Saturday, April 11, 2026
Homeರಾಜ್ಯರಾಜ್ಯಗಳಿಗೆ ನೀಡುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಪರಿಷ್ಕರಣೆಗೆ ಮನವಿ

ರಾಜ್ಯಗಳಿಗೆ ನೀಡುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಪರಿಷ್ಕರಣೆಗೆ ಮನವಿ

Appeal for revision of National Disaster Relief Fund given to states

ಬೆಂಗಳೂರು, ಮಾ.24- ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಬಿಜೆಪಿ ಸಂಸದರು ಒತ್ತಡ ಹಾಕಬೇಕೆಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನ ಪರಿಷತ್‌ನಲ್ಲಿ ಮನವಿ ಮಾಡಿದರು.

ಸದಸ್ಯ ಚಿದಾನಂದಗೌಡ ಅವರು ತುಮಕೂರು ಭಾಗದಲ್ಲಿ ಬೆಳೆಹಾನಿ ಮತ್ತು ಬರಪೀಡಿತ ಪ್ರದೇಶಗಳಿಗೆ ಎನ್‌ಡಿಆರ್‌ಎಫ್‌ನಡಿ ನೀಡುತ್ತಿರುವ ಪರಿಹಾರ ಏನೇನೂ ಸಾಕಾಗುತ್ತಿಲ್ಲ. ಹೀಗಾಗಿ ರಾಜ್ಯಸರ್ಕಾರ ಇದನ್ನು ಹೆಚ್ಚಳ ಮಾಡಬೇಕೆಂದು ಮನವಿ ಮಾಡಿದರು.

ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಪರವಾಗಿ ಉತ್ತರಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಬ್ರಿಟಿಷರ ಕಾಲದಿಂದ ಎನ್‌ಡಿಆರ್‌ಎಫ್‌ನಡಿ ಎಷ್ಟು ಪರಿಹಾರ ನೀಡಲಾಗುತ್ತಿತ್ತೋ ಈಗಲೂ ಅದೇ ಪ್ರಮಾಣದಲ್ಲಿ ಇದೆ. ನಾನು ಯಾವುದೇ ರಾಜಕೀಯ ಪಕ್ಷ ಇಲ್ಲವೆ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿಲ್ಲ. ಈ ಹಿಂದೆಯೂ ಎನ್‌ಡಿಆರ್‌ಎಫ್‌ ಪರಿಷ್ಕರಣೆ ಮಾಡಬೇಕೆಂದು ನಮ ಸಚಿವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಜತೆಗೆ ಸಂಬಂಧಪಟ್ಟ ಸಚಿವರು ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸದನದಲ್ಲಿರುವ ಸದಸ್ಯರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಎನ್‌ಡಿಆರ್‌ಎಫ್‌ ಪರಿಹಾರ ನಿಧಿಯನ್ನು ಪರಿಷ್ಕರಣೆ ಮಾಡಬೇಕೆಂದು ಒತ್ತಡ ಹಾಕಬೇಕು. ಇದರಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಇದರಲ್ಲಿ ರಾಜಕೀಯ ಬೆರೆಸುವುದು ಬೇಡ ಎಂದು ಮನವಿ ಮಾಡಿದರು.

ಕಲಬುರಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎನ್‌ಡಿಆರ್‌ಎಫ್‌ ನೀಡುವ ಪರಿಹಾರ ನಿಧಿ ಜತೆ ಹೆಚ್ಚುವರಿಯಾಗಿ ರೈತರಿಗೆ 8 ಸಾವಿರ ರೂ. ಪರಿಹಾರ ನೀಡಿದ್ದಾರೆ. ಎಲ್ಲವನ್ನೂ ರಾಜ್ಯ ಸರ್ಕಾರವೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಲಿ ಎಂದು ಚಲುವರಾಯಸ್ವಾಮಿ ಹೇಳಿದರು.

RELATED ARTICLES

Latest News