ಬೆಂಗಳೂರು,ಅ.9-ಅತಿ ವೇಗವಾಗಿ ಮುನ್ನುಗ್ಗಿದ ಕ್ಯಾಂಟರ್ ವಾಹನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ ಪರಿಣಾಮ ಬುಡಸಮೇತ ಮರ ಧರೆಗುರುಳಿದ್ದು, ಭಾರಿ ಅನಾಹುತ ತಪ್ಪಿದೆ. ಹೈಗ್ರೌಂಡ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಕ್ರೆಸೆಂಟ್ ರಸ್ತೆಯಲ್ಲಿ ಇಂದು ಬೆಳಗ್ಗೆ 4.30 ರ ಸುಮಾರಿನಲ್ಲಿ ಹೋಟೆಲ್ವೊಂದರ ಮುಂಭಾಗದಲ್ಲಿ ಈ ಘಟನೆ ನಡೆದಿದೆ.
ಪೆಟ್ಟಿಗೆ ಅಂಗಡಿ ಪಕ್ಕದಲ್ಲೇ ಮರ ಬಿದ್ದಿದ್ದು, ಕೂದಲೆಳೆಯ ಅಂತರದಲ್ಲಿ ಅನಾಹುತ ತಪ್ಪಿದಂತಾಗಿದೆ.ಒಂದು ವೇಳೆ ಈ ಬೃಹತ್ ಮರ ಅಂಗಡಿ ಅಥವಾ ಪಾದಚಾರಿ, ಬೈಕ್ ಸವಾರನ ಮೇಲೆ ಬಿದ್ದಿದ್ದರೆ ಸಾವು ನೋವು ಆಗುವ ಸಾಧ್ಯತೆ ಇತ್ತು.
ಕಾಮಗಾರಿ ನಡೆಯುತ್ತಿರುವ ರೇಸ್ಕೋರ್ಸ್ ರಸ್ತೆ ಬಂದ್ ಆಗಿರುವ ಹಿನ್ನಲೆಯಲ್ಲಿ ಕ್ಯಾಂಟರ್ ಚಾಲಕ ಕ್ರೆಸೆಂಟ್ ರಸ್ತೆ ಮೂಲಕ ಸಾಗುತ್ತಿದ್ದಾಗ ಮರಕ್ಕೆ ಡಿಕ್ಕಿ ಹೊಡೆದಿದ್ದು ಮರ ಉರುಳುತ್ತಿದ್ದಂತೆ ಚಾಲಕ ಕ್ಯಾಂಟರ್ನ್ನು ಚಾಲನೆ ಮಾಡಿಕೊಂಡು ಪರಾರಿಯಾಗಿದ್ದಾನೆ. ಸುದ್ದಿ ತಿಳಿದು ಹೈಗ್ರೌಂಡ್ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮರ ರಸ್ತೆಗೆ ಅಡ್ಡಲಾಗಿ ಬಿದ್ದಿರುವುದರಿಂದ ಮುಂಜಾನೆಯಿಂದಲೇ ಈ ಮಾರ್ಗ ಬಂದ್ ಮಾಡಲಾಗಿತ್ತು. ಕ್ರೇನ್ ಮೂಲಕ ಬೃಹತ್ ಮರವನ್ನು ರಸ್ತೆ ಬದಿಗೆ ಸರಿಸಿ ನಂತರ ಜಿಬಿಎ ಸಿಬ್ಬಂದಿ ಮರ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
