ಬೆಂಗಳೂರು, ನ.19- ಸಿಎಂ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ನಿವಾಸ ಗಂಗಾ ಗೃಹಪ್ರವೇಶದಲ್ಲಿ ಪಕ್ಷಾತೀತವಾಗಿ ಶಾಸಕರು, ಸಂಸದರು ಭಾಗವಹಿಸಿದರು. ಕುಮಾರಕೃಪ ಅತಿಥಿ ಗೃಹ ವನ್ನು ಸಣ್ಣ-ಪುಟ್ಟ ಮಾರ್ಪಾಡುಗಳೊಂದಿಗೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನಾಗಿ ಸಜ್ಜುಗೊಳಿಸಲಾಗಿದೆ. ಸಭೆ ನಡೆಸಲು ಅತ್ಯಾಧುನಿಕ ಸೌಲಭ್ಯ, ತಂತ್ರಜ್ಞಾನವುಳ್ಳ ಸಭಾಂಗಣ ನಿರ್ಮಾಣ, ಉಳಿದಂತೆ ಅಧಿಕಾರಿಗಳು, ಜನ ಪ್ರತಿನಿಧಿಗಳನ್ನು ಹಾಗೂ ಜನರನ್ನು ಭೇಟಿ ಮಾಡಲು ವ್ಯವಸ್ಥೆಗಳಾಗಿವೆ. ಸರ್ಕಾರಿ ಕಾರ್ಯಕಲಾಪಕ್ಕೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಡಿ.ಕೆ.ಶಿವಕುಮಾರ್ ಅವರು ಸದಾಶಿವನಗರದ ನಿವಾಸದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಆದರೆ ಉಪ ಮುಖ್ಯಮಂತ್ರಿಯಾದಾಗಿಂದಲೂ ಜನ ದಟ್ಟಣೆ ತೀವ್ರವಾಗಿತ್ತು. ಇದರಿಂದ ಅಕ್ಕಪಕ್ಕದ ನಿವಾಸಗಳಿಗೆ ಸಮಸ್ಯೆಗಳಾಗುತ್ತಿವೆ. ಕೆಲವು ಸಂದರ್ಭಗಳಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ವಾಹನ ನಿಲುಗಡೆಗೆ ಸಂಬಂಧಪಟ್ಟಂತೆ ಸುತ್ತಮುತ್ತಲಿನ ನಿವಾಸಿಗರು ಪದೇ ಪದೇ ಕಿರಿಕಿರಿ ಅನುಭವಿಸುವುದು ಪುನಾರಾವರ್ತನೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ತಮ ವಾಸ್ತವ್ಯವನ್ನೇ ಕುಮಾರಕೃಪ ಅತಿಥಿ ಗೃಹದಲ್ಲಿ ಪರಿವರ್ತಿಸಲಾಗಿರುವ ಗಂಗಾ ನಿವಾಸಕ್ಕೆ ಸ್ಥಳಾಂತರಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಕುಮಾರಕೃಪ ಬಳಿಯ ಗಾಂಧಿ ಭವನದ ರಸ್ತೆಯಲ್ಲಿ ತಮ ವಾಸ್ತವ್ಯ ಹೂಡಿದ್ದರು. ಆ ಸಂದರ್ಭದಲ್ಲಿ ವಾಹನ ದಟ್ಟಣೆಯಿಂದ ಅಕ್ಕಪಕ್ಕದ ನಿವಾಸಿಗರಿಗೆ ಕಿರಿಕಿರಿಯಾಗುತ್ತಿತ್ತು. ಕೊನೆಗೆ ವಾಸ್ತವ್ಯವನ್ನು ಅಧಿಕೃತ ನಿವಾಸ ಕಾವೇರಿಗೆ ಸ್ಥಳಾಂತರಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಅವರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಿಲಾಗಿದೆ.
ಈ ಮೊದಲು ಎಸ್.ಎಂ.ಕೃಷ್ಣ, ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳು ಕಾವೇರಿ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು. ಸಿದ್ದರಾಮಯ್ಯ ಅದೇ ನಿವಾಸದಲ್ಲೇ ಮುಂದುವರೆದಿದ್ದರಿಂದಾಗಿ ಡಿ.ಕೆ.ಶಿವಕುಮಾರ್ ಕುಮಾರಕೃಪ ಅತಿಥಿ ಗೃಹವನ್ನು ತಮ ವಾಸ್ತವ್ಯಕ್ಕೆ ಗಂಗಾ ನಿವಾಸವನ್ನಾಗಿ ಬದಲಾಯಿಸಿಕೊಂಡಿದ್ದಾರೆ.
ಎರಡು ದಿನಗಳ ಹಿಂದೆ ಖಾಸಗಿಯಾಗಿ ಪೂಜೆ ನೆರವೇರಿಸಿ, ಗೃಹಪ್ರವೇಶ ಮಾಡಿದರು. ಇಂದು ರಾಜ್ಯದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ರಾಜ್ಯಸಭಾ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು ಸೇರಿದಂತೆ ಪ್ರಮುಖರನ್ನು ಆಹ್ವಾನಿಸಿ ಗಂಗಾ ಬಂಗಲೆಯನ್ನು ಪರಿಚಯಿಸಿದ್ದಾರೆ. ಇನ್ನೂ ಮುಂದೆ ಡಿ.ಕೆ.ಶಿವಕುಮಾರ್ ಅವರು ಗಂಗಾ ನಿವಾಸದಲ್ಲೇ ವಾಸಿಸಲಿದ್ದಾರೆ.
