Homeರಾಜ್ಯಕೆಪಿಎಸ್‌‍ಸಿ ಕರ್ಮಕಾಂಡ : ಸಿಸಿಟಿವಿ ಇಲ್ಲದ ಕೊಠಡಿಗಳಲ್ಲೇ ನಡೆದಿತ್ತಾ ಅಭ್ಯರ್ಥಿಗಳ ಸಂದರ್ಶನ..?

ಕೆಪಿಎಸ್‌‍ಸಿ ಕರ್ಮಕಾಂಡ : ಸಿಸಿಟಿವಿ ಇಲ್ಲದ ಕೊಠಡಿಗಳಲ್ಲೇ ನಡೆದಿತ್ತಾ ಅಭ್ಯರ್ಥಿಗಳ ಸಂದರ್ಶನ..?

ಬೆಂಗಳೂರು,ನ.19- ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಹಗರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರಗಳ ಕೀ ಅಕ್ರಮವಾಗಿ ಹಂಚಿಕೆ, ಅಭ್ಯರ್ಥಿಗಳಿಂದ ಹಣ ವಸೂಲಿ ಸೇರಿದಂತೆ ಹಲವು ಗಂಭೀರ ಆರೋಪಗಳ ಬೆನ್ನಲ್ಲೇ, ಅಭ್ಯರ್ಥಿಗಳ ಸಂದರ್ಶನ ಪ್ರಕ್ರಿಯೆಯಲ್ಲೂ ಪಾರದರ್ಶಕತೆ ಕಾಪಾಡಿಲ್ಲ ಎಂಬ ಅಂಶ ಇದೀಗ ಮುನ್ನೆಲೆಗೆ ಬಂದಿದೆ.

ಸಂದರ್ಶನ ಕೊಠಡಿಗಳು ಹಾಗೂ ಸ್ಟ್ರಾಂಗ್‌ ರೂಂಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿಲ್ಲ ಎಂಬ ವಿಚಾರ ಜಾರಿ ನಿರ್ದೇಶನಾಲಯದ ತನಿಖೆಯಲ್ಲೂ ಪ್ರಸ್ತಾಪವಾಗಿದೆ. ಉದ್ದೇಶಪೂರ್ವಕವಾಗಿ ಸಿಸಿಟಿವಿ ವ್ಯವಸ್ಥೆ ಇಲ್ಲದ ಕೊಠಡಿಗಳನ್ನು ಆಯ್ಕೆ ಮಾಡಿಕೊಂಡು ಅಭ್ಯರ್ಥಿಗಳ ಸಂದರ್ಶನ ನಡೆಸಲಾಗುತ್ತಿತ್ತೇ ಎಂಬ ಗಂಭೀರ ಪ್ರಶ್ನೆ ಈಗ ಉದ್ಭವಿಸಿದೆ.

ಪಶುವೈದ್ಯಾಧಿಕಾರಿ ಹಾಗೂ ಕಿರಿಯ ಎಂಜಿನಿಯರ್‌ (ಎಇ) ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳ ಸಂದರ್ಶನದ ಸಂದರ್ಭದಲ್ಲಿ ಸಿಸಿಟಿವಿ ಕಣ್ಗಾವಲು ಇರಲಿಲ್ಲ ಎಂಬ ಅಂಶವನ್ನು ಇಡಿ ತನಿಖೆಗೆ ಸಂಬಂಧಿಸಿದ ದಾಖಲೆಗಳು ಉಲ್ಲೇಖಿಸಿವೆ.

ಮಾಜಿ ಪರೀಕ್ಷಾ ನಿಯಂತ್ರಕರ ಹೇಳಿಕೆ ಏನು?
ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿರುವ ಕೆಪಿಎಸ್‌‍ಸಿ ಮಾಜಿ ಪರೀಕ್ಷಾ ನಿಯಂತ್ರಕ, ಐಎಎಸ್‌‍ ಅಧಿಕಾರಿ ಗ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ಅವರನ್ನು ಇಡಿ ಅಧಿಕಾರಿಗಳು ಸಂದರ್ಶನ ಕೊಠಡಿಗಳು ಹಾಗೂ ಸ್ಟ್ರಾಂಗ್‌ ರೂಂಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸದಿರುವ ಕುರಿತು ಪ್ರಶ್ನಿಸಿದ್ದಾರೆ. ಆಗ ಅವರು, ಸಿಸಿಟಿವಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಚಾರವಾಗಿ ಕೆಪಿಎಸ್‌‍ಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಕೇಳಿ ಎಂದು ಉತ್ತರಿಸಿರುವುದಾಗಿ ವರದಿಯಾಗಿದೆ.

ಈ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಆಯೋಗದ ಆಡಳಿತಾತಕ ವ್ಯವಸ್ಥೆ, ಉನ್ನತ ಅಧಿಕಾರಿಗಳ ಜವಾಬ್ದಾರಿ ಹಾಗೂ ನೇಮಕಾತಿ ಪ್ರಕ್ರಿಯೆಯ ಮೇಲ್ವಿಚಾರಣೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪರೀಕ್ಷಾ ಪ್ರಕ್ರಿಯೆಯ ಪ್ರಮುಖ ಜವಾಬ್ದಾರಿ ಹೊಂದಿದ್ದ ಅಧಿಕಾರಿಯೇ ಸಿಸಿಟಿವಿ ವ್ಯವಸ್ಥೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿರುವುದು ತನಿಖೆಯ ದೃಷ್ಟಿಯಿಂದಲೂ ಗಮನಾರ್ಹವಾಗಿದೆ.

ಕೆಪಿಎಸ್‌‍ಸಿ ಹಗರಣ ಕೇವಲ ಸಂದರ್ಶನದ ಅಕ್ರಮಗಳಿಗೆ ಸೀಮಿತವಾಗಿಲ್ಲ. 2026ರ ಜನವರಿ 8 ಮತ್ತು 9ರಂದು ನಡೆದ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳ ಕೀ ಸೋರಿಕೆಯಾಗಿದೆ ಎಂಬ ಆರೋಪ ತನಿಖೆಯಲ್ಲಿ ಬಹಿರಂಗವಾಗಿದೆ.

ಇಡಿ ತನಿಖೆಯ ಪ್ರಕಾರ, ಆಗಿನ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಕುಮಾರ್‌ ಗಂಗ್ವಾರ್‌ ಅವರು ಗೌಪ್ಯ ಪ್ರಶ್ನೆಪತ್ರಿಕೆ ಹಾಗೂ ಸರಿಯಾದ ಉತ್ತರಗಳನ್ನು ಪೆನ್‌ಡ್ರೈವ್‌ನಲ್ಲಿ ನಕಲಿಸಿ ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಅವರಿಗೆ ನೀಡಿದ್ದರು. ಬಳಿಕ ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಹಾಗೂ ಉತ್ತರಗಳನ್ನು ತಲುಪಿಸಲಾಗಿತ್ತು ಎಂದು ಇಡಿ ಆರೋಪಿಸಿದೆ.

ಸುಮಾರು 1,400 ಅಭ್ಯರ್ಥಿಗಳು ಬರೆದಿದ್ದ ಪರೀಕ್ಷೆಯಲ್ಲಿ 400 ಹುದ್ದೆಗಳ ನೇಮಕಾತಿ ನಡೆದಿತ್ತು. ಈ ಅಕ್ರಮದಲ್ಲಿ ಸುಮಾರು 19 ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಅಥವಾ ಉತ್ತರಗಳ ಮಾಹಿತಿ ಮುಂಚಿತವಾಗಿ ದೊರೆತಿತ್ತು ಎಂಬುದನ್ನೂ ಇಡಿ ತನ್ನ ತನಿಖೆಯಲ್ಲಿ ಉಲ್ಲೇಖಿಸಿದೆ. ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಇದೆ.

ಎಸ್‌‍ಐಟಿ ತನಿಖೆಯೂ ಚುರುಕು
ಇನ್ನೊಂದೆಡೆ ಕರ್ನಾಟಕ ಹೈಕೋರ್ಟ್‌ ನಿರ್ದೇಶನದಂತೆ ರಚನೆಯಾಗಿರುವ ವಿಶೇಷ ತನಿಖಾ ತಂಡ ಕೂಡ ಪ್ರಕರಣದ ತನಿಖೆ ಮುಂದುವರಿಸಿದೆ. ನವೆಂಬರ್‌ 17ರಂದು ಕೆಪಿಎಸ್‌‍ಸಿ ಸದಸ್ಯೆ ಬಿ.ವಿ. ಗೀತಾ ಅವರನ್ನು ಎಸ್‌‍ಐಟಿ ಬಂಧಿಸಿದೆ. ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಕೂಡ ಎಸ್‌‍ಐಟಿ ವಶದಲ್ಲಿದ್ದು, ನವೆಂಬರ್‌ 19ರವರೆಗೆ ವಿಚಾರಣೆಗೆ ಅನುಮತಿ ನೀಡಲಾಗಿದೆ.

RELATED ARTICLES

Latest News