಆನೆಮಾನವ ಸಂಘರ್ಷ ಮತ್ತು ಮೈಸೂರಿನ ನಗರ ಹಸಿರು ಮೂಲಸೌಕರ್ಯ ಅಭಿವೃದ್ಧಿ ಎರಡೂ ವಿಷಯಗಳು ತಕ್ಷಣದ ಗಮನಕ್ಕೆ ಅರ್ಹವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಹೇಳಿದರು.
