Tuesday, April 14, 2026
HomeEesanje Newsದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್‌ ಸೋತರೆ ಸಚಿವ ಜಮೀರ್‌ ತಲೆದಂಡ..?

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ್‌ ಸೋತರೆ ಸಚಿವ ಜಮೀರ್‌ ತಲೆದಂಡ..?

Davangere South Assembly Byelection

ಬೆಂಗಳೂರು, ಮಾ.27- ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಸಾದಿಕ್‌ ಪೈಲ್ವಾನ್‌ ಸೇರಿದಂತೆ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡದೆ, ಕಾಂಗ್ರೆಸ್‌‍ ಪಕ್ಷಕ್ಕೆ ಸಡ್ಡು ಹೊಡೆದಿರುವ ಕೆಲ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕೆಂಬ ಒತ್ತಡ ಕೇಳಿ ಬರುತ್ತಿದೆ.

ಅಲ್ಪಸಂಖ್ಯಾತರ ಸಮುದಾಯದ ಪ್ರಭಾವಿ ನಾಯಕ ಎಂದು ಬಿಂಬಿಸಿಕೊಂಡಿರುವ ವಸತಿ ಸಚಿವ ಜಮೀರ್‌ಅಹಮದ್‌ ಖಾನ್‌ ವಿರುದ್ಧ ವಿಶೇಷವಾದ ಆಕ್ರೋಶಗಳು ಕೇಳಿ ಬರುತ್ತಿವೆ. ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಪಕ್ಷಕ್ಕೆ ಹಿನ್ನಡೆಯಾದರೆ, ಅದಕ್ಕೆ ನೇರವಾಗಿ ಜಮೀರ್‌ಅಹಮದ್‌ ಖಾನ್‌ ಅವರನ್ನೇ ಹೊಣೆ ಮಾಡಬೇಕು ಎಂಬ ಆಗ್ರಹಗಳು ಹೆಚ್ಚಾಗಿವೆ.

ಶ್ಯಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂದು ಜಮೀರ್‌ ಅಹಮದ್‌ ಬಹಿರಂಗವಾಗಿಯೇ ಲಾಬಿ ನಡೆಸಿದ್ದರು ಮತ್ತು ಹೇಳಿಕೆಗಳನ್ನು ನೀಡಿದ್ದರು.ಇದು ಪಕ್ಷದಲ್ಲಿ ಗೊಂದಲ ಉಂಟು ಮಾಡಿತ್ತು.

ತಾವು ಸಮುದಾಯದ ನಾಯಕರಾಗಲು ಅನಗತ್ಯವಾದ ಹೇಳಿಕೆಗಳಿಂದ ಗೊಂದಲ ಮೂಡಿಸಿ ಪಕ್ಷಕ್ಕೆ ಹಾನಿಯಾಗುವಂತೆ ಮಾಡಿದ್ದಾರೆ. ಕಾಂಗ್ರೆಸ್‌‍ ಹೈಕಮಾಂಡ್‌ ಸಮರ್ಥ್‌ ಶ್ಯಾಮನೂರ್‌ ಅವರಿಗೆ ಟಿಕೆಟ್‌ ಘೋಷಣೆಯ ಬಳಿಕ ಸಕ್ರಿಯ ಚಟುವಟಿಕೆಗಳಿಂದ ಬದಿಗೆ ಸರಿದಿರುವ ಜಮೀರ್‌ ಅಹಮದ್‌ಖಾನ್‌ ಬಂಡಾಯ ಸಾರಿರುವ ತಮ ಬೆಂಬಲಿಗರನ್ನು ಮನವೊಲಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.

ಶಿವಾಜಿನಗರದ ಶಾಸಕ ರಿಜ್ವಾನ್‌ ಅರ್ಷದ್‌ ಹಾಗೂ ವಿಧಾನಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕ ಸಲೀಂ ಆಹಮದ್‌ ಅವರು, ದಾವಣಗೆರೆಗೆ ಖುದ್ದಾಗಿ ಹೋಗಿ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ಪ್ರಯತ್ನ ಮಾಡಿದ್ದಾರೆ. ಆದರೆ ಸಂಪುಟ ದರ್ಜೆಯ ಸಚಿವ ಸ್ಥಾನದ ಅಧಿಕಾರ ಅನುಭವಿಸುತ್ತಿರುವ ಜಮೀರ್‌ ಅಹಮದ್‌ಖಾನ್‌, ರಹೀಂಖಾನ್‌ ಮತ್ತು ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ನಜೀರ್‌ ಅಹಮದ್‌ಅವರು ಬೆಂಗಳೂರಿನಲ್ಲೇ ಕುಳಿತು ನೆಪ ಮಾತ್ರದ ಪ್ರಯತ್ನಗಳನ್ನು ನಡೆಸಿದ್ದಾರೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ.

ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ನಾಯಕರು ಕಾಂಗ್ರೆಸ್‌‍ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ ಮುಜುಗರವಾಗುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಬದಲಾಗಿ ಪ್ರಭಾವಿ ನಾಯಕರು ಸಮುದಾಯಕ್ಕೆ ಅನ್ಯಾಯವಾಗಿದೆ, ಆಕ್ರೋಶಗಳು ಸಹಜವೆಂಬಂತಹ ಮಾತುಗಳನ್ನಾಡುತ್ತಾ, ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ. ಹೀಗಾಗಿ ಪಕ್ಷದ ಪರವಾಗಿ ನಿಲ್ಲದ ನಾಯಕರುಗಳಿಗೆ ಅಧಿಕಾರ ನೀಡಬಾರದು ಎಂಬ ಪ್ರತಿಪಾದನೆಗಳು ಕೇಳಿ ಬರುತ್ತಿವೆ.

ಮೇ ತಿಂಗಳಿನಲ್ಲಿ ನಡೆಯುವ ಸಚಿವ ಸಂಪುಟ ಪುನರ್‌ರಚನೆೆಯಲ್ಲಿ ಜಮೀರ್‌ ಮತ್ತು ರಹೀಂಖಾನ್‌ ಅವರನ್ನು ಕೈ ಬಿಟ್ಟು, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌, ರಿಜ್ವಾನ್‌ ಅರ್ಷದ್‌ ಮತ್ತು ಸಲೀಂ ಅಹಮದ್‌ ಅವರಿಗೆ ಅವಕಾಶ ನೀಡಬೇಕೆಂಬ ಸಲಹೆಗಳು ಕೇಳಿ ಬರುತ್ತಿವೆ.
ಜಮೀರ್‌ ಅವರಂತೂ ಉಪಚುನಾವಣೆಯ ಪ್ರಕ್ರಿಯೆಗಳ ಗೋಜಿಗೇ ಹೋಗದೇ ತಟಸ್ಥವಾಗಿರುವಂತೆ ಕಂಡು ಬರುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಅಲ್ಪಸಂಖ್ಯಾತ ನಾಯಕರ ಸಭೆಯಿಂದಲೂ ದೂರ ಉಳಿಯುವ ಮೂಲಕ ಜಮೀರ್‌ ಅಹಮದ್‌ ಖಾನ್‌ ಪರೋಕ್ಷವಾಗಿ ಬಂಡಾಯದ ಬಾವುಟ ಹಿಡಿದಿದ್ದಾರೆ. ಪಕ್ಷದಲ್ಲೇ ಇದ್ದುಕೊಂಡು ಈ ರೀತಿ ದ್ವಂದ್ವ ನಿಲುವುಗಳನ್ನು ಅನುಸರಿಸುವ ನಾಯಕರನ್ನು ಸಹಿಸಬಾರದು ಎಂದು ಡಿ.ಕೆ.ಶಿವಕುಮಾರ್‌ ಬಣ ಪ್ರತಿಪಾದಿಸುತ್ತಿದೆ.
ಕಾಂಗ್ರೆಸ್‌‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಡಿ.ಕೆ.ಶಿವಕುಮಾರ್‌ ಅವರ ನಡುವೆ ತೆರೆಮರೆಯ ಮುಸುಕಿನ ಗುದ್ದಾಟ ನಡೆದೇ ಇದೆ. ಆರಂಭದಿಂದಲೂ ಸಿದ್ದರಾಮಯ್ಯ ಅವರ ಪರವಾಗಿ ವಕಾಲತ್ತು ವಹಿಸಿರುವ ಜಮೀರ್‌ಅಹಮದ್‌ ಅವರಿಗೆ ಡಿ.ಕೆ.ಶಿವಕುಮಾರ್‌ ಅವರು ಅವಕಾಶ ಸಿಕ್ಕಾಗಲೆಲ್ಲಾ ಎದುರೇಟು ನೀಡುತ್ತಲೇ ಇದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಮೀರ್‌ ಅವರ ಆಪ್ತ ಪ್ರಸನ್ನ ಕುಮಾರ್‌ ಅವರಿಗೆ ಟಿಕೆಟ್‌ ನಿರಾಕರಿಸುವ ಮೂಲಕ ಡಿ.ಕೆ.ಶಿವಕುಮಾರ್‌ ಸೇಡು ತೀರಿಸಿಕೊಂಡಿದ್ದರು.ಈಗ ದಾವಣಗೆರೆ ಉಪಚುನಾವಣೆಯಲ್ಲಿ ಜಮೀರ್‌ಅಹಮದ್‌ ಖಾನ್‌ ಅವರು ಶಿಫಾರಸು ಮಾಡಿದ ಅಭ್ಯರ್ಥಿಗೆ ಟಿಕೆಟ್‌ ನಿಡದೇ, ಎರಡನೇ ಬಾರಿಗೆ ಡಿ.ಕೆ.ಶಿವಕುಮಾರ್‌ ಮೇಲುಗೈ ಸಾಧಿಸಿದ್ದಾರೆ.

ಒಳಗೊಳಗೆ ನಡೆಯುತ್ತಿರುವ ಈ ಮುಸುಕಿನ ಗುದ್ದಾಟ ಉಪಚುನಾವಣೆಯಲ್ಲಿ ಪರಿಣಾಮ ಬೀರುವುದನ್ನೇ ಕಾಂಗ್ರೆಸ್‌‍ನ ಒಂದು ಪಾಳೆಯ ಕಾದು ಕುಳಿತಿದೆ. ಒಂದು ವೇಳೆ ಕಾಂಗ್ರೆಸ್‌‍ ಅಭ್ಯರ್ಥಿ ಸಮರ್ಥ್‌ ಶ್ಯಾಮನೂರು ಸೋಲು ಕಂಡರೆ ಅದರ ಹೊಣೆಗಾರಿಕೆಯನ್ನು ನೇರವಾಗಿ ಜಮೀರ್‌ ಅವರ ತಲೆಗೆ ಕಟ್ಟಿ, ಸಂಪುಟದಿಂದ ದೂರ ಇಡುವ ಕಸರತ್ತುಗಳು ನಡೆಯುತ್ತಿವೆ.

ಈಗಾಗಲೇ ಕೆ.ಎನ್‌.ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವಲ್ಲಿ ಒಂದು ಬಣ ಯಶಸ್ವಿಯಾಗಿದೆ. ಜಮೀರ್‌ ಅವರನ್ನು ದೂರ ಇಟ್ಟರೆ, ಸಿದ್ದರಾಮಯ್ಯ ಅವರಿಗೆ ಭಾರಿ ಹಿನ್ನಡೆಯಾಗಲಿದೆ. ಒಂದು ವೇಳೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿದರೂ ಸಂಪುಟದಲ್ಲಿ ತಮ ಬೆಂಬಲಿಗರ ಕೊರತೆಯಿಂದಾಗಿ ಅಸಹಾಯಕರಾಗಬೇಕಂತಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.

RELATED ARTICLES

Latest News