Thursday, April 16, 2026
Homeರಾಜಕೀಯಕೊಟ್ಟ ಮಾತು ಉಳಿಸಿಕೊಳ್ಳುವಂತೆ ದೆಹಲಿಯಲ್ಲಿ ಹೈಕಮಾಂಡ್ ಬೆನ್ನುಬಿದ್ದ ಡಿಕೆಶಿ

ಕೊಟ್ಟ ಮಾತು ಉಳಿಸಿಕೊಳ್ಳುವಂತೆ ದೆಹಲಿಯಲ್ಲಿ ಹೈಕಮಾಂಡ್ ಬೆನ್ನುಬಿದ್ದ ಡಿಕೆಶಿ

DK Shivakumar

ಬೆಂಗಳೂರು, ಜ.19- ಅಧಿಕಾರ ಹಂಚಿಕೆಯ ಸಂಬಂಧಪಟ್ಟಂತೆ ಪಟ್ಟು ಬಿಡದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ನಾಯಕರ ಬೆನ್ನು ಬಿದ್ದಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಬೀದರ್‌ನಲ್ಲಿ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಅಂತಿಮ ದರ್ಶನ ಪಡೆದ ಬಳಿಕ ಮತ್ತೆ ದೆಹಲಿಗೆ ತೆರಳಿದ್ದ ಡಿ.ಕೆ.ಶಿವಕುಮಾರ್‌, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡುವ ಸತತ ಪ್ರಯತ್ನ ನಡೆಸಿದ್ದಾರೆ. ರಾಹುಲ್‌ ಗಾಂಧಿ ಉದ್ದೇಶ ಪೂರ್ವಕವಾಗಿಯೇ ಡಿ.ಕೆ.ಶಿವಕುಮಾರ್‌ ಅವರನ್ನು ಮುಖಾಮುಖಿ ಭೇಟಿ ಮಾಡದೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

2023ರ ವಿಧಾನಸಭೆ ಚುನಾವಣೆ ಬಳಿಕ ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ರಾಹುಲ್‌ ಗಾಂಧಿಯವರೊಂದಿಗೆ ಚರ್ಚೆ ನಡೆಸಿದ್ದು ಆ ವೇಳೆ ಎರಡುವರೆ ವರ್ಷಗಳವರೆಗೂ ಸದ್ಯಕ್ಕೆ ನಾನು ಹೇಳಿದ್ದನ್ನು ಒಪ್ಪಿಕೊಳ್ಳಿ, ನಂತರ ಸೂಕ್ತ ನಿರ್ಧಾರವನ್ನು ಹೈಕಮಾಂಡ್‌ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದರು ಎನ್ನಲಾಗಿದೆ.

ರಾಹುಲ್‌ ಗಾಂಧಿ ಮಾತಿಗೆ ಡಿ.ಕೆ.ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರೂ ಆ ವೇಳೆ ಸಹಮತ ಸೂಚಿಸಿದ್ದರು ಎಂಬ ಮಾಹಿತಿಗಳಿವೆ. ನೇರವಾಗಿ ಯಾವುದೇ ಒಪ್ಪಂದ ಆಗದೆ ಇದ್ದರೂ, ಎರಡೂವರೆ ವರ್ಷದ ಬಳಿಕ ನಾಯಕತ್ವದ ಬಗ್ಗೆ ಪುನರ್‌ ಪರಿಶೀಲನೆ ನಡೆಸುವುದಾಗಿ ರಾಹುಲ್‌ ಗಾಂಧಿ ಹೇಳಿದ್ದನ್ನೇ ಇಬ್ಬರು ನಾಯಕರು ನಂಬಿದ್ದಾರೆ ಎನ್ನಲಾಗಿದೆ.

ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಹೇಳಿದಂತೆ ಕೇಳುತ್ತೇನೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆ ಸಂದರ್ಭದಲ್ಲಿ ತಮಗೆ ಕೊಟ್ಟಿದ್ದ ಮಾತನ್ನು ಈಡೇರಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ. ದೆಹಲಿಯಲ್ಲೇ ಬೀಡು ಬಿಟ್ಟು ರಾಹುಲ್‌ ಗಾಂಧಿಯವರ ಭೇಟಿಗೆ ಸತತ ಪ್ರಯತ್ನ ನಡೆಸುತ್ತಿದ್ದಾರೆ.

ಈ ನಡುವೆ ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿರುವುದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು ಜ.27ರಂದು ರಾಜ್ಯದಲ್ಲಿಯೂ ಪಂಚಾಯತ್‌ ಮಟ್ಟದಿಂದಲೂ ಬೃಹತ್‌ ಪ್ರತಿಭಟನಾ ಆಂದೋಲನಕ್ಕೆ ಚಾಲನೆ ನೀಡಲಾಗುತ್ತದೆ.
ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ನಾಯಕ ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಎಐಸಿಸಿ ಸಂಘಟನಾತಕ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆ ವೇಳೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಮುಖಾಮುಖಿ ಕೂರಿಸಿ ಬೆಂಗಳೂರಿನಲ್ಲೇ ಚರ್ಚೆ ನಡೆಸುವ ಸಾಧ್ಯತೆ ಇದೆ.

ಅದಕ್ಕೂ ಮೊದಲು ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ, ರಣದೀಪ್‌ ಸಿಂಗ್‌ ಸುರ್ಜೇವಾಲ ಮತ್ತು ಕೆ.ಸಿ.ವೇಣುಗೋಪಾಲ್‌ ಅವರಿಗೆ ಸಂದೇಶ ಕೊಡಿಸಲು ಡಿ.ಕೆ.ಶಿವಕುಮಾರ್‌ ಪ್ರಯತ್ನಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಕೈಗೆ ಸಿಗದಂತೆ ಓಡಾಡುತ್ತಿದ್ದಾರೆ ಎನ್ನಲಾಗಿದೆ.
ಮನ್ರೇಗಾ ಯೋಜನೆ ರದ್ದುಗೊಂಡಿರುವುದರ ವಿರುದ್ಧ ಹೋರಾಟ ರೂಪಿಸಲು ನಡೆಯುತ್ತಿರುವ ಸರಣಿ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲೇ ಇದ್ದರೂ ನೇರವಾಗಿ ಭಾಗಿಯಾಗದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬೆಂಗಳೂರಿನಿಂದಲೇ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಬಹುದಿತ್ತು. ಆದಾಗ್ಯೂ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲಿ ಉಳಿದಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹಲವು ಬಾರಿ ಭೇಟಿ ಮಾಡಿ ತಮ ಆಗ್ರಹವನ್ನು ಮಂಡಿಸಿದ್ದಾರೆ. ಹೈಕಮಾಂಡ್‌ ನ ಎಲ್ಲಾ ನಾಯಕರು ರಾಹುಲ್‌ ಗಾಂಧಿಯವರತ್ತಲೇ ಬೊಟ್ಟು ಮಾಡುತ್ತಿರುವುದರಿಂದ ಡಿ.ಕೆ.ಶಿವಕುಮಾರ್‌ ದೆಹಲಿಯಲ್ಲೇ ಉಳಿದಿದ್ದಾರೆ. ಯಾವ ಕ್ಷಣದಲ್ಲಿ ಅವಕಾಶ ಸಿಕ್ಕರೂ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಲು ಹವಣಿಸುತ್ತಿದ್ದಾರೆ ಎನ್ನಲಾಗಿದೆ.

ಅಸ್ಸಾಂ ವಿಧಾನಸಭೆ ಚುನಾವಣೆಗೆ ಉಸ್ತುವಾರಿ ವಹಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ ಅದರ ಪೂರ್ವ ತಯಾರಿಗಾಗಿ ಆಯೋಜಿಸಲಾಗಿದ್ದ ಸರಣಿ ಸಭೆಯಲ್ಲಿ ಭಾಗವಹಿಸಿದ್ದರು. ಆ ವೇಳೆ ಖರ್ಗೆ ಮತ್ತು ರಾಹುಲ್‌ ಗಾಂಧಿ ಹಾಜರಿದ್ದರು. ಚುನಾವಣೆ ತಯಾರಿ ಕುರಿತ ಚರ್ಚಿಸಿದ ಬಳಿಕ ಡಿ.ಕೆ.ಶಿವಕುಮಾರ್‌ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ ತಮ ವಿಚಾರ ಮಂಡಿಸಲು ಯತ್ನಿಸಿದರಾದರೂ, ಅದಕ್ಕೆ ಸೂಕ್ತ ಸಂದರ್ಭ ಒದಗಿ ಬಂದಿರಲಿಲ್ಲ ಎನ್ನಲಾಗಿದೆ.

ರಾಹುಲ್‌ ಗಾಂಧಿಯವರ ಸಂದೇಶವನ್ನು ಕೆ.ಸಿ.ವೇಣುಗೋಪಾಲ್‌, ಡಿ.ಕೆ.ಶಿವಕುಮಾರ್‌ ಅವರಿಗೆ ತಲುಪಿಸಿದ್ದು, ವಿಧಾನಸಭೆ ಚುನಾವಣೆಗಳು ಪೂರ್ಣಗೊಳ್ಳುವವರೆಗೂ ಯಾರೂ ನಾಯಕತ್ವದ ವಿಚಾರ ಚರ್ಚೆ ಮಾಡುವುದು ಬೇಡ ಎಂಬ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಈಗ ಅಲ್ಲದಿದ್ದರೆ ಮುಂದೆ ಯಾವಾಗ ಎಂಬ ಬಗ್ಗೆಯಾದರೂ ಸ್ಪಷ್ಟನೆ ನೀಡುವಂತೆ ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ. ಅದಕ್ಕೆ ಉತ್ತರ ನೀಡಲು ಹೈಕಮಾಂಡ್‌ ಪರದಾಡುತ್ತಿದೆ ಎಂದು ತಿಳಿದು ಬಂದಿದೆ.

RELATED ARTICLES

Latest News