Homeರಾಷ್ಟ್ರೀಯಬೈಕ್‌ ಶಬ್ದದ ವಿಚಾರಕ್ಕೆ ಯುವಕನ ಹತ್ಯೆ

ಬೈಕ್‌ ಶಬ್ದದ ವಿಚಾರಕ್ಕೆ ಯುವಕನ ಹತ್ಯೆ

ತಿರುವನಂತಪುರಂ, ಜು. 6- ಮನೆಯ ಎದುರು ಮೋಟಾರ್‌ಸೈಕಲ್‌ ಸ್ಟಾರ್ಟ್‌ ಮಾಡುವಾಗ ಉಂಟಾದ ಜೋರಾದ ಶಬ್ದದ ವಿಚಾರವಾಗಿ ನಡೆದ ಜಗಳದಲ್ಲಿ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಇಲ್ಲಿ ನಡೆದಿದೆ.

ಮೃತ ಯುವಕನನ್ನು ಕೊಟ್ಟುಕಲ್‌ನ ಕನ್ನಾರವಿಳ ನಿವಾಸಿ ಮನು (22) ಎಂದು ಗುರುತಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ನೆರೆಹೊರೆಯವರಾದ ಅಂಬಾಡಿ, ಮಿಧುನ್‌, ಪೊಡಿಯನ್‌ ಹಾಗೂ ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಸುಮಾರು 9.30ರ ವೇಳೆಗೆ ಅಕ್ರಮ ಬೈಕ್‌ ರೇಸಿಂಗ್‌ನಲ್ಲಿ ತೊಡಗಿದ್ದರೆಂದು ಆರೋಪಿಸಲಾಗಿರುವ ಅಂಬಾಡಿ ಮತ್ತು ಅಪ್ರಾಪ್ತ ಬಾಲಕ ಮನು ಮನೆಯ ಸಮೀಪಕ್ಕೆ ಬಂದಿದ್ದರು. ಈ ವೇಳೆ ಇಂಧನ ಖಾಲಿಯಾಗಿದ್ದರಿಂದ ಅವರ ಬೈಕ್‌ ಮಧ್ಯದಲ್ಲೇ ನಿಂತಿತ್ತು.
ನಂತರ ಇಂಧನ ತಂದು ಬೈಕ್‌ಗೆ ತುಂಬಿಸಿ ಸ್ಟಾರ್ಟ್‌ ಮಾಡಿದಾಗ ಜೋರಾದ ಶಬ್ದ ಉಂಟಾಯಿತು. ಇದರಿಂದ ಮನೆ ಹೊರಗೆ ಬಂದ ಮನು, ಶಬ್ದ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಎರಡೂ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಆರೋಪಿಗಳಲ್ಲೊಬ್ಬನ ಮನೆಯ ಬಳಿ ತೆರಳಿದ್ದ ಮನುವಿನ ಮೇಲೆ ನಾಲ್ವರೂ ಸೇರಿ ಹಲ್ಲೆ ನಡೆಸಿದ್ದು, ಈ ವೇಳೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮನುವನ್ನು ನೇಯ್ಯಟ್ಟಿಂಕರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಮಿಧುನ್‌ ಹಾಗೂ ಆತನ ಕೆಲ ಸ್ನೇಹಿತರು ಆಸ್ಪತ್ರೆಗೆ ತೆರಳಿ ಗಲಾಟೆ ನಡೆಸಿದ ಆರೋಪವೂ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಅವರನ್ನೂ ವಶಕ್ಕೆ ಪಡೆಯಲಾಗಿದೆ.
ಎಲ್ಲ ಆರೋಪಿಗಳು ಪೊಲೀಸ್‌‍ ವಶದಲ್ಲಿದ್ದು, ಶೀಘ್ರದಲ್ಲೇ ಅವರನ್ನು ಅಧಿಕೃತವಾಗಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಕಂಜಿರಂಕುಳಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

RELATED ARTICLES
spot_img

Latest News