ನವದೆಹಲಿ, ಅ. 9- ಅಮೆರಿಕದ ಗ್ರೀನ್‌ಕಾರ್ಡ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಕೈಗೊಂಡಿರುವ ಕ್ರಮದಿಂದ ತನ್ನ ಉದ್ಯೋಗಿಗಳ ನೇಮಕಾತಿ ಅಥವಾ ಗ್ರಾಹಕರೊಂದಿಗಿನ ವ್ಯವಹಾರಗಳ ಮೇಲೆ ಯಾವುದೇ ಪರಿಣಾಮ ಬೀರುವ ನಿರೀಕ್ಷೆಯಿಲ್ಲ ಎಂದು ಭಾರತದ ಅತಿದೊಡ್ಡ ಐಟಿ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿಸರ್ವಿಸಸ್ (ಟಿಸಿಎಸ್) ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ಪರ್ಮನೆಂಟ್ ಲೇಬರ್ ಸರ್ಟಿಫಿಕೇಷನ್ ಕಾರ್ಯಕ್ರಮದಡಿ ಟಿಸಿಎಸ್ ಸಲ್ಲಿಸಿರುವ ಅರ್ಜಿಗಳ ಸಂಖ್ಯೆ ಒಂದಂಕಿಯಲ್ಲಿತ್ತು. ಹೀಗಾಗಿ, ಕಾರ್ಯಕ್ರಮದ ಅಮಾನತಿನಿಂದ ತನ್ನ ಉದ್ಯೋಗ ತಂತ್ರದ ಮೇಲೆ ಪರಿಣಾಮವಾಗುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಅಮೆರಿಕ ಸರ್ಕಾರ ಗುರುವಾರ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಕಾಗ್ನಿಜೆಂಟ್, ಮೈಕ್ರೋಸಾಫ್‌್ಟ ಸೇರಿದಂತೆ ಎಂಟು ಐಟಿ ಕಂಪನಿಗಳನ್ನು ವಿದೇಶಿ ಉದ್ಯೋಗಿಗಳಿಗೆ ಗ್ರೀನ್‌ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ. ಈ ಕಂಪನಿಗಳ ನೇಮಕಾತಿ ಪದ್ಧತಿಯಿಂದ ಅಮೆರಿಕನ್ನರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿವೆ ಎಂಬುದು ಸರ್ಕಾರದ ಆರೋಪವಾಗಿದೆ.
ಅಮೆರಿಕದ ಕಾರ್ಮಿಕ ಇಲಾಖೆಯ ಯಾವುದೇ ನಿರ್ದೇಶನವನ್ನು ಪಾಲಿಸುವುದಾಗಿ ಟಿಸಿಎಸ್ ಹೇಳಿದೆ. ಅಮೆರಿಕದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವುದು ಮತ್ತು ಕಾಲೇಜು ಕ್ಯಾಂಪಸ್‌ಗಳ ಮೂಲಕ ನೇಮಕಾತಿ ಮಾಡಿಕೊಳ್ಳುವುದು ತನ್ನ ಉದ್ಯೋಗ ನೀತಿಯ ಪ್ರಮುಖ ಭಾಗಗಳಾಗಿವೆ ಎಂದು ತಿಳಿಸಿದೆ. ದೇಶದಾದ್ಯಂತ 31 ಕಚೇರಿಗಳು ಮತ್ತು ಸೇವಾ ಕೇಂದ್ರಗಳಲ್ಲಿ ಸ್ಥಳೀಯ ಉದ್ಯೋಗಿಗಳನ್ನು ಹೊಂದಿರುವುದಾಗಿಯೂ ಹೇಳಿದೆ.
ಮುಂದಿನ ಐದು ವರ್ಷಗಳಲ್ಲಿ ಅಮೆರಿಕದಲ್ಲಿ ಹೆಚ್ಚುವರಿಯಾಗಿ 15,000 ಜನರನ್ನು ನೇಮಿಸಿಕೊಳ್ಳುವ ಉದ್ದೇಶವನ್ನೂ ಕಂಪನಿ ಪುನರುಚ್ಚರಿಸಿದೆ.ನಾಸ್ಕಾಂ ಕಳವಳ:ಅಮೆರಿಕದ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಐಟಿ ಉದ್ಯಮದ ಸಂಘಟನೆ ನಾಸ್ಕಾಂ, ವಲಸೆ ನೀತಿ ಮತ್ತು ಕೌಶಲ ಹೊಂದಿರುವ ಉದ್ಯೋಗಿಗಳ ಅಂತರರಾಷ್ಟ್ರೀಯ ಚಲನವಲನ ಎರಡೂ ವಿಭಿನ್ನ ವಿಷಯಗಳಾಗಿವೆ. ಇವೆರಡನ್ನೂ ಒಂದೇ ದೃಷ್ಟಿಕೋನದಿಂದ ನೋಡಬಾರದು ಎಂದು ಹೇಳಿದೆ.
ಅಮೆರಿಕದಲ್ಲಿ ಅಲ್ಪಾವಧಿಯ ಕೌಶಲ ಕೊರತೆಯನ್ನು ನೀಗಿಸಲು ಎಚ್-1ಬಿ ವೀಸಾ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಐಟಿ ಕಂಪನಿಗಳು ಈ ವೀಸಾಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಿದ್ದು, ಸ್ಥಳೀಯ ನೇಮಕಾತಿಯನ್ನು ಹೆಚ್ಚಿಸಿವೆ ಎಂದು ನಾಸ್ಕಾಂ ತಿಳಿಸಿದೆ.
ಅಮೆರಿಕದ ಫಾರ್ಚೂನ್ 500 ಕಂಪನಿಗಳ ಪೈಕಿ ಬಹುತೇಕ ಸಂಸ್ಥೆಗಳೊಂದಿಗೆ ಭಾರತೀಯ ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ಆ ಕಂಪನಿಗಳ ಬೆಳವಣಿಗೆಗೆ ನೆರವಾಗುವುದರ ಜತೆಗೆ ಸ್ಥಳೀಯ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತಿವೆ. ಹೀಗಾಗಿ, ಎಚ್-1ಬಿ ವೀಸಾದಿಂದ ಶಾಶ್ವತ ನಿವಾಸಕ್ಕೆ, ಅಂದರೆ ಗ್ರೀನ್‌ಕಾರ್ಡ್‌ಗೆ ಬದಲಾಗುವ ಉದ್ಯೋಗಿಗಳ ಸಂಖ್ಯೆ ತುಲನಾತಕವಾಗಿ ಕಡಿಮೆಯಿದೆ ಎಂದು ಸಂಘಟನೆ ವಿವರಿಸಿದೆ.
ಎಂಟು ಕಂಪನಿಗಳ ವಿರುದ್ಧ ಅಮೆರಿಕ ಕ್ರಮ:ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್‌್ಸ, ಕಾರ್ಮಿಕ ಕಾರ್ಯದರ್ಶಿ ಕೀತ್ ಸೊಂಡರ್ಲಿಂಗ್ ಮತ್ತು ಅಟಾರ್ನಿ ಜನರಲ್ ಟಾಡ್ ಬ್ಲಾಂಚ್ ಅವರು ಅಮೆರಿಕದ ವಂಚನೆ ವಿರೋಧಿ ಕಾರ್ಯಪಡೆಯ ಅಡಿಯಲ್ಲಿ ಈ ಕ್ರಮವನ್ನು ಪ್ರಕಟಿಸಿದ್ದಾರೆ.
ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೊ, ಎಚ್‌ಸಿಎಲ್ ಮತ್ತು ಕ್ಯಾಪ್‌ಜೆಮಿನಿ ಸೇರಿದಂತೆ ಪ್ರಮುಖ ಐಟಿ ಹೊರಗುತ್ತಿಗೆ ಸಂಸ್ಥೆಗಳನ್ನು ಪರ್ಮನೆಂಟ್ ಲೇಬರ್ ಸರ್ಟಿಫಿಕೇಷನ್ ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗಿದೆ ಎಂದು ಸೊಂಡರ್ಲಿಂಗ್ ಹೇಳಿದ್ದಾರೆ. ಹಲವು ಸಕ್ರಿಯ ಫೆಡರಲ್ ತನಿಖೆಗಳ ಹಿನ್ನೆಲೆಯಲ್ಲಿ ಮೈಕ್ರೋಸಾಫ್‌್ಟ ಮತ್ತು ಅಡೋಬ್ ಕಂಪನಿಗಳನ್ನೂ ಅಮಾನತುಗೊಳಿಸಲಾಗಿದೆ. ಈ ಸಂಸ್ಥೆಗಳಿಗೆ ಸಂಬಂಧಿಸಿದ ಹೊಸ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಹಾಗೂ ಬಾಕಿ ಇರುವ ಅರ್ಜಿಗಳ ಪ್ರಕ್ರಿಯೆಯನ್ನೂ ಮುಂದುವರಿಸುವುದಿಲ್ಲ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.
2009ರಿಂದ ಈ ಕಂಪನಿಗಳು ಒಟ್ಟಾಗಿ ಸುಮಾರು 30 ಲಕ್ಷ ವಿದೇಶಿ ಉದ್ಯೋಗಿಗಳಿಗಾಗಿ ಅರ್ಜಿ ಸಲ್ಲಿಸಿದ್ದು, 2.30 ಲಕ್ಷಕ್ಕೂ ಅಧಿಕ ಎಚ್-1ಬಿ ವೀಸಾಗಳಿಗೆ ಅನುಮೋದನೆ ಮತ್ತು ಒಂದು ಲಕ್ಷಕ್ಕೂ ಹೆಚ್ಚು ಶಾಶ್ವತ ಕಾರ್ಮಿಕ ಪ್ರಮಾಣಪತ್ರಗಳನ್ನು ಪಡೆದಿವೆ ಎಂದು ಸೊಂಡರ್ಲಿಂಗ್ ಹೇಳಿದ್ದಾರೆ. ಈ ಮೂಲಕ ಅಮೆರಿಕದ ಉದ್ಯೋಗಿಗಳ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗಿದೆ ಎಂಬುದು ಅವರ ಆರೋಪವಾಗಿದೆ.
ಇದೇ ವೇಳೆ, ಯೇಲ್, ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಮತ್ತು ಕ್ಯಾಲ್ಟೆಕ್ ಸೇರಿದಂತೆ ಒಂಬತ್ತು ಪ್ರಮುಖ ವಿಶ್ವವಿದ್ಯಾಲಯಗಳು ಸಂಶೋಧನಾ ವಿದ್ವಾಂಸರಿಗೆ ಬಳಸುವ ಜೆ-1 ವೀಸಾ ಕಾರ್ಯಕ್ರಮದ ಬಗ್ಗೆಯೂ ತನಿಖೆ ನಡೆಸುವುದಾಗಿ ವ್ಯಾನ್‌್ಸ ಘೋಷಿಸಿದ್ದಾರೆ.
