Homeಜಿಲ್ಲಾ ಸುದ್ದಿಗಳುಚಿಕ್ಕಮಗಳೂರು : ವಿದ್ಯುತ್‌ ತಂತಿ ತುಳಿದು ಮೂರು ಹಸು ಸಾವು

ಚಿಕ್ಕಮಗಳೂರು : ವಿದ್ಯುತ್‌ ತಂತಿ ತುಳಿದು ಮೂರು ಹಸು ಸಾವು

ಚಿಕ್ಕಮಗಳೂರು,ಆ.1- ವಿದ್ಯುತ್‌ ತಂತಿಯನ್ನು ತುಳಿದು ಮೂರು ಹಸುಗಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕೆಳಬೈಲ್‌ ಗ್ರಾಮದಲ್ಲಿ ನಡೆದಿದೆ.ಬೃಹತ್‌ ಗಾತ್ರದ ಮರವೊಂದು ವಿದ್ಯುತ್‌ ಲೈನ್‌ ಮೇಲೆ ಬಿದ್ದ ರಭಸಕ್ಕೆ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದ್ದವು. ಈ ವೇಳೆ ಆ ಮಾರ್ಗದಲ್ಲಿ ಸಾಗುತ್ತಿದ್ದ ಮೂರು ಹಸುಗಳಿಗೆ ತಂತಿ ಸ್ಪರ್ಶಿಸಿ, ತೀವ್ರವಾಗಿ ವಿದ್ಯುತ್‌ ಪ್ರವಹಿಸಿದ ಪರಿಣಾಮ ಅವು ಸ್ಥಳದಲ್ಲೇ ಪ್ರಾಣ ಬಿಟ್ಟಿವೆ.

ತಮ ಜೀವನಾಧಾರವಾಗಿದ್ದ ಮೂರು ಹಸುಗಳನ್ನು ಏಕಾಏಕಿ ಕಳೆದುಕೊಂಡ ರೈತ ಕಣ್ಣೀರಿಡುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ ಸಂಪರ್ಕವನ್ನು ಸ್ಥಗಿತಗೊಳಿಸಿ ಪರಿಶೀಲನೆ ನಡೆಸಿದ್ದಾರೆ. ಈ ಅವಘಡಕ್ಕೆ ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಾರ್ಗದ ಪಕ್ಕದಲ್ಲಿದ್ದ ಅಪಾಯಕಾರಿ ಮರಗಳನ್ನು ಮುಂಚಿತವಾಗಿ ತೆರವುಗೊಳಿಸುವಂತೆ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇಲಾಖೆಯ ಬೇಜವಾಬ್ದಾರಿತನದಿಂದಲೇ ಈ ಅನಾಹುತ ಸಂಭವಿಸಿದ್ದು ಹಸುಗಳನ್ನು ಕಳೆದುಕೊಂಡಿರುವ ಸಂತ್ರಸ್ತ ರೈತನಿಗೆ ಸರ್ಕಾರ ಹಾಗೂ ಇಲಾಖೆ ಪರಿಹಾರ ನೀಡಲು ಒತ್ತಾಯಿಸಿದ್ದಾರೆ.

RELATED ARTICLES

Latest News