Thursday, May 2, 2024
Homeರಾಜ್ಯಕಾಂಗ್ರೆಸ್‌ಗೆ ಕಗ್ಗಂಟಾದ ಕೋಲಾರ ಕ್ಷೇತ್ರ

ಕಾಂಗ್ರೆಸ್‌ಗೆ ಕಗ್ಗಂಟಾದ ಕೋಲಾರ ಕ್ಷೇತ್ರ

ಬೆಂಗಳೂರು,ಮಾ.22- ಲೋಕಸಭೆಗೆ ಬಾಕಿ ಇರುವ ಕಾಂಗ್ರೆಸ್ನ ನಾಲ್ಕು ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಬಹುತೇಕ ಇತ್ಯರ್ಥಗೊಂಡಿದ್ದು, ಕೋಲಾರ ಕ್ಷೇತ್ರ ಮತ್ತಷ್ಟು ಕಗ್ಗಂಟಾಗಿ ಉಳಿದಿದೆ. ಬಾಕಿ ಇರುವ ಕ್ಷೇತ್ರಗಳ ಪೈಕಿ ಚಾಮರಾಜನಗರಕ್ಕೆ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.

ಬಳ್ಳಾರಿಗೆ ಸೊಂಡೂರು ಕ್ಷೇತ್ರದ ಶಾಸಕ ಇ.ತುಕಾರಾಂ ಅವರನ್ನೇ ಕಣಕ್ಕಿಳಿಸುವ ನಿರ್ಧಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾಗೇಂದ್ರ ಹಾಗೂ ಇತರರ ಜೊತೆ ನಿನ್ನೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಧಾನ ಸಭೆ ನಡೆಸಿ ಬಹುತೇಕ ಇತ್ಯರ್ಥಗೊಳಿಸಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಸಿದ್ದ ವೀರಪ್ಪ ಮೊಯ್ಲಿಗೆ ಟಿಕೆಟ್ ಬಹುತೇಕ ಖಚಿತವಾಗಿದ್ದು, ಯುವ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅಭ್ಯರ್ಥಿಯಾಗಲಿದ್ದಾರೆ.ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಬಣ ರಾಜಕೀಯದ ಪೈಪೊಟಿ ಕಾಂಗ್ರೆಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.

ಸಚಿವ ಕೆ.ಎಚ್.ಮುನಿಯಪ್ಪ ತಮ್ಮ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ತಮ್ಮ ಮಗಳು ನಂದಿನಿ ಅಥವಾ ಅವರ ಪತಿ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.ಆದರೆ ಚಿಕ್ಕಪೆದ್ದಣ್ಣ ಅವರು ಈವರೆಗೂ ಸಬ್ರಿಜಿಸ್ಟ್ರಾರ್ ಇಲಾಖೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನೂ ಸ್ವಯಂ ನಿವೃತ್ತಿ ತೆಗೆದುಕೊಂಡಿಲ್ಲ. ಆದರೂ ಅವರಿಗೆ ಟಿಕೆಟ್ ಕೇಳುತ್ತಿರುವುದಕ್ಕೆ ಜಿಲ್ಲೆಯ ಇತರ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಸಚಿವ ಡಾ.ಎಂ.ಸಿ.ಸುಧಾಕರ್, ಮಾಜಿ ಸಚಿವ ರಮೇಶ್ ಕುಮಾರ್, ಶಾಸಕರಾದ ಕೊತ್ತನೂರು ಮಂಜುನಾಥ್, ನಂಜೇಗೌಡ ಸೇರಿದಂತೆ ಹಲವಾರು ಮಂದಿ ದೆಹಲಿಗೆ ನಿಯೋಗ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಮುನಿಯಪ್ಪ ಅವರ ಕುಟುಂಬ ಹೊರತುಪಡಿಸಿ ಬೇರೆ ಯಾರಿಗೇ ಟಿಕೆಟ್ ಕೊಟ್ಟರೂ ನಮ್ಮ ಸಹಮತ ಇದೆ ಎಂದು ತಿಳಿಸಿಬಂದಿದ್ದಾರೆ. ಕೋಲಾರ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಎಡಗೈ ಅಥವಾ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಬೇಕೆ ಎಂಬ ಪ್ರಶ್ನೆಗಳು ಎದುರಾಗಿವೆ.

ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಈವರೆಗೂ ಎಡಗೈ ಸಮುದಾಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುತ್ತಿತ್ತು. ಈ ಬಾರಿ ಬಲಗೈ ಸಮುದಾಯಕ್ಕೆ ಅವಕಾಶ ನೀಡಬೇಕು ಎಂಬ ವಾದಗಳು ಕೇಳಿಬಂದಿವೆ. ಆದರೆ ರಾಜ್ಯದಲ್ಲಿರುವ ಕನಿಷ್ಠ ಜಾತಿಯ 5 ಮೀಸಲು ಕ್ಷೇತ್ರಗಳ ಪೈಕಿ ಬಿಜಾಪುರ ಮತ್ತು ಕಲಬುರಗಿಗೆ ಈಗಾಗಲೇ ಬಲಗೈ ಸಮುದಾಯಕ್ಕೆ ಅವಕಾಶ ನೀಡಲಾಗಿದೆ.ಚಾಮರಾಜನಗರದಲ್ಲೂ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ಬೋಸ್ಗೆ ಅವಕಾಶ ನೀಡುವ ಮೂಲಕ ಒಟ್ಟು 3 ಕ್ಷೇತ್ರಗಳಲ್ಲಿ ಆದ್ಯತೆ ನೀಡಿದಂತಾಗುತ್ತದೆ.

ಎಡಗೈ ಸಮುದಾಯಕ್ಕೆ ಚಿತ್ರದುರ್ಗದಲ್ಲಿ ಚಂದ್ರಪ್ಪ ಅವರಿಗೆ ಮಾತ್ರ ಟಿಕೆಟ್ ನೀಡಲಾಗಿದೆ. ಬಾಕಿ ಉಳಿದಿರುವ ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಿದರೆ ಮಾತ್ರ ಸಾಮಾಜಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ ಎಂದು ಚರ್ಚೆಗಳಿವೆ. ರಾಜ್ಯಸಭೆ ಸ್ಥಾನದಿಂದ ನಿರ್ಗಮಿಸಿರುವ ಎಲ್.ಹನುಮಂತ ಅವರಿಗೆ ಟಿಕೆಟ್ ನೀಡಬೇಕು ಎಂದು ದೆಹಲಿಗೆ ತೆರಳಿದ ನಿಯೋಗ ಸಲಹೆ ನೀಡಿದೆ ಎಂದು ಹೇಳಲಾಗುತ್ತಿದೆ.

ಇತ್ತ ಚಾಮರಾಜನಗರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ಕೊಟ್ಟು , ಕೋಲಾರದಲ್ಲಿ ಬಲಗೈ ಸಮುದಾಯದ ಡಾ.ಬಿ.ಸಿ.ಮುದ್ದುಗಂಗಾಧರ್ಗೆ ಮಣೆ ಹಾಕುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಹೈಕಮಾಂಡ್ ನಾಯಕರು ಕೆ.ಎಚ್.ಮುನಿಯಪ್ಪ ಅವರಿಗೆ ಖುದ್ದು ಸ್ಪರ್ಧೆ ಮಾಡುವಂತೆ ಸೂಚಿಸಿದ್ದಾರೆ. ಮುನಿಯಪ್ಪ ಅವರೇ ಸ್ರ್ಪಸುವುದಾದರೆ ಬೇರೆ ಅಭ್ಯರ್ಥಿಯನ್ನು ಪರಿಗಣಿಸುವುದಿಲ್ಲ. ಆದರೆ ಕುಟುಂಬಕ್ಕೆ ಮಾತ್ರ ಅವಕಾಶ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಮುನಿಯಪ್ಪ ನಾನಾ ರೀತಿಯ ಸರ್ಕಸ್ಗಳನ್ನು ನಡೆಸಿದ್ದು, ಹೈಕಮಾಂಡ್ ಮನವೊಲಿಸಿ ತಮ್ಮ ಕುಟುಂಬಕ್ಕೆ ಟಿಕೆಟ್ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ.7 ಬಾರಿ ಸಂಸದರಾಗಿ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಹೊಂದಿರುವ ಮುನಿಯಪ್ಪ, ಅಷ್ಟು ಸುಲಭವಾಗಿ ಕ್ಷೇತ್ರ ಅನ್ಯರ ಪಾಲಾಗಲು ಬಿಟ್ಟುಕೊಡಲು ತಯಾರಿಲ್ಲ ಎಂದು ಹೇಳಲಾಗುತ್ತಿದೆ.

ಮೊದಲ ಹಂತದಲ್ಲಿ 7, ಎರಡನೇ ಹಂತದಲ್ಲಿ 17 ಸೇರಿ 24 ಕ್ಷೇತ್ರಗಳಿಗೆ ನಿರಾಯಸವಾಗಿ ಅಭ್ಯರ್ಥಿಗಳನ್ನು ನಿರ್ಧರಿಸಿದ ಹೈಕಮಾಂಡ್ ಬಾಕಿ ಇರುವ ನಾಲ್ಕು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಕ್ಕೂ ಸಂಧಾನ ಹಾಗೂ ಚರ್ಚೆಯ ಮೂಲಕ ಹುರಿಯಾಳುಗಳನ್ನು ಆಖೈರುಗೊಳಿಸಿದೆ. ಆದರೆ ಕೋಲಾರ ತೀವ್ರ ಕಗ್ಗಂಟಾಗಿದ್ದು, ಇಂದು ಮಧ್ಯಾಹ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

RELATED ARTICLES

Latest News