ಬೆಂಗಳೂರು: ವಿಶೇಷಚೇತನರನ್ನು ಆರ್ಥಿಕವಾಗಿ ಸ್ವಾಲವಂಬಿಗಳನ್ನಾಗಿ ಮಾಡಲು ಡಿಯಾಜಿಯೊ ಇಂಡಿಯಾ, ಅಂಗವಿಕಲ ವ್ಯಕ್ತಿಗಳ ಕೌಶಲ್ಯ ಮಂಡಳಿ ಸಹಭಾಗಿತ್ವದಲ್ಲಿ ಕೌಶಲ್ಯ ತರಬೇತಿ ನೀಡುತ್ತಿದ್ದು, ಈ ವರ್ಷದಲ್ಲಿ 100 ವಿಶೇಷಚೇತನರು ಪದವಿ ಪಡೆದುಕೊಂಡು ಉತ್ತೀರ್ಣರಾಗಿದ್ದಾರೆ.
ನಗರದಲ್ಲಿ ನಡೆದ ಘಟಿಕೋತ್ಸವದಲ್ಲಿ ಉತ್ತೀರ್ಣ ವಿಶೇಷಚೇತನರಿಗೆ ಪದವಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಡಿಯಾಜಿಯೊ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಪ್ರದೀಪ್, ದೈಹಿಕ ವೈಖಲ್ಯ ಇರುವವರಲ್ಲೂ ಕೌಶಲ್ಯವಿರುತ್ತದೆ ಅವರಿಗೆ ಸೂಕ್ತ ತರಬೇತಿ ನೀಡಿದರೆ, ತಮ್ಮ ಸ್ವಪ್ರಯತ್ನದಿಂದಲೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು, ಇದಕ್ಕೆ ಅವರಿಗೂ ಸೂಕ್ತ ಕೌಶಲ್ಯ ತರಬೇತಿ ನೀಡುವುದು ಅನಿವಾರ್ಯ, ಹೀಗಾಗಿ ಕೌಶಲ್ಯ ಮಂಡಳಿಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಸಕ್ತ ವಿಕಲಚೇತರಿಗೆ ಎಫ್&ಬಿ ಸರ್ವಿಸಸ್, ಹಾಸ್ಪೆಟಾಲಿಸಿ ಆಪರೇಷನ್ಸ್, ಕಸ್ಟಮರ್ ಸರ್ವಿಸ್, ಸಾಫ್ಟ್ ಸ್ಕಿಲ್ಸ್ ಸೇರಿದಂತೆ ಹಲವು ರೀತಿಯ ತರಬೇತಿ ನೀಡಲಾಗುತ್ತಿದೆ.
ಇವರಿಗೆ ಅರ್ಹ ತರಬೇತುದಾರರಿಂದ ತರಬೇತಿ ಕೊಡಿಸಲಾಗುತ್ತಿದೆ. ಈ ಶೈಕ್ಷಣಿಕ ಸಾಲಿನಲ್ಲಿ 100 ವಿಶೇಷಚೇತನರಿಗೆ ಪದವಿ ವಿತರಿಸಲಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ವಿಶೇಷಚೇತನರು ಇದರ ಪ್ರಯೋಜನ ಪಡೆದುಕೊಂಡು ತಮ್ಮ ಸ್ವಶಕ್ತಿಯಿಂದಲೇ ಜೀವನ ನಡೆಸುವ ಸಾಮರ್ಥ್ಯ ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಭಾರತಾದ್ಯಂತ ಈ ರೀತಿಯ ತರಬೇತಿ ನೀಡುತ್ತಾ ಬರಲಾಗಿದ್ದು, ಈ ಕೇಂದ್ರದಲ್ಲಿ ತರಬೇತಿ ಪಡೆದು ಉತ್ತೀರ್ಣರಾದ ವಿಕಲಚೇತನರಿಗೆ ಉದ್ಯೋಗ ಖಾತ್ರಿಯನ್ನೂ ನೀಡಲಾಗುತ್ತಿದೆ. ಇದಕ್ಕಾಗಿ ಸಾಕಷ್ಟು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅರ್ಹ ಪದವೀಧರರಿಗೆ ಉದ್ಯೋಗ ಕೂಡ ದೊರೆಯಲಿದೆ ಎಂದರು.
