ಬೆಂಗಳೂರು,ನ.19- ಅಕ್ರಮ ಚಟುವಟಿಕೆ ಗಳು, ಮಾಫಿಯಾಗಳ ಜೊತೆ ಕೈ ಜೋಡಿಸುವುದು ಹಾಗೂ ಭ್ರಷ್ಟಾಚಾರದಲ್ಲಿ ತೊಡಗುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಗರ ನೂತನ ಮುಖ್ಯ ಪೊಲೀಸ್ ಆಯುಕ್ತರಾದ ಆರ್. ಹಿತೇಂದ್ರ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ತಮ ಕಚೇರಿಯಲ್ಲಿ ಇಂದು ನೂತನ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅವರು, ಇಲಾಖೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ಕಾಪಾಡುವ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ತಪ್ಪು ಮಾಡುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು, ತಮ ಕೆಲಸವನ್ನು ನಿಯಮಬದ್ಧವಾಗಿ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ರೀತಿಯ ಅಶಿಸ್ತನ್ನು ಸಹಿಸುವುದಿಲ್ಲವೆಂದು ಅವರು ತಾಕೀತು ಮಾಡಿದರು.
ಪೊಲೀಸ್ ಮ್ಯಾನುವಲ್‌ನಲ್ಲಿ ಏನು ನಿಯಮಗಳಿವೆಯೋ ಅಷ್ಟು ಕೆಲಸವನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಇದೇ ವೇಳೆ ಅವರು ತಿಳಿಸಿದರು. ರೌಡಿ ಸ್ಕ್ವಾಡ್ ಇದೆ ಎಂದು ಯಾರೂ ಮೈ ಮರೆಯಬೇಡಿ, ಎಲ್ಲಾ ಐದು ಕಮಿಷನರ್‌ಗಳು ತಮ ವ್ಯಾಪ್ತಿಯ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಸಂದೇಶವನ್ನು ಸ್ಪಷ್ಟವಾಗಿ ತಲುಪಿಸಬೇಕೆಂದು ಆಯುಕ್ತರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ನಗರಕ್ಕೆ ಐವರು ಆಯುಕ್ತರು ಹಾಗೂ ಒಬ್ಬರು ಮುಖ್ಯ ಆಯುಕ್ತರನ್ನು ಸರ್ಕಾರ ನೇಮಿಸುವ ಈ ನೂತನ ವ್ಯವಸ್ಥೆಗಳೊಂದಿಗೆ ದಶಕಗಳ ಇತಿಹಾಸ ಹೊಂದಿದ್ದ ಏಕೈಕ ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆ ಇತಿಹಾಸದ ಪುಟ ಸೇರಿದೆ. ನಿನ್ನೆ ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
