Homeರಾಜ್ಯರಾಜ್ಯ ನೇಮಕಾತಿಯ ಪರೀಕ್ಷೆಗಳಲ್ಲಿ ಗೊಂದಲ : ಸಿಬಿಟಿ ಮಾದರಿ ಅನುಸರಣೆಗೆ ಒತ್ತಾಯ

ರಾಜ್ಯ ನೇಮಕಾತಿಯ ಪರೀಕ್ಷೆಗಳಲ್ಲಿ ಗೊಂದಲ : ಸಿಬಿಟಿ ಮಾದರಿ ಅನುಸರಣೆಗೆ ಒತ್ತಾಯ

Irregularities in state recruitment exams: CBT pattern to be followed

ಬೆಂಗಳೂರು, ಆ.3- ಕಠಿಣ ಪರಿಶ್ರಮದ ಬಳಿಕವೂ ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಸ್ಪರ್ಧಾತಕ ಪರೀಕ್ಷೆಯಲ್ಲಿ ಗೊಂದಲಗಳು ಮುಂದುವರೆಯುತ್ತಿರುವ ನಡುವೆಯೇ ಕೇಂದ್ರ ಸರ್ಕಾರದ ರೀತಿಯಲ್ಲೇ ಸಿಬಿಟಿ ಮಾದರಿಯನ್ನು ಅನುಸರಿಸಬೇಕು ಎಂಬ ಒತ್ತಡ ಅಭ್ಯರ್ಥಿಗಳಿಂದ ಕೇಳಿ ಬರುತ್ತಿದೆ.

ರಾಜ್ಯದಲ್ಲಿ ಒಟ್ಟು 3,991ಕ್ಕೂ ಹೆಚ್ಚು ಪೊಲೀಸ್‌‍ ಕಾನ್‌್ಸಟೆಬಲ್‌ಗಳ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಅದಕ್ಕಾಗಿ 3.77ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಸುಮಾರು 3.47 ಲಕ್ಷ ಮಂದಿ ನಿನ್ನೆ ಪರೀಕ್ಷೆ ಬರೆದಿದ್ದಾರೆ.

ರಾಜ್ಯ ಸರ್ಕಾರ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ, ನಕಲಿ ಸೇರಿದಂತೆ ನಾನಾ ರೀತಿಯ ಗೊಂದಲಗಳಿಗೆ ಕಡಿವಾಣ ಹಾಕಲು ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿತ್ತು. ಬಹುತೇಕ ಅದು ಪರಿಣಾಮ ಬೀರಿರುವ ಸಾಧ್ಯತೆಯಿದ್ದು, ಈವರೆಗೂ ಎಲ್ಲಿಯೂ ಗಂಭೀರ ಆರೋಪಗಳು ಕೇಳಿ ಬಂದಿಲ್ಲ. ಆದರೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಯ ಒಎಂಆರ್‌ ಶೀಟ್‌ಗಳ ಕ್ರಮ ಸಂಖ್ಯೆ ಹೊಂದಾಣಿಕೆಯಾಗಿಲ್ಲ ಎಂಬ ಕಾರಣಕ್ಕೆ ಹಾಸನ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಗದ್ದಲಗಳಾಗಿವೆ.

ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಕೋಡ್‌ ವರ್ಷನ್‌ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಒಂದು ವೇಳೆ ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆಗಳ ಕ್ರಮಸಂಖ್ಯೆ ಬೇರೆಯಾಗಿದ್ದರೂ ಯಾವುದೇ ತೊಂದರೆಯಾಗುವುದಿಲ್ಲ. ಎರಡು ಕ್ರಮ ಸಂಖ್ಯೆಗಳು ಒಂದೇ ಆಗಿರಬೇಕೆಂದು ಪ್ರಾಧಿಕಾರ ಎಲ್ಲಿಯೂ ಕಡ್ಡಾಯ ಮಾಡಿಲ್ಲ. ಅಭ್ಯರ್ಥಿಗಳು ಗೊಂದಲಕ್ಕೊಳಗಾಗುವ ಅಗತ್ಯ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಎಷ್ಟೇ ಪ್ರಯತ್ನ ಪಟ್ಟರೂ ಸಾರ್ವಜನಿಕ ಪರೀಕ್ಷೆಗಳಲ್ಲಿ ಒಂದಲ್ಲಾ ಒಂದು ತೊಂದರೆ, ತೊಡಕುಗಳು ಎದುರಾಗುತ್ತಲೇ ಇವೆ. ನಿನ್ನೆಯ ಪರೀಕ್ಷೆಯಲ್ಲಿ ವಿಜಯಪುರದ ತಿಕೋಟದಲ್ಲಿ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಕ್ರಮಸಂಖ್ಯೆಗಳು ಬೇರೆಯಾಗಿವೆ ಎಂದು ಆರೋಪಿಸಿ, ಪ್ರಶ್ನೆ ಪತ್ರಿಕೆ ಜೊತೆಗೆ ಒಎಂಆರ್‌ ಶೀಟ್‌ಗಳನ್ನು ತೆಗೆದುಕೊಂಡು ಅವಧಿಗೂ ಮುನ್ನವೇ ಪರೀಕ್ಷಾ ಕೇಂದ್ರದಿಂದ ಕಾಪೌಂಡ್‌ ಹಾರಿ ಹೊರಹೋಗಿದ್ದಾರೆ.

ಬಳಿಕ ವಾಪಾಸ್‌‍ ಬಂದು ತಮಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕೆಂದು ಗದ್ದಲ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಹಳಷ್ಟು ವಿದ್ಯಾರ್ಥಿಗಳು ತಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ರಾಜ್ಯ ಸರ್ಕಾರದ ನೇಮಕಾತಿಗಾಗಿ ಕೆಪಿಎಸ್‌‍ಸಿ, ಕೆಇಎ ಸೇರಿದಂತೆ ಇತರ ಸಂಸ್ಥೆಗಳು ಅನುಸರಿಸುತ್ತಿರುವ ವಿಧಾನಗಳು ಸಮರ್ಪಕವಾಗಿಲ್ಲ. ಕೇಂದ್ರ ಸರ್ಕಾರ ಪಾಲಿಸುತ್ತಿರುವ ಕಂಪ್ಯೂಟರ್‌ ಆಧಾರಿತ ಪರೀಕ್ಷೆ (ಸಿಬಿಟಿ) ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ 2013ರಿಂದಲೂ ನಿರಂತರವಾಗಿ ಸಿಬಿಟಿ ಮಾದರಿಯನ್ನು ನೇಮಕಾತಿ ಪರೀಕ್ಷೆಗಳಿಗೆ ಅನುಸರಿಸುತ್ತಿದೆ. ಸ್ಟಾಪ್‌ ಸೆಲೆಕ್ಷನ್‌ ಕಮಿಷನ್‌ ವಿದ್ಯಾರ್ಹತೆ ಆಧರಿತವಾಗಿ ನಡೆಸುವ ಪ್ರತಿಯೊಂದು ನೇಮಕಾತಿಗೂ ಸರಿಸುಮಾರು 30 ರಿಂದ 40 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಗೊಂದಲಗಳಾಗದಂತೆ ಸಿಬಿಟಿ ಆಧಾರಿತವಾಗಿ ಖಾಸಗಿ ಸಂಸ್ಥೆ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ.

ಕಂಪ್ಯೂಟರ್‌ ಆಧಾರಿತ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳು ಮುದ್ರಣವಾಗುವುದಿಲ್ಲ, ಬದಲಾಗಿ ಆನ್‌ಲೈನ್‌ನಲ್ಲಿ ನೇರವಾಗಿ ಅಭ್ಯರ್ಥಿಗಳಿಗೆ ತಲುಪುತ್ತವೆ. ದಿನವೊಂದಕ್ಕೆ ಎರಡು, ಮೂರು ಪಾಳಿಯಂತೆ ವಾರಗಟ್ಟಲೆ ಪರೀಕ್ಷೆ ನಡೆಯುತ್ತವೆ. ಸರಿಸುಮಾರು 40 ರಿಂದ 50 ಲಕ್ಷ ಅಭ್ಯರ್ಥಿಗಳು ಯಾವುದೇ ಗೊಂದಲವಾಗದಂತೆ ಪರೀಕ್ಷೆ ಬರೆಯುತ್ತಾರೆ. ರಾಜ್ಯ ಸರ್ಕಾರ ಕೂಡ ಅದೇ ಮಾದರಿ ಅನುಸರಿಸಬೇಕೆಂಬ ಒತ್ತಾಯವನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ.

ರಾಜ್ಯದಲ್ಲಿ ನೇಮಕಾತಿ ಪರೀಕ್ಷೆಗಳಿಗೆ ಉತ್ತಮ ಗುಣಮಟ್ಟದ ಮಾನದಂಡಗಳನ್ನು ಅನುಸರಿಸುತ್ತಿಲ್ಲ ಎಂಬ ಆರೋಪಗಳಿವೆ. ಕೇಂದ್ರ ಸರ್ಕಾರದ ನೇಮಕಾತಿ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ವಿಷಯಾಧಾರಿತ ಪಠ್ಯಗಳನ್ನು ಆಧರಿಸಿ ನಿರ್ಧಿಷ್ಠ ಪ್ರಮಾಣದ ಪ್ರಶ್ನೆಗಳಿರುವುದು ಖಚಿತವಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಶ್ರಮಪಟ್ಟು ಓದಿ ಪರೀಕ್ಷೆ ಬರೆಯುತ್ತಾರೆ ಮತ್ತು ಉದ್ಯೋಗ ಗಿಟ್ಟಿಸುವ ವಿಷಯದಲ್ಲಿ ಖಚಿತ ವಿಶ್ವಾಸ ಹೊಂದಿರುತ್ತಾರೆ.

ರಾಜ್ಯ ಸರ್ಕಾರದ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಲೋಕ ಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆಗಳಲ್ಲಿ ನಿರ್ಧಿಷ್ಟ ಮಾನದಂಡಗಳೇ ಇಲ್ಲ ಎಂಬ ಟೀಕೆಗಳಿವೆ. ಒಮೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತೆ 25 ಪ್ರಶ್ನೆಗಳನ್ನು ಕೇಳಿದರೆ ಮತ್ತೊಂಮೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು 5 ರಿಂದ 10ಕ್ಕೆ ಕಡಿತಗೊಳಿಸಲಾಗುತ್ತದೆ.
ವಿಷಯಾಧಾರಿತ ಪಠ್ಯದ ಕುರಿತು ಪ್ರಶ್ನೆಗಳ ವಿಚಾರದಲ್ಲೂ ಪ್ರತಿ ಬಾರಿ ಈ ರೀತಿ ಗೊಂದಲಗಳಾಗುವುದರಿಂದ ಯಾವುದನ್ನು ಓದಬೇಕು, ಯಾವುದನ್ನು ಕಲಿಯಬೇಕು ಎಂಬ ಬಗ್ಗೆ ಅಭ್ಯರ್ಥಿಗಳಿಗೆ ಸ್ಪಷ್ಟತೆ ಇರುವುದಿಲ್ಲ ಎನ್ನಲಾಗಿದೆ.

ವಿಷಯಾಧಾರಿತ ಪ್ರಶ್ನೆಗಳಿಗೆ ಪೂರ್ವ ತಯಾರಿ ಮಾಡಿಕೊಂಡಿದ್ದ ಅಭ್ಯರ್ಥಿಗಳಿಗೆ ಏಕಾಏಕಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು ಎದುರಾಗುತ್ತದೆ. ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಓದಿಕೊಂಡು ತಯಾರಾದ ಅಭ್ಯರ್ಥಿಗಳು ಮಾತ್ರ ಆ ಪರೀಕ್ಷೆಯಲ್ಲಿ ಯಶಸ್ವಿಯಾಗುತ್ತಾರೆ. ಖಚಿತ ಮಾನದಂಡ ಇಲ್ಲದೇ ಇರುವುದರಿಂದ ಸರ್ಕಾರಿ ಉದ್ಯೋಗದ ಆಯ್ಕೆ ಅದೃಷ್ಟದ ಬೆನ್ನೇರುವಂತಾಗಿದೆ.

ಈ ರೀತಿಯ ಧೋರಣೆಗಳಿಂದ ರಾಜ್ಯ ಸರ್ಕಾರದ ಪರೀಕ್ಷೆಗಳು ಗೊಂದಲಗಳ ಗೂಡಾಗುತ್ತವೆ ಮತ್ತು ಅಭ್ಯರ್ಥಿಗಳ ವಿರೋಧಿಯಾಗಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲಿ ನಿರ್ಧಿಷ್ಠ ಮಾನದಂಡಗಳ ಅನುಸರಣೆ, ಸಿಬಿಟಿ ಪದ್ಧತಿ ಅಳವಡಿಕೆ ಮಾಡುವುದರಿಂದ ಸರ್ಕಾರಿ ನೇಮಕಾತಿಗಳಲ್ಲಿ ಪಾರದರ್ಶಕತೆ ತರಲು ಸಾಧ್ಯವಾಗುತ್ತದೆ. ಇಲ್ಲವಾದರೆ ಎಷ್ಟೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡರೂ ಗೊಂದಲಗಳು ಮುಂದುವರೆಯುತ್ತಲೇ ಇರುತ್ತವೆ, ಅಭ್ಯರ್ಥಿಗಳು ಸರ್ಕಾರಕ್ಕೆ ಇಡೀ ಶಾಪ ಹಾಕುವುದು ತಪ್ಪುವುದಿಲ್ಲ ಎಂಬ ವ್ಯಾಖ್ಯಾನಗಳಿವೆ.

RELATED ARTICLES
spot_img

Latest News