Homeಜಿಲ್ಲಾ ಸುದ್ದಿಗಳು5 ರೂ.ಗೆ ಕಾಫಿ, ಟೀ ನೀಡುವ ಚಿನ್ನಸ್ವಾಮಿ

5 ರೂ.ಗೆ ಕಾಫಿ, ಟೀ ನೀಡುವ ಚಿನ್ನಸ್ವಾಮಿ

ತಿ.ನರಸೀಪುರ,ಅ.31-ಮಂಡ್ಯದ ಡಾ. ಶಂಕರೇಗೌಡರು ಕೇವಲ ಐದು ರೂಪಾಯಿಗೆ ವೈದ್ಯಕೀಯ ಸೇವೆ ನೀಡುವ ಮೂಲಕ ಜನಮನ್ನಣೆ ಗಳಿಸಿದ್ದರೆ, ತಿ.ನರಸೀಪುರದ ಚಿನ್ನಸ್ವಾಮಿ ಅವರು ಹಾಲಿನ ಬೆಲೆ ಏರಿಕೆಯ ಬಿಸಿಯ ನಡುವೆಯೂ ಕೇವಲ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಜನವರಿ 1ರಿಂದ ಪ್ರತಿ ಲೀಟರ್‌ ಹಾಲಿನ ದರದಲ್ಲಿ 8 ರೂಪಾಯಿ ಏರಿಕೆಯಾಗುತ್ತಿರುವುದು ಜನಸಾಮಾನ್ಯರ ಜೇಬಿಗೆ ಹೊರೆಯಾಗಲಿದೆ. ಹಾಲಿನ ದರ ಏರಿಕೆಯ ನೇರ ಪರಿಣಾಮ ಹೋಟೆಲ್‌ಗಳು, ಟೀ ಅಂಗಡಿಗಳು ಹಾಗೂ ಸಣ್ಣಪುಟ್ಟ ಕ್ಯಾಂಟೀನ್‌ಗಳ ಮೇಲೂ ಬೀಳಲಿದ್ದು, ಈಗಾಗಲೇ ಟೀ ಮತ್ತು ಕಾಫಿ ದರಗಳು ಗ್ರಾಹಕರಿಗೆ ಹೊರೆಯಾಗಿವೆ. ಸಣ್ಣ ಟೀ ಅಂಗಡಿಗಳಲ್ಲಿ 10 ರೂಪಾಯಿ ಹಾಗೂ ಸಾಮಾನ್ಯ ಹೋಟೆಲ್‌ಗಳಲ್ಲಿ 15 ರೂಪಾಯಿ ಇರುವ ಟೀ, ಕಾಫಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಆದರೆ, ಬೆಲೆ ಏರಿಕೆಯ ಈ ಹೊತ್ತಿನಲ್ಲಿ ಪಟ್ಟಣದ ನ್ಯಾಯಾಲಯದ ಸಮೀಪವಿರುವ ಪುಟ್ಟ ಗುಡಿಸಲಿನ ಮಾದರಿಯ ಕ್ಯಾಂಟೀನ್‌ನಲ್ಲಿ ಮಲೆ ಮಹದೇಶ್ವರ ಟೀ ಕಾನರ್ರ ಹೆಸರಿನಲ್ಲಿ ವ್ಯಾಪಾರ ನಡೆಸುತ್ತಿರುವ ಚಿನ್ನಸ್ವಾಮಿ ಮಾತ್ರ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟದಂತೆ ನೋಡಿಕೊಳ್ಳುತ್ತಿದ್ದಾರೆ.

ಸರ್ಕಾರ ಹಾಲಿನ ಪ್ರತಿ ಲೀಟರ್‌ಗೆ 8 ರೂಪಾಯಿ ದರ ಹೆಚ್ಚಳ ಮಾಡಿದರೂ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಹಾಕುವುದಿಲ್ಲ. ಹಿಂದಿನಂತೆಯೇ ಐದು ರೂಪಾಯಿಗೆ ಟೀ ಮತ್ತು ಕಾಫಿ ನೀಡುವುದನ್ನು ಮುಂದುವರಿಸುತ್ತೇನೆ ಎಂಬುದು ಚಿನ್ನಸ್ವಾಮಿ ಅವರ ಸ್ಪಷ್ಟ ನಿಲುವು.

RELATED ARTICLES

Latest News