ಬೆಂಗಳೂರು,ನ.19-ಆಂಧ್ರಪ್ರದೇಶದ ಅಮರ್ಚಂದ್ (48) ಎಂಬುವವರು ಕಾರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾರೆಂಬುವುದು ದೇವನಹಳ್ಳಿ ಠಾಣೆ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ವಿಜಯಪುರ ಕ್ರಾಸ್ ಬಳಿಯ ಯೂನಿಯನ್ ಬ್ಯಾಂಕ್ ಮುಂದೆ ಅನಮಾನಾಸ್ಪದವಾಗಿ ಕಾರು ನಿಂತಿತ್ತು. ಈ ಕಾರನ್ನು ಬೇರೆಡೆಗೆ ಸ್ಥಳಾಂತರಿಸಲು ಮೂರು ದಿನಗಳ ಹಿಂದೆ ಮುಂದಾದಾಗ ಆ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಮದ್ಯ ಸೇವಿಸಿದ ವ್ಯಕ್ತಿ ಕಾರಿನ ಗಾಜನ್ನು ಮುಚ್ಚಿ ಮಲಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗಿದೆ.
ನಂತರ ಮೃತಪಟ್ಟಿರುವ ವ್ಯಕ್ತಿ ಆಂಧ್ರಪ್ರದೇಶದ ಅಮರ್ಚಂದ್ ಎಂಬುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮರಣೋತ್ತರ ವರದಿ ಬಂದ ನಂತರವೇ ಈ ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
