ಯಾದಗಿರಿ,ಏ.17- ಕಾರು ಹಾಗೂ ಖಾಸಗಿ ಬಸ್ ನಡುವೆ ಇಂದು ಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟವರನ್ನು ರಾಯಚೂರು ಜಿಲ್ಲೆ ಶಿರವಾರ ಪಟ್ಟಣದ ನಿವಾಸಿ, ರಾಜಕೀಯ ಮುಖಂಡರಾದ ಕೃಷ್ಣನಾಯಕ್ (55), ಇವರ ಪತ್ನಿ ಅನಂತಕಲಾ (52), ಮಗಳು ನಿಸರ್ಗ (30), ಸರ್ಕಾರಿ ಉದ್ಯೋಗಿ, ಅಳಿಯ ಶರಣಪ್ಪ (36), ಸಂಬಂಧಿಕರಾದ ಶಶಿಕಲಾ (30) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಇಬ್ಬರು ಮಕ್ಕಳ ಹೆಸರು ಸದ್ಯಕ್ಕೆ ತಿಳಿದು ಬಂದಿಲ್ಲ. ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇಂದು ಅಮವಾಸ್ಯೆ ಹಿನ್ನೆಲೆಯಲ್ಲಿ ಕೃಷ್ಣನಾಯಕ್ ಕುಟುಂಬದ ಒಂಬತ್ತು ಮಂದಿ ಸದಸ್ಯರು ತಿಂತಿಣಿ ಮೌನೇಶ್ವರ ಮತ್ತು ಸುರಪುರದ ವೇಣುಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಮರಳಿ ಶಿರವಾರಕ್ಕೆ ಕಾರಿನಲ್ಲಿ ಹಿಂದಿರುಗುತ್ತಿದ್ದರು.

ಯಾದಗಿರಿ ಮಾರ್ಗವಾಗಿ ರಾಯಚೂರು ಕಡೆಗೆ ಕಾರು ತೆರಳುತ್ತಿದ್ದಾಗ ಬೆಂಗಳೂರಿನಿಂದ ಕಲ್ಬುರ್ಗಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಶಾಂತಪುರ ಕ್ರಾಸ್‌ನ ದೇವಾಪುರ ಬಳಿ ಬೆಳಿಗ್ಗೆ 9.45 ರ ಸುಮಯದಲ್ಲಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರಿಗೆ ಬೆಂಕಿ ತಗುಲಿ ಹೊತ್ತು ಉರಿದಿದ್ದು, ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಕಾರು ಪೂರ್ತಿ ಆವರಿಸಿದ್ದು, ಅದರಲ್ಲಿದ್ದ ಮೂವರು ಸಜೀವ ದಹನವಾದರೇ, ನಾಲ್ವರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಬಸ್‌ಗೂ ಸಹ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಚಾಲಕನ ಸಮಯಪ್ರಜ್ಞೆಯಿಂದ 30 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಪೊಲೀಸರೊಂದಿಗೆ ಸ್ಥಳೀಯರೂ ಸಹ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದು, ಗಾಯಗೊಂಡವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನದೊಂದಿಗೆ ಬಂದು ಬೆಂಕಿಯನ್ನು ನಂದಿಸುವಲ್ಲಿ ಹರಸಾಹಸ ಪಟ್ಟರು.
ಸುದ್ದಿ ತಿಳಿದು ಸುರಪುರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನೊಳಗೆ ಸಜೀವ ದಹನವಾದ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಅತೀ ವೇಗದ ಚಾಲನೆ ಅಥವಾ ತಾಂತ್ರಿಕ ದೋಷವಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಸುರಪುರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ನಿನ್ನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲ್ಲೂಕಿನ ಚಿಲಕಲಡೋನ ಗ್ರಾಮದ ಬಳಿ ರಾಯರ ದರ್ಶನಕ್ಕೆ ಬೊಲೆರೊ ವಾಹನದಲ್ಲಿ ಭಕ್ತರು ತೆರಳುತ್ತಿದ್ದಾಗ ಟ್ಯಾಂಕರ್ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಾಗೂ ಚಿಕ್ಕಮಗಳೂರಿನ ಎಂಟು ಮಂದಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಇಂದು ಇಂತಹ ಮತ್ತೊಂದು ಭೀಕರ ಅಪಘಾತ ನಡೆದಿರುವುದು ವಿಷಾಧಕರ.
