ಬೆಂಗಳೂರು, ಮಾ.24- ನಗರದಲ್ಲಿರುವ ಪ್ರತಿಷ್ಠಿತ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ಸ್ಥಳಾಂತರಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಸಮಸ್ಯೆಗಳು ಮತ್ತು ಅಭಿವೃದ್ಧಿಯ ಕುರಿತು ವಿಧಾನಸಭೆಯಲ್ಲಿ ನಿಯಮ 69 ಆಡಿ ಸಾರ್ವಜನಿಕ ಮಹತ್ವದ ವಿಚಾರವನ್ನಾಗಿ ಚರ್ಚೆ ಕೈಗೆತ್ತಿಕೊಂಡ ಅವರು, ಬಡವರ ಮಕ್ಕಳು ವೈಮಾನಿಕ ತರಬೇತಿ ಪಡೆಯಲಿಕ್ಕಾಗಿ ಹಿಂದೆ ಮೈಸೂರು ಮಹಾರಾಜರು 1940ರಲ್ಲಿ ಅರಣ್ಯ ಇಲಾಖೆಗೆ ಸೇರಿದ 377 ಎಕರೆ ಜಮೀನನ್ನು ಡಿ ನೋಟಿಫಿಕೇಶನ್ ಮಾಡಿ ವೈಮಾನಿಕ ತರಬೇತಿ ಕೇಂದ್ರಕ್ಕಾಗಿ ನೀಡಿದ್ದರು. ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು, ವೈಮಾನಿಕ ತರಬೇತಿ ಕೇಂದ್ರಕ್ಕೆ ಅಡಿಗಲ್ಲು ಹಾಕಿದರು. ಆದರೆ ಈಗ ಡಿ.ಕೆ. ಶಿವಕುಮಾರ್ ಅವರು ಆ ಕಲ್ಲನ್ನು ಕಿತ್ತು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಸದರಿ ಕೇಂದ್ರಕ್ಕೆ ಈಗ 217 ಎಕರೆ ಭೂಮಿ ಇದೆ. ಅದರ ಮೇಲೆ ಡಿ.ಕೆ. ಶಿವಕುಮಾರ್ ಅವರ ಕಣ್ಣು ಬಿದ್ದಿದೆ ಎಂದು ವರದಿಯಾಗಿದೆ. ಇದು ನಿಜವೇ? ಎಂದು ಪ್ರಶ್ನಿಸಿದರು.ಕಾಂಗ್ರೆಸ್ಸಿನ ಶಾಸಕ ಬಸವರಾಜ ರಾಯರೆಡ್ಡಿ, ಡಿ.ಕೆ. ಶಿವಕುಮಾರ್ ಅವರು ಜಕ್ಕೂರಿನ ವೈಮನಿಕ ತರಬೇತಿ ಕೇಂದ್ರದ ಜಾಗದ ಮೇಲೆ ಕಣ್ಣು ಹಾಕಿಲ್ಲ. ಅದನ್ನು ಉಳಿಸಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್, ತಾವು ತರಬೇತಿ ಕೇಂದ್ರದ ಕ್ಲಬ್‌ಗೆ ಸಲಹಾ ಸಮಿತಿಯ ಸದಸ್ಯನಾಗಿದ್ದು ವಾಸ್ತವ ಅಂಶದ ಅರಿವಿದೆ. ಜಕ್ಕೂರು ಏರೋ ಡ್ರೋಮ್‌ನ ಸಮೀಪ ರಾಷ್ಟ್ರೀಯ ಹೆದ್ದಾರಿ ರಸ್ತೆ ಮತ್ತು ಮೆಟ್ರೋ ರೈಲು ಮಾರ್ಗದ ಮೇಲು ಸೇತುವೆಗಳು ಹಾದುಹೋಗಿವೆ. ಹೀಗಾಗಿ ಅಲ್ಲಿ ವಿಮಾನಗಳ ಹಾರಾಟಕ್ಕೆ ಡಿಜಿಸಿಎ ಅನುಮತಿ ನೀಡುತ್ತಿಲ್ಲ. ಈ ಎಲ್ಲಾ ಹಿನ್ನೆಲೆಯಲ್ಲಿ ವೈಮಾನಿಕ ತರಬೇತಿ ಕೇಂದ್ರವನ್ನು ಶಿವಮೊಗ್ಗ, ಹಾಸನ, ಮೈಸೂರು ಸೇರಿದಂತೆ ಬೇರೆ ಕಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ತಾವು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದೇನೆ ಎಂದರು.
ಜಕ್ಕೂರಿನ ಜಾಗದಲ್ಲಿ ಬೃಹತ್ ಕ್ರೀಡಾ ಸಂಕೀರ್ಣ ನಿರ್ಮಾಣ ಮಾಡಲು ಸಲಹೆ ನೀಡಿದ್ದೇನೆ ಎಂದು ಹೇಳಿದರು. ಜಾರ್ಜ್ ಅವರು ಪದೇ ಪದೇ ಅಶೋಕ್ ಅವರ ಮಾತುಗಳಿಗೆ ಅಡ್ಡಿಪಡಿಸಿ, ಸ್ಪಷ್ಟನೆ ನೀಡುವಾಗ ಮಧ್ಯಪ್ರವೇಶಿಸಿದ ಬಿಜೆಪಿಯ ಸುರೇಶ್ ಕುಮಾರ್, ಕುಂಬಳಕಾಯಿ ಎಂದು ಮಾತ್ರವೇ ನಾವು ಹೇಳುತ್ತಿದ್ದೇವೆ. ಸಚಿವರು ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಚರ್ಚೆ ಮುಂದುವರಿಸಿದ ಆರ್.ಅಶೋಕ್ ಸರ್ಕಾರಕ್ಕೆ ತರಬೇತಿ ಕೇಂದ್ರವನ್ನು ಸ್ಥಳಾಂತರ ಮಾಡಬಾರದು ಎಂಬ ಉದ್ದೇಶ ಇದ್ದಿದ್ದೆ. ಹಾಗಿದ್ದರೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಮೈಸೂರಿಗೆ ಕೇಂದ್ರ ಸ್ಥಳಾಂತರಿಸುವ ಬಗ್ಗೆ ಸಭೆ ನಡೆಸಿದ್ದೇಕೆ ಎಂದು ಪ್ರಶ್ನಿಸಿದರು.
ಕೇಂದ್ರದ ವಿಮಾನ ಹಾರಾಟದ ಪಥದಲ್ಲಿ ಒಂದು ಕಿಲೋಮೀಟರ್ ಗಳಷ್ಟು ದೂರ ಅತಿ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಇಲ್ಲ. ಅದನ್ನು ಹೊರತುಪಡಿಸಿದರೆ ಸುತ್ತಮುತ್ತ ಅತಿ ಎತ್ತರದ ನಿರ್ಮಾಣಗಳಿಗೆ ಯಾವುದೇ ಅಡಚಣೆ ಇಲ್ಲ. ಆದರೂ ರಿಯಲ್ ಎಸ್ಟೇಟ್ ಮಾಫಿಯಾ ಈ ಕೇಂದ್ರವನ್ನು ಸ್ಥಳಾಂತರ ಮಾಡಿಸುವ ಹುನ್ನಾರ ನಡೆಸಿದೆ ಎಂದು ಅಶೋಕ್ ಆರೋಪಿಸಿದರು .
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಧ್ಯ ಪ್ರವೇಶಿ, ದಾಖಲೆಗಳಿಗೆ ತಪ್ಪು ಮಾಹಿತಿ ಹೋಗಬಾರದು ಎಂದು ಸ್ಪಷ್ಟನೆ ನೀಡುತ್ತಿದ್ದೇನೆ. ಜಕ್ಕೂರು ವೈಮಾನಿಕ ತರಬೇತಿ ಕೇಂದ್ರವನ್ನು ಸ್ಥಳಾಂತರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಪಿಪಿಪಿ ಮಾದರಿಯಲ್ಲಿ ಕೇಂದ್ರವನ್ನು ಮುಂದುವರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಸ್ಥಳೀಯ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಅಭಿಪ್ರಾಯಗಳಿಗೆ ತಮ್ಮ ಸಹಮತ ಇದೆ ಎಂದು ಹೇಳಿದರು.
