Sunday, April 19, 2026
Homeರಾಜ್ಯಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆ : ಕೇಂದ್ರ ಸಚಿವರ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ

ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆ : ಕೇಂದ್ರ ಸಚಿವರ ರಾಜಿನಾಮೆಗೆ ಕಾಂಗ್ರೆಸ್ ಆಗ್ರಹ

Incompetent management of fuel system: Congress demands resignation of Union ministers

ಬೆಂಗಳೂರು,ಏ.7- ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೃತೃತ್ವದ ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಮತ್ತು ಇಂಧನ ವ್ಯವಸ್ಥೆಯ ಅಸಮರ್ಥ ನಿರ್ವಹಣೆಯಿಂದ 5 ಲಕ್ಷಕ್ಕೂ ಹೆಚ್ಚು ಜನ ಆಟೋ ಚಾಲಕರ ಜೀವನ ಧ್ವಂಸಗೊಂಡಿದೆ. ಇದರ ನೈತಿಕ ಹೊಣೆಹೊತ್ತು ಕೇಂದ್ರ ಸಚಿವರು ತಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್‌‍ ಆಗ್ರಹಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಕೇಂದ್ರದ ಅಸಮರ್ಥ ನಿರ್ವಹಣೆಯಿಂದ ಕರ್ನಾಟಕದಾದ್ಯಂತ ಜನರ ಜೀವನೋಪಾಯವನ್ನು ನಾಶಪಡಿಸಿದೆ. ಇದು ಕೇವಲ ನೀತಿಯ ವೈಫಲ್ಯವಲ್ಲ. ಬದಲಿಗೆ ಕೇಂದ್ರ ಬಿಜೆಪಿ ಸರ್ಕಾರದ ಉದಾಸೀನತೆ, ಅಹಂಕಾರ ಮತ್ತು ಸಂಪೂರ್ಣ ಆಡಳಿತಾತಕ ದುರಂತಕ್ಕೆ ಸಾಕ್ಷಿ ಎಂದು ಕಿಡಿ ಕಾರಿದ್ದಾರೆ.

ಕರ್ನಾಟಕದ ಬಿಜೆಪಿ-ಜೆಡಿಎಸ್‌‍ ಕೇಂದ್ರ ಸಚಿವರು ಅಧಿಕಾರವನ್ನು ಆನಂದದಿಂದ ಅನುಭವಿಸುತ್ತಿದ್ದಾರೆ. ಜನಸಾಮಾನ್ಯರ ಈ ಪರಿಸ್ಥಿತಿಗೆ ಅವರು ಉತ್ತರದಾಯಿಯಾಗಿರಬೇಕು ಅಥವಾ ತಮ ಸಚಿವ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

2026 ಮಾರ್ಚ್‌ ನಲ್ಲಿ ಆಟೋ ಗ್ಯಾಸ್‌‍, ಎಲ್‌ಪಿಜಿ ಬೆಲೆ ಲೀ. 58 ರಿಂದ 61 ಇತ್ತು. ಇಂದು ಅದು 105 ರಿಂದ 120ಕ್ಕೆ ಏರಿಕೆಯಾಗಿದ್ದು, ಕೆಲವೇ ವಾರಗಳಲ್ಲಿ ಶೇ.106 ರಷ್ಟು ಬೆಲೆ ಏರಿಕೆಯಾಗಿದೆ. ಖಾಸಗಿ ಅನಿಲ ಪೂರೈಕೆ ಕೇಂದ್ರಗಳಲ್ಲಿ ಲೀ.125 ರಿಂದ 135 ಹಣ ವಸೂಲಿ ಮಾಡಲಾಗುತ್ತಿದೆ. ಸಿಎನ್‌ಜಿ ಆಟೋಗಳೂ ಸಹ ಕರ್ನಾಟಕದಾದ್ಯಂತ ತೀವ್ರ ಕೊರತೆ ಎದುರಿಸುತ್ತಿವೆ. ಬೆಲೆ ಏರಿಕೆ ಮತ್ತು ಕೊರತೆಯಿಂದ ಆಟೋ ಚಾಲಕರು ಕಂಗಾಲಾಗಿದ್ದಾರೆ. ಇಷ್ಟಾದರೂ ಬಿಜೆಪಿ ನಾಯಕರು ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಕಡಿಮೆ ಬೆಲೆಗೆ ಅನಿಲ ಪೂರೈಕೆ ಮಾಡುವ ಸರ್ಕಾರಿ ಕೇಂದ್ರಗಳು ಮುಚ್ಚಲ್ಪಟ್ಟಿವೆ. ಇದು ಹಣದುಬ್ಬರವಲ್ಲ, ಶ್ರಮಿಕ ವರ್ಗದ ಮೇಲೆ ನಡೆಸುತ್ತಿರುವ ಆರ್ಥಿಕ ದೌರ್ಜನ್ಯ. ಬೆಂಗಳೂರಿನಲ್ಲಿ 60 ರಿಂದ 70 ಎಲ್‌ಪಿಜಿ, ಸಿಎನ್‌ಜಿ ನಿಲ್ದಾಣಗಳಿದ್ದವು, ಈಗ ಕೇವಲ 10 ರಿಂದ 15 ಮಾತ್ರ ಕಾರ್ಯನಿರ್ವಹಿಸುತ್ತಿವೆ. ಅಂದರೆ ಸುಮಾರು ಶೇ. 80 ರಷ್ಟು ನಿಲ್ದಾಣಗಳು ಬಂದ್‌ ಆಗಿವೆ. ನಗರದಲ್ಲಿ ಟೋಟಲ್‌ ಗ್ಯಾಸ್‌‍ ತನ್ನ ಎಲ್ಲಾ ಕೇಂದ್ರಗಳನ್ನು ಮುಚ್ಚಿದೆ ಎಂದು ವಿವರಿಸಿದ್ದಾರೆ.

ದೈನಂದಿನ ಪೂರೈಕೆಯು 12 ಸಾವಿರ ಲೀ.ನಿಂದ 6 ಸಾವಿರ ಲೀ.ಗೆ ಕುಸಿದಿದೆ. ಪ್ರತಿ ವಾಹನಕ್ಕೆ 400 ನಷ್ಟು ಮಾತ್ರ ಇಂಧನ ಅನಿಲ ವಿತರಿಸಲಾಗುತ್ತಿದೆ. ಆಟೋ ಚಾಲಕರು ಬೆಳಿಗ್ಗೆ 5 ಗಂಟೆಯಿಂದ 3 ಕಿ.ಮೀ. ಉದ್ದದ ಸಾಲಿನಲ್ಲಿ ನಿಂತರೂ ಖಾಲಿ ಕೈಯಲ್ಲಿ ಮರಳುತ್ತಿದ್ದಾರೆ. ಆಟೋ ಚಾಲಕರು ಸರದಿ ಸಾಲಿನಲ್ಲಿ ಕಳೆಯುವ ಪ್ರತಿಯೊಂದು ಗಂಟೆಯೂ ಅವರ ಕುಟುಂಬದ ಅನ್ನವನ್ನು ಕಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ 5 ಲಕ್ಷಕ್ಕೂ ಹೆಚ್ಚು ಆಟೋಗಳಿದ್ದು, ಇವು ಸಾಮಾನ್ಯ ಜನರ ಸಂಚಾರದ ಬೆನ್ನೆಲುಬಾಗಿದೆ. ಈ ಆಟೋ ಚಾಲಕರು ಕಾರ್ಪೊರೇಟ್‌ ಸಂಸ್ಥೆಗಳಲ್ಲ, ದಿನಗೂಲಿ ನೌಕರರು. ಪ್ರತಿ ನಿತ್ಯ, ಪ್ರತಿ ಬಾಡಿಗೆಯ ಸಂಪಾದನೆ ಮೇಲೆ ಅವರ ಜೀವನ ಅವಲಂಬಿತವಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ಆಟೋಗಳು ರಸ್ತೆಗೆ ಇಳಿಯುತ್ತಿಲ್ಲ. ಉಳಿದ ಆಟೋಗಳು ಅರ್ಧ ದಿನವನ್ನು ಸರತಿ ಸಾಲಿನಲ್ಲಿ ಕಾಲ ಕಳೆಯುತ್ತಿವೆ ಎಂದು ದುಗುಡ ತೋಡಿಕೊಂಡಿದ್ದಾರೆ.

ಪೆಟ್ರೋಲ್‌ಗೆ ಬದಲಾಗಿ ಎಂಬ ಮೋದಿ ಸರ್ಕಾರದ ಪುಕ್ಕಟೆ ಸಲಹೆ ಅಜ್ಞಾನ ಮತ್ತು ಕ್ರೌರ್ಯದಿಂದ ಕೂಡಿದೆ. ಈಗಾಗಲೇ ಅನೇಕ ಆಟೋಗಳು ಪೆಟ್ರೋಲ್‌ನಿಂದ ಗ್ಯಾಸ್‌‍ಗೆ ಬದಲಾಗಿವೆ ಮತ್ತು ಪೆಟ್ರೋಲ್‌ ಬೆಲೆ ಏರಿಕೆಯಿಂದಾಗಿ ಅದು ದುಬಾರಿಯಾಗಿದೆ ಎಂದು ಹೇಳಿದ್ದಾರೆ.

ಏ.1ರಂದು ವಾಣಿಜ್ಯ ಸಿಲಿಂಡರ್‌ ಬೆಲೆ 200 ಏರಿಕೆಯಾಗಿದ್ದು, ಒಂದು ಸಿಲಿಂಡರ್‌ ಬೆಲೆ 2 ಸಾವಿರ ದಾಟಿದೆ. ಪ್ರಸ್ತುತ ಒಂದು ಸಿಲಿಂಡರ್‌ ಬೆಲೆ 2,161 ಆಗಿದ್ದು, ಬೆಲೆ ಇನ್ನೂ ಏರುತ್ತಲೇ ಇದೆ. ಇತ್ತೀಚಿನ ವರದಿಗಳ ಪ್ರಕಾರ, ಕಾಳಸಂತೆಯಲ್ಲಿ ಒಂದು ಸಿಲಿಂಡರ್‌ 6 ಸಾವಿರಕ್ಕೆ ಮಾರಾಟವಾಗುತ್ತಿದೆ. ಇದರಿಂದ ಲಕ್ಷಾಂತರ ಸಣ್ಣ ಹೋಟೆಲ್‌ಗಳು, ರಸ್ತೆಬದಿಯ ಡಾಬಾ, ತಳ್ಳುಗಾಡಿ ವ್ಯಾಪಾರಿಗಳು ಮತ್ತು ಫುಡ್‌ ಡೆಲಿವರಿ ಮಾಡುವ ಗಿಗ್‌ ಕಾರ್ಮಿಕರ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ವಿವರಿಸಿದ್ದಾರೆ.

ಭಾರತದಲ್ಲಿ ಎಲ್‌ಪಿಜಿ ಪೂರೈಕೆಯನ್ನು ಕೇಂದ್ರ ಸರ್ಕಾರವು ಒಎಂಸಿಗಳ ಮೂಲಕ ನಿಯಂತ್ರಿಸುತ್ತದೆ. ಇದರ ಸಂಪೂರ್ಣ ಜವಾಬ್ದಾರಿ ಮೋದಿ ಸರ್ಕಾರದ್ದೇ ಆಗಿದೆ. ಇಂಧನ ಅನಿಲ ಸಂಗ್ರಹಣೆ ಹಾಗೂ ಪೂರೈಕೆ ಕುರಿತ ಸಂಪೂರ್ಣ ನಿಯಂತ್ರಣ ಮೋದಿ ಸರ್ಕಾರದಾಗಿದ್ದು, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇಂಧನ ಅನಿಲ ಪೂರೈಕೆ ಎದುರಾಗಿರುವ ಕೊರತೆ ಬಗ್ಗೆ ಹಾಕಲಾಗಿರುವ ಫಲಕಗಳನ್ನು ಒಎಂಸಿಗಳು ನಿರ್ಲಕ್ಷಿಸಿರುವುದು ಕೇಂದ್ರ ಬಿಜೆಪಿ ಸರ್ಕಾರದ ಆಡಳಿತ ಕುಸಿತಕ್ಕೆ ಸಾಕ್ಷಿಯಾಗಿದೆ. ಎಲ್‌ಪಿಜಿ ಕಾಳಸಂತೆ ರಾಜಾರೋಷವಾಗಿ ನಡೆಯುತ್ತಿದ್ದು, ಖಾಸಗಿ ತೈಲ ಕಂಪನಿಗಳು ಇಂಧನ ತೈಲ ಬೆಲೆ ಏರಿಕೆ ಮಾಡಿವೆ.

ಏ.9 ಮತ್ತು 23 ರ ಚುನಾವಣೆಯ ನಂತರ ಇಂಧನ ತೈಲ ಬೆಲೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳು ದಟ್ಟವಾಗಿದೆ. ಜನರು ಸಂಕಷ್ಟದಲ್ಲಿರುವಾಗ ಕೇಂದ್ರ ಸರ್ಕಾರವು ಕೇವಲ ಘೋಷಣೆಗಳ ಹಿಂದೆ ಅಡಗಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದು ಕೇವಲ ಇಂಧನದ ಬಿಕ್ಕಟ್ಟಲ್ಲ, ಇದು ಕೋಟ್ಯಂತರ ಜನರ ಬದುಕಿನ ತುರ್ತು ಪರಿಸ್ಥಿತಿ. ಕರ್ನಾಟಕದ ಶ್ರಮಿಕ ವರ್ಗವು ಹತಾಶೆಗೆ ನೂಕಿ ಮೋದಿ ಸರ್ಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಿದೆ.

ಪ್ರತಿ ಖಾಲಿ ಎಲ್‌ಪಿಜಿ ಸಿಲಿಂಡರ್‌ ಒಂದು ಕುಟುಂಬವನ್ನು ಹಸಿವಿನ ಕೂಪಕ್ಕೆ ನೂಕುತ್ತಿದೆ. ಇಂಧನಕ್ಕಾಗಿ ನಿಂತಿರುವ ಪ್ರತಿ ಸರತಿ ಸಾಲು ಕೇಂದ್ರ ಸರ್ಕಾರದ ವೈಫಲ್ಯದ ಸಂಕೇತವಾಗಿದೆ. ಪ್ರತಿ ದಿನದ ನಷ್ಟವು ಮೋದಿ ಸರ್ಕಾರದ ನಿರ್ಲಕ್ಷದ ದುಷ್ಪರಿಣಾಮ. ಕರ್ನಾಟಕದ ಜನರು ಈ ದ್ರೋಹವನ್ನು ಕ್ಷಮಿಸುವುದಿಲ್ಲ. ಮೋದಿ ಸರ್ಕಾರದ ಈ ಮೌನವು ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪಚುನಾವಣೆಗಳಲ್ಲಿ ಹಾಗೂ ಇತರ ರಾಜ್ಯಗಳ ಚುನಾವಣೆಗಳಲ್ಲಿ ಅವರ ಸೋಲಿನಲ್ಲಿ ಪ್ರತಿಧ್ವನಿಸಲಿದೆ ಎಂದು ಎಚ್ಚರಿಸಿದ್ದಾರೆ.

RELATED ARTICLES

Latest News