Homeರಾಜ್ಯಖಾತೆ ಹಂಚಿಕೆ ಬೆನ್ನಲ್ಲೇ ಕೆಲ ಸಚಿವರಲ್ಲಿ ಅಸಮಾಧಾನ..?

ಖಾತೆ ಹಂಚಿಕೆ ಬೆನ್ನಲ್ಲೇ ಕೆಲ ಸಚಿವರಲ್ಲಿ ಅಸಮಾಧಾನ..?

Dissatisfaction among some ministers following portfolio allocation..?

ಬೆಂಗಳೂರು, ಆ.13- ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಬೆನ್ನಲ್ಲೇ ಕೆಲ ಸಚಿವರಲ್ಲಿ ಅಸಮಾಧಾನ ಹಾಗೂ ಅತೃಪ್ತಿಯ ಮಾತುಗಳು ಕೇಳಿಬರುತ್ತಿವೆ. ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ, ಶಿವರಾಜ್‌ ತಂಗಡಗಿ, ಬಸವರಾಜ ರಾಯರೆಡ್ಡಿ ಸೇರಿದಂತೆ ಕೆಲವರು ತಮಗೆ ನೀಡಿರುವ ಖಾತೆಗಳ ಬಗ್ಗೆ ಒಳಗೊಳಗೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಟ್ಟಿದ್ದ ರಾಮಲಿಂಗಾರೆಡ್ಡಿ ಅವರಿಗೆ ಅರಣ್ಯ ಮತ್ತು ಪರಿಸರ ಖಾತೆ ನೀಡಲಾಗಿದೆ. ಆರಂಭದಲ್ಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ತೆರಳಿದ್ದ ಅವರನ್ನು ಬಳಿಕ ಸಮಾಧಾನಪಡಿಸಲಾಗಿತ್ತು. ಜಲಸಂಪನೂಲ ಖಾತೆಯಲ್ಲಿ ಬರೀ ವಿವಾದಗಳೇ ಇವೆ, ಅವುಗಳ ಸಹವಾಸ ಬೇಡ ಎಂಬ ಕಾರಣಕ್ಕೆ ಆ ಖಾತೆ ಬೇಡ ಎಂದು ಹೇಳಿದ್ದ ರಾಮಲಿಂಗಾರೆಡ್ಡಿ, ಇದೀಗ ಅರಣ್ಯ ಮತ್ತು ಪರಿಸರ ಖಾತೆಯನ್ನು ಅಸಮಾಧಾನದ ನಡುವೆಯೇ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಯಾವುದೇ ಹೇಳಿಕೆ ನೀಡದೆ ಮೌನ ವಹಿಸಿದ್ದಾರೆ.

ಕೆ.ಎಂ. ಶಿವಲಿಂಗೇಗೌಡ ಅವರು ತಮಗೆ ಇಷ್ಟವಾದ ಕೃಷಿ ಖಾತೆಯ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದ್ದು, ಅವರಿಗೆ ಅಬಕಾರಿ ಖಾತೆ ನೀಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ಆದಾಯ ಸೋರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಗಾ ವಹಿಸುವುದಾಗಿ ಅವರು ತಿಳಿಸಿದ್ದಾರೆ. ಇನ್ನು ಶಿವರಾಜ್‌ ತಂಗಡಗಿ ಅವರು ಈ ಹಿಂದೆ ನಿರ್ವಹಿಸುತ್ತಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನೇ ಮುಂದುವರಿಸಲಿದ್ದಾರೆ. ಅವರು ಸಮಾಜಕಲ್ಯಾಣ ಖಾತೆ ಮೇಲೆ ಕಣ್ಣಿಟ್ಟಿದ್ದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಜಾತಿ ಜನಗಣತಿ ವರದಿ ಈಗಾಗಲೇ ಚರ್ಚೆಗೆ ಗ್ರಾಸವಾಗಿದ್ದು, ಅದರ ಅನುಷ್ಠಾನ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್‌ ತಂಗಡಗಿ ಸವಾಲಿನ ಜವಾಬ್ದಾರಿಯಲ್ಲಿ ಒಲ್ಲದ ಮನಸ್ಸಿನಲ್ಲಿ ಮುಂದುವರಿದಿದ್ದಾರೆ ಎನ್ನಲಾಗಿದೆ.

ಜಮೀರ್‌ ಅಹದ್‌ ಖಾನ್‌ ಅವರು ಈ ಮೊದಲು ನಿರ್ವಹಿಸಿದ್ದ ಅಲ್ಪಸಂಖ್ಯಾತರ ಅಭಿವೃದ್ಧಿ, ವಕ್‌್ಫ , ಹಜ್‌ ಖಾತೆಯನ್ನು ಹಿಂಪಡೆದು, ಅದರ ಜವಾಬ್ದಾರಿಯನ್ನು ಯು.ಟಿ. ಖಾದರ್‌ ಅವರಿಗೆ ನೀಡಲಾಗಿದೆ. ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣದಂತಹ ಮಹತ್ವದ ಖಾತೆ ನಿರ್ವಹಿಸುತ್ತಿರುವ ಖಾದರ್‌ ಅವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ, ಹಜ್‌‍, ವಕ್‌್ಫ ಖಾತೆ ಹೆಚ್ಚುವರಿ ಜವಾಬ್ದಾರಿಯಾಗಿ ದೊರೆತಿರುವುದು ಬಂಪರ್‌ ಅವಕಾಶ ಎಂದು ಹೇಳಲಾಗುತ್ತಿದೆ. ಹಣಕಾಸು ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಖಾತೆ ನೀಡಲಾಗಿದೆ. ನಿರೀಕ್ಷಿತ ಖಾತೆ ದೊರೆಯದ ಹಿನ್ನೆಲೆಯಲ್ಲಿ ಅವರು ಅರೆಮನಸ್ಸಿನಿಂದಲೇ ಈ ಜವಾಬ್ದಾರಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಬಿ.ನಾಗೇಂದ್ರ ಅವರು ಈ ಹಿಂದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಯುವ ಜನ ಸೇವೆ ಎಂಬ ಪ್ರಬಲ ಖಾತೆ ನಿರ್ವಹಿಸಿದ್ದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಸಂಬಂಧಿಸಿದ ವಾಲೀಕಿ ನಿಗಮದ ಹಗರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಅವರ ಸಚಿವ ಸ್ಥಾನವೇ ಪ್ರಶ್ನಾರ್ಹವಾಗಿರುವ ಸಂದರ್ಭದಲ್ಲಿ, ಅವರಿಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಜವಾಬ್ದಾರಿ ನೀಡಲಾಗಿದೆ. ಇದರಿಂದ ಸರ್ಕಾರ ಅವರ ವಿಚಾರದಲ್ಲಿ ತಾತ್ಕಾಲಿಕವಾಗಿ ರಾಜಕೀಯವಾಗಿ ಸಮತೋಲನ ಸಾಧಿಸಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅಜಯ್‌ ಸಿಂಗ್‌ ಉನ್ನತ ಶಿಕ್ಷಣ ದೊರೆಯಲಿದೆ ಎಂದು ನಂಬಿಕೊಂಡಿದ್ದರು, ಅವರಿಗೆ ಸಣ್ಣ ನೀರಾವರಿ ನೀಡಲಾಗಿದೆ.ಮುಜರಾಯಿ ಇಲಾಖೆ ಪಡೆದ ಕೆ.ಎಸ್‌‍.ಬಸವಂತಪ್ಪ ಅವರು ಪೇಚಾಡುತ್ತಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಕೆಲ ಸಚಿವರು ತಮಗೆ ದೊರೆತ ಖಾತೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ನಿರೀಕ್ಷಿತ ಖಾತೆ ಸಿಗದ ಹಿನ್ನೆಲೆಯಲ್ಲಿ ಒಳಗೊಳಗೇ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಖಾತೆ ಹಂಚಿಕೆ ಬಳಿಕ ಸಚಿವರ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

RELATED ARTICLES
spot_img

Latest News