ಬೆಂಗಳೂರು,ನ.19- ಕಾರಿನೊಳಗೇ ಗುಜರಿ ವ್ಯಾಪಾರಿಯ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲೂರು ಠಾಣೆ ಪೊಲೀಸರು ಕಾಂಗ್ರೆಸ್ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಕೆ.ಪಿ.ಅಗ್ರಹಾರದ ನಿವಾಸಿ, ಕಾಂಗ್ರೆಸ್ ಮುಖಂಡ ನವೀದ್ ಇಲಾಹಿ ಬೇಗ್ ಹಾಗೂ ಈತನ ಸಹಚರ ಮುಬಾರಕ್ ಬಂಧಿತ ಆರೋಪಿಗಳು.
ನವೀದ್ ಹಾಗೂ ಕೊಲೆಯಾಗಿರುವ ಬನ್ನೇರುಘಟ್ಟ ಮೂಲದ ಇಮ್ರಾಜ್ ಪಾಷಾ ಸ್ಕ್ರಾಪ್ ವ್ಯವಹಾರ ಮಾಡಿಕೊಂಡಿದ್ದರು. ನವೀದ್ ಮೈಸೂರು ರಸ್ತೆ ಹಾಗೂ ಬ್ಯಾಟರಾಯನಪುರ ಭಾಗದಲ್ಲಿ ಸ್ಕ್ರಾಪ್ ವ್ಯವಹಾರ ನಡೆಸದಂತೆ ಇಮ್ರಾಜ್‌ಗೆಎಚ್ಚರಿಕೆ ನೀಡಿದ್ದ.
ಆದರೆ ಇಮ್ರಾಜ್ ತನ್ನ ವ್ಯವಹಾರವನ್ನು ವಿಸ್ತರಿಸಿದ್ದರಿಂದ ಆತನ ಮೇಲೆ ಹಗೆ ಸಾಧಿಸುತ್ತಿದ್ದನು. ತನ್ನ ವ್ಯವಹಾರಕ್ಕೆ ಅಡ್ಡಗಾಲು ಹಾಕುತ್ತಿರುವ ಇಮ್ರಾಜ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಅದರಂತೆ ಕಳೆದ ಸೋಮವಾರ ರಾತ್ರಿ ಮಾತನಾಡುವ ನೆಪದಲ್ಲಿ ಇಮ್ರಾಜ್‌ನನ್ನು ಬಾಗಲೂರಿನ ನಿರ್ಜನ ಪ್ರದೇಶದ ಬಳಿ ಕರೆಸಿಕೊಂಡಿದ್ದಾನೆ.
ಇಮ್ರಾಜ್ ಬೂದಿಗೆರೆ ಕ್ರಾಸ್ ಸಮೀಪದ ಮಂಚಪ್ಪನಹಳ್ಳಿಯ ನಿರ್ಜನ ಪ್ರದೇಶಕ್ಕೆ ಕಾರಿನಲ್ಲಿ ಬಂದಾಗ ತನ್ನ ಸಹಚರನೊಂದಿಗೆ ಹೊಂಚು ಹಾಕಿ ಕುಳಿತಿದ್ದ ನವೀದ್ ಏಕಾಏಕಿ ಇಮ್ರಾಜ್ ಮೇಲೆ ಲೈಸೆನ್ಸ್ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಮಾರನೇ ದಿನ ಬೆಳಗ್ಗೆ ಅನುಮಾನಸ್ಪದವಾಗಿ ನಿಂತಿದ್ದ ಕಾರಿನ ಬಳಿ ದಾರಿಹೋಕರು ಹೋಗಿ ನೋಡಿದಾಗ ವ್ಯಕ್ತಿಯೊಬ್ಬರು ಮೃತಪಟ್ಟಿರುವುದನ್ನು ಗಮನಿಸಿ ಬಾಗಲೂರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಅಂದು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕಾರಿನ ಚಾಲಕನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಗೆ ಯಾರೋ ಗುಂಡು ಹಾರಿಸಿ ಕೊಲೆ ಮಾಡಿರುವುದು ಕಂಡುಬಂದಿದೆ. ನಂತರ ತನಿಖೆ ಕೈಗೊಂಡ ಪೊಲೀಸರು ಕೊಲೆಯಾದ ವ್ಯಕ್ತಿಯನ್ನು ಬನ್ನೇರುಘಟ್ಟದ ನಿವಾಸಿ ಇಮ್ರಾಜ್‌ಪಾಷಾ (45) ಎಂದು ಗುರುತಿಸಿದ್ದಾರೆ.
ಈ ವ್ಯಕ್ತಿಯನ್ನು ಯಾರು ಕೊಲೆ ಮಾಡಿದ್ದಾರೆ, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ಚುರುಕುಗೊಳಿಸಿ ಮಾಹಿತಿಯನ್ನು ಕಲೆ ಹಾಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲನ್ನು ಎಫ್‌ಎಸ್‌ಎಲ್‌ಗೆ ರವಾನಿಸಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
