Homeರಾಜ್ಯಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ಹೆಚ್ಡಿಕೆ ಭೇಟಿ ನೀಡಿ

ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ಹೆಚ್ಡಿಕೆ ಭೇಟಿ ನೀಡಿ

ತಿ.ನರಸೀಪುರ, ಜು.6-ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಬ್ಲ್ಯಾಕ್‌ಮೇಲ್‌ ಹಾಗೂ ಮಾನಸಿಕ ಕಿರುಕುಳದ ಆರೋಪದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂವರು ಆತಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು.

ಇತ್ತೀಚೆಗಷ್ಟೇ ನಡೆದ ಈ ದುರಂತದಲ್ಲಿ ಮದುವೆ ನಿಶ್ಚಯವಾಗಿದ್ದ ರಕ್ಷಿತಾ, ಆಕೆಯ ತಂದೆ ಶಿವಣ್ಣ ಹಾಗೂ ತಾಯಿ ನಾಗರತ್ನ ಅವರು ಹೊಸದಾಗಿ ನಿರ್ಮಿಸಿದ್ದ ಮನೆಯಲ್ಲಿ ಆತಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ಜಿಲ್ಲೆಯಾದ್ಯಂತ ತೀವ್ರ ಆಘಾತ ಮೂಡಿಸಿತ್ತು.

ಘಟನೆಯ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಮಾಜಿ ಸಚಿವ ಸಾರಾ ಮಹೇಶ್‌, ಶಾಸಕ ಹರೀಶ್‌ ಗೌಡ, ಮಾಜಿ ಶಾಸಕರಾದ ಮಹದೇವ್‌,ಅಶ್ವಿನ್‌ ಕುಮಾರ್‌ ಹಾಗು ವರುಣ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಅಭಿಷೇಕ್‌ ಮಣಿಗಾರ್‌ ಅವರೊಂದಿಗೆ ಮೃತರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ವೇಳೆ ವರುಣ ಕ್ಷೇತ್ರದ ಜೆಡಿಎಸ್‌‍ ಬ್ಲಾಕ್‌ ಅಧ್ಯಕ್ಷ ಕೆಂಪಯ್ಯನಹುಂಡಿ ಬಾಲಕೃಷ್ಣ, ಬಸವರಾಜು ಹಾಗೂ ಇತರ ಮುಖಂಡರಿಂದ ಪ್ರಕರಣದ ಕುರಿತು ಮಾಹಿತಿ ಪಡೆದುಕೊಂಡರು.
ಬಳಿಕ ಮಾತನಾಡಿದ ಕುಮಾರಸ್ವಾಮಿ, ಈ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ನೋವುಂಟು ಮಾಡುವಂತದ್ದು. ಬ್ಲ್ಯಾಕ್‌ಮೇಲ್‌ ಮತ್ತು ಮಾನಸಿಕ ಕಿರುಕುಳದಂತಹ ಕೃತ್ಯಗಳನ್ನು ಸಮಾಜ ಯಾವತ್ತೂ ಸಹಿಸಬಾರದು. ತಪ್ಪಿತಸ್ಥನ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಆಗಬೇಕಿದೆ. ಕಾನೂನಿನ ಕುಣಿಕೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ವರುಣ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಅಭಿಷೇಕ್‌ ಮಣಿಗಾರ್‌ ಅವರ ವತಿಯಿಂದ ಮೃತರ ಕುಟುಂಬಕ್ಕೆ ಘೋಷಿಸಲಾಗಿದ್ದ 5 ಲಕ್ಷ ಪರಿಹಾರದ ಚೆಕ್‌ ಅನ್ನು ಕುಟುಂಬದ ಸದಸ್ಯರಿಗೆ ಕುಮಾರಸ್ವಾಮಿ ವಿತರಿಸಿದರು.

ಈ ವೇಳೆ ಉಪ್ಪಾರ ಸಂಘದ ಬಸವರಾಜು,ಜೈಕುಮಾರ್‌,ಕನ್ವಿತಾ ಡೆವಲಪರ್ಸ್‌ ಮಾಲೀಕ ರಂಗರಾಜಪುರ ಸಿದ್ದರಾಜು, ಬಿಜೆಪಿ ಮುಖಂಡ ಅಂದಾನಿ ಗೌಡ, ಕೃಷ್ಣ, ಮಹೇಶ್‌ ಪಾಪು, ಶಿವಣ್ಣ, ಹೊಸ ಕೆಂಪಯ್ಯನಹುಂಡಿ ಮಂಜು, ಕೆಂಪೇಗೌಡ, ನಿಶಾಂತ್‌(ದಾಸ್‌‍), ಮಾದೇಗೌಡನ ಹುಂಡಿ ಚೇತನ್‌, ಚೆನ್ನೇಗೌಡ, ಎಂ.ಶಿವಪ್ರಸಾದ್‌, ರಾಜು, ಕುಪ್ಪೇಗಾಲ ಶಿವಬಸಪ್ಪ ಮತ್ತಿತರರಿದ್ದರು.

RELATED ARTICLES
spot_img

Latest News