Saturday, April 11, 2026
Homeರಾಜ್ಯಔತಣಕೂಟಕ್ಕೆ ಶಾಸಕರಿಗೆ ಖುದ್ದು ಆಹ್ವಾನ ನೀಡಿದ ಡಿಕೆಶಿ

ಔತಣಕೂಟಕ್ಕೆ ಶಾಸಕರಿಗೆ ಖುದ್ದು ಆಹ್ವಾನ ನೀಡಿದ ಡಿಕೆಶಿ

D.K. Shivakumar personally invites MLAs to dinner

ಬೆಂಗಳೂರು, ಮಾ.10- ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳಿಸಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ಅವರು, ಇಂದು ಕಾಂಗ್ರೆಸ್‌‍ನ ಶಾಸಕರಿಗೆ, ಜನಪ್ರತಿನಿಧಿ ಗಳಿಗೆ ಔತಣಕೂಟ ಆಯೋಜಿಸಿದ್ದು ಅದಕ್ಕಾಗಿ ಪಕ್ಷದ ಶಾಸಕರಿಗೆ ಖುದ್ದಾಗಿ ಆಹ್ವಾನ ನೀಡಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರದ ಕಲಾಪದ ನಡುವೆ ತಮ್ಮ ಸ್ಥಾನದಿಂದ ಎದ್ದು ಕಾಂಗ್ರೆಸ್‌‍ ಪಕ್ಷದ ಪ್ರತಿಯೊಬ್ಬ ಶಾಸಕರ ಬಳಿಗೆ ಹೋದ ಡಿ.ಕೆ. ಶಿವಕುಮಾರ್‌ ಔತಣಕೂಟದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದರು. ಪಕ್ಷೇತರ ಸದಸ್ಯರಾಗಿರುವ ಪಾಂಡವಪುರದ ದರ್ಶನ್‌ ಪುಟ್ಟಣ್ಣಯ್ಯ ಅವರಿಗೂ ಆಹ್ವಾನ ನೀಡಿದರು.

ಈ ಹಂತದಲ್ಲಿ ಬಿಜೆಪಿಯ ಕೆಲ ಶಾಸಕರಿಗೂ ಹಸ್ತಲಾಘವ ನೀಡಿದ ಡಿ.ಕೆ.ಶಿವಕುಮಾರ್‌ ಅವರು ಉಭಯ ಕುಶಲೋಪರಿ ವಿಚಾರಿಸಿಕೊಂಡರು. ಸಿಎಂ ಕುರ್ಚಿ ಡಿ.ಕೆ.ಶಿವಕುಮಾರ್‌ ಗಾಬರಿ: ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿಯ ಶಾಸಕ ಉದಯ್‌ ಗರುಡಾಚಾರ್‌, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಬಳಿ ಮಾತನಾಡಲು ಹೋಗಿದ್ದರು.

ಅದೇ ವೇಳೆ ಬೆಂಗಳೂರಿನ ತೆರಿಗೆ ಪದ್ಧತಿಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ನಾಯಕರು ಸದಸ್ಯರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಅತ್ತ ಗಮನ ಕೊಟ್ಟಿದ್ದ ಡಿ.ಕೆ.ಶಿವಕುಮಾರ್‌ ಅವರು ತಮ ಬಳಿ ಬಂದ ಉದಯ್‌ ಗರುಡಾಚಾರ್‌ ಅವರನ್ನು ಸ್ವಲ್ಪ ಸಮಯ ಕುಳಿತುಕೊಳ್ಳುವಂತೆ ಕೈ ಸನ್ನೆ ಮಾಡಿದರು.

ಉದಯ್‌ ಗರುಡಾಚಾರ್‌ ಅವರು, ಡಿ.ಕೆ.ಶಿವಕುಮಾರ್‌ ಪಕ್ಕದಲ್ಲಿ ಅವರ ಕುರ್ಚಿಯಲ್ಲಿ ಕೂರಲು ಮುಂದಾದರು. ಗಾಬರಿ ಯಾದ ಡಿ.ಕೆ.ಶಿವಕುಮಾರ್‌, ಉದಯ್‌ ಗರುಡಾಚಾರ್‌ ಅವರ ಕೈಹಿಡಿದು ಅಲ್ಲಿ ಕುಳಿತುಕೊಳ್ಳದಂತೆ ಎಚ್ಚರಿಸಿ ತಮ ಬಲಬದಿಯಲ್ಲಿದ್ದ ಖಾಲಿ ಕುರ್ಚಿಯಲ್ಲಿ ಕೂರಲು ತಿಳಿವಳಿಕೆ ನೀಡಿದರು. ಇದನ್ನು ಗಮನಿಸಿದ ಬಿಜೆಪಿಯ ಸುನೀಲ್‌ಕುಮಾರ್‌, ಸಿಎಂ ಕುರ್ಚಿಯಲ್ಲಿ ಯಾರು ಕೂರಬೇಕು ಯಾರ್ಯಾರೋ ಕೂರುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಎರಡನೇ ಬಾರಿ ಶಾಸಕರಾಗಿರುವ ಉದಯ ಗರುಡಾಚಾರ್‌ ಅವರಿಗೆ ಸದನದ ನಿಯಮಗಳ ಅರಿವಿನ ಕೊರತೆ ಇದ್ದಂತೆ ಕಂಡುಬಂತು. ಡಿ.ಕೆ.ಶಿವಕುಮಾರ್‌ ಅವರ ಜೊತೆಯಲ್ಲಿ ಮಾತುಕತೆ ಮುಗಿಸಿದ ಬಳಿಕ ಅಲ್ಲಿಂದ ನೇರವಾಗಿ ಸಭಾಧ್ಯಕ್ಷರ ಮುಂದಿನ ಬಾವಿಯ ಬಳಿಯಿಂದ ಹಾದು ಬಂದರು. ಇದು ಕೆಲಕಾಲ ಗೊಂದಲದ ವಾತಾವರಣವನ್ನು ನಿರ್ಮಿಸಿತ್ತು. ಪ್ರತಿಭಟನೆ ನಡೆಸದ ಹೊರತೂ ಶಾಸಕರು ಸದನದ ಸಂದರ್ಭದಲ್ಲಿ ಬಾವಿಯಲ್ಲಿ ಹಾದು ಹೋಗಬಾರದು ಎಂದು ಸಭಾಧ್ಯಕ್ಷ ಯು.ಟಿ.ಖಾದರ್‌ ತಿಳಿ ಹೇಳಿದರು.

RELATED ARTICLES

Latest News