ಬೆಂಗಳೂರು, ಅ.31- ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರಲ್ಲಿ ಸಸ್ಯಾಹಾರ ಬಿರಿಯಾನಿ ಆರ್ಡರ್ ಮಾಡಿದ ಕುಟುಂಬಕ್ಕೆ ಮಾಂಸಾಹಾರ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಿಮಾನ ನಿಲ್ದಾಣದ 16 ಮತ್ತು 17ನೇ ಗೇಟ್ ಸಮೀಪವಿರುವ ಖಾಸಗಿ ರೆಸ್ಟೋರೆಂಟ್ನಲ್ಲಿ ಕುಟುಂಬವೊಂದು ಸಸ್ಯಾಹಾರ ಬಿರಿಯಾನಿ ಆರ್ಡರ್ ಮಾಡಿತ್ತು. ಬಿಲ್ನಲ್ಲಿಯೂ ಸಸ್ಯಾಹಾರ ಬಿರಿಯಾನಿ ಎಂದೇ ನಮೂದಿಸಲಾಗಿತ್ತು. ಆದರೆ ಗ್ರಾಹಕರಿಗೆ ನೀಡಿದ ಆಹಾರದಲ್ಲಿ ಕೋಳಿ ಮಾಂಸ ಇತ್ತು ಎಂದು ಕುಟುಂಬ ಆರೋಪಿಸಿದೆ.
ಕುಟುಂಬದ ಸದಸ್ಯರು ಮಾತ್ರವಲ್ಲದೆ, ಮಕ್ಕಳು ಕೂಡ ಆಹಾರವನ್ನು ಸಸ್ಯಾಹಾರವೆಂದು ಭಾವಿಸಿ ಸೇವಿಸಿದ್ದಾರೆ. ಇದರಿಂದ ತೀವ್ರ ಆಘಾತ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸಂಬಂಧ ರೆಸ್ಟೋರೆಂಟ್ ವ್ಯವಸ್ಥಾಪಕ ಹಾಗೂ ಅಡುಗೆ ಸಿಬ್ಬಂದಿಯನ್ನು ಪ್ರಶ್ನಿಸಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಸಿಬ್ಬಂದಿಯೂ ಆಹಾರದಲ್ಲಿ ಕೋಳಿ ಮಾಂಸವಿದ್ದುದನ್ನು ಒಪ್ಪಿಕೊಂಡಿದ್ದಾರೆ ಎಂದು ಕುಟುಂಬದವರು ತನ್ನ ದೂರಿನಲ್ಲಿ ತಿಳಿಸಿದೆ.
ಈ ಘಟನೆ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರ, ಬೆಂಗಳೂರು ವಿಮಾನ ನಿಲ್ದಾಣದ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಬೇಕು. ಸಿಸಿ ಕ್ಯಾಮೆರಾ ದೃಶ್ಯಾವಳಿ, ಆಹಾರದ ತಯಾರಿಕೆ ಮತ್ತು ಗ್ರಾಹಕರ ಆರ್ಡರ್ ದಾಖಲೆಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬ ಮನವಿ ಮಾಡಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ವ್ಯಕ್ತಿಯೊಬ್ಬರು, ಪ್ರಧಾನಮಂತ್ರಿ ಕಚೇರಿ, ಕರ್ನಾಟಕ ಮುಖ್ಯಮಂತ್ರಿ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೂ ಪ್ರಕರಣವನ್ನು ತಂದಿದ್ದಾರೆ.
