Thursday, April 30, 2026
HomeEesanje Newsಸದನದಲ್ಲಿ ಮುನಿರತ್ನ - ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಚಕಮಕಿ

ಸದನದಲ್ಲಿ ಮುನಿರತ್ನ – ಡಿ.ಕೆ.ಶಿವಕುಮಾರ್ ನಡುವೆ ಮಾತಿನ ಚಕಮಕಿ

ಬೆಂಗಳೂರು,ಮಾ.26- ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತಲ್ಲದೆ ಆಡಳಿತ ಪಕ್ಷದ ಶಾಸಕರು ಧರಣಿ ನಡೆಸಿದ ಪ್ರಸಂಗ ವಿಧಾನಸಭೆಯಲ್ಲಿಂದು ಜರುಗಿತು. ಬೆಂಗಳೂರು ನಗರದ ಅಭಿವೃದ್ಧಿ ಕುರಿತಂತೆ ನಡೆದ ಚರ್ಚೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉತ್ತರಿಸುವಾಗ ಆಡಿದ ಮಾತು ಮುನಿರತ್ನ ಅವರನ್ನು ಕೆರಳಿಸಿತು. ಪ್ರತಿಯಾಗಿ ಮುನಿರತ್ನ ಅವರೂ ಕೂಡ ಏರಿದ ಧ್ವನಿಯಲ್ಲಿ ಮಾತನಾಡಿದರು.

ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.
ವಿರೋಧಪಕ್ಷದ ನಾಯಕ ಆರ್.ಅಶೋಕ್ ಮಧ್ಯಪ್ರವೇಶಿಸಿ, ವೈಯಕ್ತಿಕ ವಿಚಾರ ಚರ್ಚೆಯಾಗುವುದು ಬೇಡ, ಉಪಮುಖ್ಯಮಂತ್ರಿ ಹಾಗೂ ಶಾಸಕರು ಬಳಸಿರುವ ಶಬ್ದಗಳನ್ನು ಮತ್ತು ವಿಚಾರವನ್ನು ಕಡತದಿಂದ ತೆಗೆಸಿ ಎಂಬ ಸಲಹೆ ಮಾಡಿದರು. ಮುನಿರತ್ನ ಅವರನ್ನು ಸಮಾಧಾನಪಡಿಸಲು ಸಭಾಧ್ಯಕ್ಷರು ಪದೇಪದೇ ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಬಿಜೆಪಿಯ ಶಾಸಕರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಮೊದಲಾದವರು ಮುನಿರತ್ನ ಅವರ ಬಳಿ ತೆರಳಿ ಸಮಾಧಾನಪಡಿಸುವ ಯತ್ನವನ್ನೂ ಮಾಡಿದರು.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಬೆಂಗಳೂರು ಅಭಿವೃದ್ಧಿ ಕುರಿತಂತೆ ಪ್ರಸ್ತಾಪವಾದ ವಿಚಾರಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳನ್ನು ಕಡತದಿಂದ ತೆಗೆಯಲು ಸೂಚಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸುದೀರ್ಘ ಉತ್ತರ ನೀಡಿದ ನಂತರ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಳ್ಳಲು ಮುಂದಾದರು. ಆಗ ಮತ್ತೆ ಎದ್ದುನಿಂತ ಮುನಿರತ್ನ ಅವರು ಹಠ ಹಿಡಿದು ಮಾತನಾಡಲು ಅವಕಾಶ ಕೋರಿದರು.

ಉಪಮುಖ್ಯಮಂತ್ರಿ ಉದ್ದೇಶಿಸಿ ಆಡಿದ ಮಾತು ಕಾಂಗ್ರೆಸ್ ಶಾಸಕರನ್ನು ಕೆರಳಿ ಕೆಂಡವಾಗುವಂತೆ ಮಾಡಿತು. ಮುನಿರತ್ನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಾಗೂ ಈ ಬಗ್ಗೆ ರೂಲಿಂಗ್ ನೀಡಬೇಕು ಎಂದು ಆಗ್ರಹಿಸಿ ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಕೆಲಕಾಲ ಧರಣಿ ನಡೆಸಿದರು. ಆ ಸಂದರ್ಭದಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷರ ಕಚೇರಿಯಲ್ಲಿ ಅಧಿಕಾರಿಗಳನ್ನು ಕರೆಸಿ ಶಾಸಕರ ಸಮಸ್ಯೆ ಇತ್ಯರ್ಥಪಡಿಸಲು ಸಲಹೆ ಮಾಡಿದರು.

ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಅಶೋಕ್ ಮಾತನಾಡಿ, ಬೆಂಗಳೂರು ವಿಚಾರವಾಗಿ ಒಳ್ಳೆಯ ಚರ್ಚೆ ನಡೆದಿದ್ದು, ಉಪಮುಖ್ಯಮಂತ್ರಿ ಸಕಾರಾತಕವಾಗಿ ಹೇಳಿದ್ದಾರೆ. ಈ ವಿಚಾರವನ್ನು ಇಲ್ಲಿಗೇ ಮುಕ್ತಾಯಗೊಳಿಸಿ ಬೆಂಗಳೂರು ಹೊರತುಪಡಿಸಿದ ವಿಚಾರವನ್ನು ಕಡತದಿಂದ ತೆಗೆಸಬೇಕು ಎಂಬ ವಿಚಾರವನ್ನು ಸಲಹೆ ಮಾಡಿದರು. ಈ ಹಂತದಲ್ಲಿ ಡಿಸಿಎಂ ಎದ್ದು ನಿಂತು ಏರಿದ ಧ್ವನಿಯಲ್ಲಿ ಮಾತನಾಡಿದರು.
ಅಶೋಕ್ ಮಾತು ಮುಂದುವರೆಸಿ ಇತಿಹಾಸದಲ್ಲಿ ಆಡಳಿತ ಪಕ್ಷದವರು ಧರಣಿ ಮಾಡಿಲ್ಲ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು.

ಆಡಳಿತ ಪಕ್ಷದ ಹಿರಿಯ ಶಾಸಕ ಸಿ.ಎಸ್.ಅಪ್ಪಾಜಿ ನಾಡಗೌಡ ಮಾತನಾಡಿ, 1989 ರಿಂದಲೂ ಸದನದಲ್ಲಿ ಇದ್ದೇನೆ. ಇಂತಹ ಘಟನೆ ನಡೆದಿರಲಿಲ್ಲ. ಸದನದ ಗೌರವ ಕಾಪಾಡಬೇಕು. ಇಲ್ಲದಿದ್ದರೆ ಪಂಚಾಯಿತಿ ಸದಸ್ಯರೂ ಗೌರವ ಕೊಡುವುದಿಲ್ಲ. ಈ ಬಗ್ಗೆ ಸಭಾಧ್ಯಕ್ಷರು ರೂಲಿಂಗ್ ನೀಡಬೇಕು ಎಂದು ಆಗ್ರಹಿಸಿದರು. ಬಳಿಕ ಸಭಾಧ್ಯಕ್ಷ ಮಾತನಾಡಿ, ಇಷ್ಟು ದಿನಗಳ ಕಾಲ ಅಧಿವೇಶನ ಚೆನ್ನಾಗಿ ನಡೆದಿದೆ. ಇಂದು ಕಡೆಯ ದಿನ. ಬೆಂಗಳೂರು ವಿಚಾರವಾಗಿ ಚರ್ಚೆಯಾಗಿ ಉತ್ತರವನ್ನೂ ನೀಡಲಾಗಿದೆ. ಆದರೆ ಸದಸ್ಯರೊಬ್ಬರು ಆಗಾಗ ಎದ್ದುನಿಂತು ಮಾತನಾಡಲು ಆಗ್ರಹಿಸಿದ್ದಾರೆ. ಮೊನ್ನೆ ಈ ವಿಚಾರದ ಬಗ್ಗೆ ಚರ್ಚೆ ನಡೆಯುವಾಗ ಮಾತನಾಡಬೇಕಿತ್ತು ಎಂದರು.

ಅಲ್ಲದೆ ಬಿಬಿಎಂಪಿ ವಿಚಾರ ಹೊರತುಪಡಿಸಿ ಉಳಿದೆಲ್ಲಾ ವಿಷಯವನ್ನು ಕಡತದಿಂದ ತೆಗೆಯಲು ಸೂಚನೆ ನೀಡಿದರು. ಈ ರೀತಿಯ ಘಟನೆ ಸದನದಲ್ಲಿ ಆಗಬಾರದಿತ್ತು. ಇದರ ಬಗ್ಗೆ ಎಲ್ಲರೂ ಆತಾವಲೋಕನ ಮಾಡಿಕೊಳ್ಳಬೇಕು. ತಾಕತ್ತು ಇದ್ದವರೇ ಸದನಕ್ಕೆ ಬಂದಿರುವುದು, ಇಲ್ಲದವರು ಯಾರೂ ಇಲ್ಲ. ಶಕ್ತಿ ತೋರಿಸುವುದಾಗಲೀ, ಸವಾಲು ಹಾಕುವುದಾಗಲೀ ಸದನದಲ್ಲಿ ಮಾಡಬಾರದು. ವಿಧಾನಸಭೆ ತಾಕತ್ತು ತೋರಿಸುವ ಸ್ಥಳವಲ್ಲ. ಇದು ಜನತೆಗೆ ತಪ್ಪು ಸಂದೇಶ ರವಾನಿಸುತ್ತದೆ. ಕರ್ನಾಟಕದಲ್ಲಿ ರಿವೇಂಜ್ ರಾಜಕೀಯ ಇಲ್ಲ. ಮಾನವೀಯತೆ ವಿಷಯಾಧಾರಿತವಾದ ರಾಜ್ಯವಿದು. ಇಂತಹ ರಾಜ್ಯದಲ್ಲಿ ಕಪ್ಪುಚುಕ್ಕೆಯ ಕೆಲಸ ಆಗಬಾರದು ಎಂದು ತಿಳಿ ಹೇಳಿದರು. ಸದನದ, ರಾಜ್ಯದ ಗೌರವ ಕಾಪಾಡಲು ಆಡಳಿತ ಪಕ್ಷದ ಶಾಸಕರು ಸ್ವಸ್ಥಾನಕ್ಕೆ ಮರಳಿ ಮುಂದಿನ ಕಾರ್ಯಕಲಾಪಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು. ತಮ ಸೂಚನೆಯನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದಲ್ಲ, ಮಾನವೀಯ ದೃಷ್ಟಿಯಿಂದ ನೋಡಲಾಗಿದೆ. ಪದೇಪದೇ ಸದನದ ಕಲಾಪಕ್ಕೆ ಅಡ್ಡಿಪಡಿಸಿದಾಗ ಸರ್ಕಾರ ಅಂತವರ ಹೆಸರನ್ನು ಸೂಚಿಸಬೇಕು. ಆನಂತರ ರೂಲಿಂಗ್ ಕೊಡಬಹುದು. ಸದನದಲ್ಲಿ ಇಂತಹ ಘಟನೆ ನಡೆಯಬಾರದಿತ್ತು. ಈ ಘಟನೆಯನ್ನು ನಾನೂ ಕೂಡ ವೈಯಕ್ತಿಕವಾಗಿ ಖಂಡಿಸುತ್ತೇನೆ ಎಂದು ಹೇಳಿ ಧರಣಿ ನಿರತ ಆಡಳಿತ ಪಕ್ಷದ ಶಾಸಕರನ್ನು ಸ್ವಸ್ಥಾನಕ್ಕೆ ಮರಳುವಂತೆ ಮನವಿ ಮಾಡಿದರು. ಆಗ ಧರಣಿ ಬಿಟ್ಟು ಸ್ವಸ್ಥಾನಕ್ಕೆ ತೆರಳಿದರು. ಸಭಾಧ್ಯಕ್ಷರು ಮುಂದಿನ ಕಾರ್ಯಕಲಾಪವನ್ನು ಕೈಗೆತ್ತಿಕೊಂಡರು.

RELATED ARTICLES

Latest News