ಬೆಂಗಳೂರು,ಮೇ 25-ನಗರದ ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು ಏಳು ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ಗುತ್ತಿಗೆದಾರ ಕಂಪನಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಆರೋಗ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಘಟನೆ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಬೌರಿಂಗ್ ಆಸ್ಪತ್ರೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಳೇ ಕಟ್ಟಡ ತೆರವುಗೊಳಿಸಲು ಚೆನ್ನೈ ಮೂಲದ ಎಎಸ್‌ಆರ್ ಟ್ರೇಡರ್‌ರಸ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು.
ಅದರಂತೆ ಕಟ್ಟಡ ನೆಲಸಮ ಮಾಡಿದ ತ್ಯಾಜ್ಯವನ್ನು ವಿಲೇವಾರಿ ಮಾಡದೇ ಸ್ಥಳದಲ್ಲೆ ಬಿಟ್ಟು ಹೋಗಿದ್ದರಿಂದ ನಗರದಲ್ಲಿ ಅಂದು ಸುರಿದ ಭಾರಿ ಮಳೆಗೆ ಕೌಂಪೌಂಡ್ ಗೋಡೆ ಕುಸಿದು ಏಳು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ತನಿಖೆಗೆ ನಿಯೋಜನೆಗೊಂಡಿದ್ದ ತಾಂತ್ರಿಕ ಸಮಿತಿ ವರದಿ ನೀಡಿತ್ತು. ಆ ವರದಿಯನ್ವಯ ಕಂಪನಿಗೆ ವಿವರಣೆ ನೀಡುವಂತೆ ನೋಟೀಸ್ ನೀಡಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರ ಲಿಲ್ಲ.
ನೋಟೀಸ್‌ಗೆ ಪ್ರತಿಕ್ರಿಯಿಸದ ಗುತ್ತಿಗೆದಾರ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡು ವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನದ ಮೇರೆಗೆ ದೂರು ದಾಖಲಿಸಿ ಕೊಂಡಿರುವ ಪೊಲೀಸರು ಇದೀಗ ಗುತ್ತಿಗೆದಾರನಿಗೆ ನೋಟೀಸ್ ನೀಡಿದ್ದಾರೆ.
