Homeರಾಜ್ಯರಾಜ್ಯದಲ್ಲಿ 6 ವರ್ಷಗಳಲ್ಲಿ 98 ಕಳಪೆ ಗುಣಮಟ್ಟದ ಔಷಧ ಪತ್ತೆ

ರಾಜ್ಯದಲ್ಲಿ 6 ವರ್ಷಗಳಲ್ಲಿ 98 ಕಳಪೆ ಗುಣಮಟ್ಟದ ಔಷಧ ಪತ್ತೆ

98 substandard drugs detected in Karnataka in 6 years

ಬೆಂಗಳೂರು, ಆ.26- ರಾಜ್ಯದಲ್ಲಿ ರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ನಕಲಿ ಹಾಗೂ ಕಳಪೆ ಗುಣಮಟ್ಟದ ಔಷಧಗಳ ಆತಂಕ ಮುಂದುವರಿದಿದ್ದು, ಕಳೆದ ಆರು ವರ್ಷಗಳಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಯೋಗಾಲಯದಲ್ಲಿ 98 ಕಡಿಮೆ ಗುಣಮಟ್ಟದ (ಎನ್‌ಎಸ್‌ಕ್ಯೂ) ಔಷಧಗಳು ಪತ್ತೆಯಾಗಿವೆ.

2021ರಿಂದ 2026ರ ಆಗಸ್ಟ್‌ 18ರವರೆಗೆ ಪತ್ತೆಯಾದ 98 ಎನ್‌ಎಸ್‌ಕ್ಯೂ ಔಷಧಗಳ ಪೈಕಿ ಹೆಚ್ಚಿನವು ಮಾತ್ರೆಗಳು ಹಾಗೂ ಸಿರಪ್‌ಗಳಾಗಿವೆ. 2021ರಿಂದ 2025ರವರೆಗೆ 15 ಕಳಪೆ ಗುಣಮಟ್ಟದ ಔಷಧಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ನಕಲಿ ಅಥವಾ ಕಳಪೆ ಗುಣಮಟ್ಟದ ಔಷಧಗಳನ್ನು ಪೂರೈಸಿದ 26 ಕಂಪನಿಗಳ ಪೈಕಿ ಕೇವಲ ಆರು ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ದೊರೆತಿದೆ. ಉಳಿದ ಕಂಪನಿಗಳ ವಿರುದ್ಧ ತನಿಖೆಗೆ ಅನುಮತಿ ದೊರೆಯದಿರುವುದು ಕಳಪೆ ಔಷಧ ಪೂರೈಕೆದಾರರ ವಿರುದ್ಧ ಪರಿಣಾಮಕಾರಿ ಕ್ರಮಕ್ಕೆ ಹಿನ್ನಡೆಯಾಗಿದೆ.

ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಪಂಜಾಬ್‌, ತೆಲಂಗಾಣ ಹಾಗೂ ಕರ್ನಾಟಕ ಮೂಲದ ಕಂಪನಿಗಳು ಪೂರೈಸಿದ ವಿವಿಧ ಔಷಧಗಳು ಪ್ರಯೋಗಾಲಯದ ಪರೀಕ್ಷೆಯಲ್ಲಿ ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸದಿರುವುದು ಪತ್ತೆಯಾಗಿದೆ. ಈ ಪೈಕಿ ಕಳಪೆ ಔಷಧ ಪೂರೈಕೆಯಲ್ಲಿ ಹೆಚ್ಚಿನ ಕಂಪನಿಗಳು ಹಿಮಾಚಲ ಪ್ರದೇಶ ಮೂಲದವು ಎಂಬುದು ಸರ್ಕಾರದ ದಾಖಲೆಗಳಿಂದ ತಿಳಿದುಬಂದಿದೆ.

ಕೋಟ್ಯಂತರ ರೂ. ಮೌಲ್ಯದ ಔಷಧ ಖರೀದಿ

ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್‌) ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಮೌಲ್ಯದ ಬ್ಯಾಂಡೇಜ್‌ ಕ್ಲಾತ್‌, ಕಾಟನ್‌, ಸರ್ಜಿಕಲ್‌ ಗ್ಲೌಸ್‌, ಗ್ಲೂಕೋಸ್‌ ಬಾಟಲ್‌, ಆ್ಯಂಟಿಬಯೋಟಿಕ್‌ ಮಾತ್ರೆಗಳು ಸೇರಿದಂತೆ ವಿವಿಧ ಔಷಧ ಹಾಗೂ ವೈದ್ಯಕೀಯ ಪರಿಕರಗಳನ್ನು ಖರೀದಿಸುತ್ತದೆ.

ಟೆಂಡರ್‌ ಪ್ರಕ್ರಿಯೆಯಲ್ಲಿ ಎಲ್‌-1 ಸ್ಥಾನ ಪಡೆದ ಕಂಪನಿಗಳಿಗೆ ಔಷಧ ಪೂರೈಕೆಯ ಕಾರ್ಯಾದೇಶ ನೀಡಲಾಗುತ್ತದೆ. ಈ ಕಂಪನಿಗಳು ನಿಗಮದ ಔಷಧ ಉಗ್ರಾಣಗಳಿಗೆ ಔಷಧಗಳನ್ನು ಪೂರೈಸುತ್ತವೆ. ಅಲ್ಲಿಂದ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಆರೋಗ್ಯ ಕೇಂದ್ರಗಳಿಗೆ ಬೇಡಿಕೆಯ ಆಧಾರದ ಮೇಲೆ ಔಷಧಗಳನ್ನು ವಿತರಿಸಲಾಗುತ್ತದೆ.

ನಿಗಮಕ್ಕೆ ಪೂರೈಕೆಯಾದ ವಿವಿಧ ಔಷಧಗಳ ಬ್ಯಾಚ್‌ಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಹಲವು ಔಷಧಗಳು ಗುಣಮಟ್ಟದ ಮಾನದಂಡಗಳನ್ನು ಪೂರೈಸದಿರುವುದು ಪತ್ತೆಯಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುವ ಔಷಧಗಳ ಮಾದರಿಗಳನ್ನು ಪರೀಕ್ಷಿಸಿದಾಗಲೂ ಕೆಲವು ಔಷಧಗಳು ಕಳಪೆ ಗುಣಮಟ್ಟ ಹೊಂದಿರುವುದು ಬೆಳಕಿಗೆ ಬಂದಿದೆ.

ಹೆಚ್ಚು ಮಾದರಿ ಸಂಗ್ರಹಿಸಿ ಪರೀಕ್ಷೆ ಅಗತ್ಯ

ರಾಜ್ಯದಲ್ಲಿ ಮೆಡಿಕಲ್‌ ಡಿಸ್ಟ್ರಿಬ್ಯೂಟರ್‌ಗಳ ಸಂಖ್ಯೆ ಹೆಚ್ಚುತ್ತಿದ್ದು, ಕೆಲವರು ನಿಯಮಗಳನ್ನು ಪಾಲಿಸುತ್ತಿದ್ದರೆ, ಇನ್ನೂ ಕೆಲವರು ನಿಯಮ ಉಲ್ಲಂಘಿಸುತ್ತಿದ್ದಾರೆ. ಪ್ರತಿಷ್ಠಿತ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ನಕಲಿಸಿ ಬಾಟಲ್‌ ಹಾಗೂ ಪ್ಯಾಕೆಟ್‌ಗಳ ಮೇಲೆ ಅಂಟಿಸಿ ಔಷಧಗಳನ್ನು ಮಾರಾಟ ಮಾಡುವ ದಂಧೆಯೂ ನಡೆಯುತ್ತಿದೆ ಎಂಬ ಆರೋಪಗಳಿವೆ.

ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯನ್ನು ಉಲ್ಲಂಘಿಸಿ ಕೆಲವು ಫಾರ್ಮಸಿಗಳು ಹಾಗೂ ಕ್ವಿಕ್‌ ಕಾಮರ್ಸ್‌ ಔಷಧ ವಿತರಣಾ ಆ್ಯಪ್‌ಗಳು ಔಷಧ ಮಾರಾಟ ಮಾಡುತ್ತಿರುವ ಆರೋಪಗಳೂ ಕೇಳಿಬರುತ್ತಿವೆ. ಆನ್‌ಲೈನ್‌ನಲ್ಲಿ ಮಾರಾಟವಾಗುವ ಕೆಲವು ಜೀವರಕ್ಷಕ ಔಷಧಗಳ ಗುಣಮಟ್ಟದ ಬಗ್ಗೆಯೂ ಅನುಮಾನಗಳು ವ್ಯಕ್ತವಾಗಿವೆ.

ನಕಲಿ ಔಷಧಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿರುವ ಔಷಧ ಆಡಳಿತ ಇಲಾಖೆಯ ಪ್ರಯೋಗಾಲಯವನ್ನು ಮತ್ತಷ್ಟು ಉನ್ನತೀಕರಿಸುವ ಅಗತ್ಯವಿದೆ. ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸುವುದರ ಜತೆಗೆ ಔಷಧಗಳ ವಿಶ್ಲೇಷಣೆ ನಡೆಸುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕು. ಮಾರುಕಟ್ಟೆಯಲ್ಲಿ ಸರಬರಾಜಾಗುವ ಔಷಧಗಳ ಮಾದರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಪರಿಣಾಮಕಾರಿಯಾಗಿ ಪರೀಕ್ಷಿಸಿದರೆ ಇನ್ನಷ್ಟು ಕಳಪೆ ಹಾಗೂ ನಕಲಿ ಔಷಧಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿದೆ.

ವರ್ಷವಾರು ಎನ್‌ಎಸ್‌ಕ್ಯೂ ಔಷಧಗಳ ಪತ್ತೆ

ವರ್ಷಪತ್ತೆಯಾದ ಔಷಧಗಳು
202116
202215
202312
202431
202521
2026ರ ಆ.18ರವರೆಗೆ3
ಒಟ್ಟು98

ಸಾರ್ವಜನಿಕರು ಎಚ್ಚರ ವಹಿಸಬೇಕು

ಔಷಧ ಖರೀದಿಸುವ ಮುನ್ನ ಬಳಕೆ ಅವಧಿ ಹಾಗೂ ದರವನ್ನು ಪರಿಶೀಲಿಸಬೇಕು. ವೈದ್ಯರ ಸಲಹೆ ಚೀಟಿ ಪಡೆದು ಔಷಧ ಖರೀದಿಸುವುದು ಸೂಕ್ತ. ಒಬ್ಬರಿಗೆ ವೈದ್ಯರು ಸೂಚಿಸಿರುವ ಔಷಧವನ್ನು ಮತ್ತೊಬ್ಬರು ವೈದ್ಯರ ಸಲಹೆಯಿಲ್ಲದೆ ಬಳಸಬಾರದು.

ಬಳಕೆ ಅವಧಿ ಮೀರಿದ ಔಷಧಗಳಲ್ಲಿ ರಾಸಾಯನಿಕ ಬದಲಾವಣೆ ಸಂಭವಿಸುವ ಸಾಧ್ಯತೆ ಇದ್ದು, ಅವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ನಕಲಿ ಔಷಧ ಸೇವನೆಯಿಂದ ದೇಹಕ್ಕೆ ತೀವ್ರ ಹಾನಿಯಾಗುವ ಸಾಧ್ಯತೆಯಿದ್ದು, ಕೆಲವು ಸಂದರ್ಭಗಳಲ್ಲಿ ಔಷಧಗಳು ವಿಷಕಾರಿಯಾಗುವ ಅಪಾಯವೂ ಇದೆ.

“ವಿಷಪೂರಿತ, ದೋಷಯುಕ್ತ ಅಥವಾ ಪ್ರಮಾಣಿತ ಮಾನದಂಡಗಳಿಗೆ ಅನುಗುಣವಾಗದ ಅಂಶಗಳನ್ನು ಒಳಗೊಂಡ ಔಷಧಗಳನ್ನು ಉತ್ಪಾದಿಸುವುದು, ವಿತರಿಸುವುದು ಮತ್ತು ಮಾರಾಟ ಮಾಡುವುದು ಗಂಭೀರ ಅಪರಾಧ. ಇಂತಹ ಕಳಪೆ ಗುಣಮಟ್ಟದ ಔಷಧಗಳು ರೋಗಿಗಳ ಆರೋಗ್ಯಕ್ಕೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೂ ಮಾರಕ ಪರಿಣಾಮ ಬೀರಲಿವೆ.”

ಡಾ. ನಿರಂಜನ್‌ ಎಲ್ಲೂರು, ಕಾರ್ಯದರ್ಶಿ, ಕರ್ನಾಟಕ ರಾಜ್ಯ ಇಂಟಿಗ್ರೇಟೆಡ್‌ ಮೆಡಿಕಲ್‌ ಪ್ರಾಕ್ಟಿಷನರ್ಸ್‌ ಅಸೋಸಿಯೇಷನ್‌

RELATED ARTICLES
spot_img

Latest News