Sunday, April 12, 2026
Homeರಾಜ್ಯಜಿಬಿಎ ಕಾರ್ಯಕಾರಿ ಸಮಿತಿ ಮೊದಲ ಸಭೆ : ಸಿಎಂ ಅಧಿಕೃತ ಮಾಹಿತಿಯೇ ಇಲ್ಲ

ಜಿಬಿಎ ಕಾರ್ಯಕಾರಿ ಸಮಿತಿ ಮೊದಲ ಸಭೆ : ಸಿಎಂ ಅಧಿಕೃತ ಮಾಹಿತಿಯೇ ಇಲ್ಲ

GBA Executive Committee First Meeting: CM No Official Information

ಬೆಂಗಳೂರು, ಮಾ.20- ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕತ್ತಲಿನಲ್ಲಿಟ್ಟು ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಮೊದಲ ಸಭೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡೆಸಿದ್ದಾರೆ.

2024ರ ಜುಲೈ 23ರಂದು ವಿಧಾನಸಭೆಯಲ್ಲಿ ಮಂಡಿಸಲಾದ ಮಸೂದೆಯಲ್ಲಿ ಮತ್ತು ಮಾರ್ಚ್‌ 2025ರ 10ರಂದು ಅಂಗೀಕರಿಸಲಾದ ವಿಧೇಯಕದ ಪ್ರಕಾರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅವರು ಪದ ನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಕಾರ್ಯಕಾರಿ ಸಮಿತಿಗೆ ಬೆಂಗಳೂರು ಅಭಿವೃದ್ಧಿ ಸಚಿವರೆಂದು ಉಲ್ಲೇಖಿಸಲಾಗಿದೆ.

ಪ್ರಾಧಿಕಾರ ಮತ್ತು ಕಾರ್ಯಕಾರಿ ಸಮಿತಿ ಎರಡೂ ಪ್ರತ್ಯೇಕ ಎಂಬುವುದು ಸ್ಪಷ್ಟ. ಪ್ರಾಧಿಕಾರಕ್ಕೆ ಬೆಂಗಳೂರು ಅಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಲಿದ್ದು, ಗೃಹ ಮಂತ್ರಿ, ನಗರಾಭಿವೃದ್ಧಿ ಮಂತ್ರಿ, ಸಾರಿಗೆ ಮಂತ್ರಿ, ಇಂಧನ ಮಂತ್ರಿ, ಗ್ರೇಟರ್‌ ಬೆಂಗಳೂರು ಪ್ರದೇಶದಲ್ಲಿನ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಚಿವರು, ಪಾಲಿಕೆಗಳ ಆಯುಕ್ತರು ಸದಸ್ಯರಾಗಿರತಕ್ಕದ್ದು ಎಂದು ಸೂಚಿಸಲಾಗಿತ್ತು.

ವಿಧಾನ ಪರಿಷತ್‌ನಲ್ಲಿ ಈ ಕಾಯ್ದೆ ಅಂಗೀಕಾರಗೊಳ್ಳದೆ, ಜಂಟಿ ಪರಿಶೀಲನಾ ಸಮಿತಿಗೆ ವಹಿಸಲಾಗಿತ್ತು. ಅನಂತರ ಜಂಟಿ ಪರಿಶೀಲನಾ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಮಾಡಲಾದ ತಿದ್ದು ಪಡಿ ಕಾಯ್ದೆಯನ್ನು 2025ರ ಮಾರ್ಚ್‌ 10ರಂದು ವಿಧಾನಸಭೆಯಲ್ಲಿ ಮತ್ತು ಮಾರ್ಚ್‌ 12 ರಂದು ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಗಿದೆ, ಈ ಕಾಯ್ದೆಯ ಪ್ರಕಾರ ಸೆಕ್ಷನ್‌ 9(3)ರ ಅಡಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅವರೇ ಅಧ್ಯಕ್ಷರಾಗಲಿದ್ದು, ಬೆಂಗಳೂರು ಅಭಿವೃದ್ಧಿ ಮಂತ್ರಿ ಉಪಾಧ್ಯಕ್ಷರಾಗಿದ್ದಾರೆ.

ಜಿಬಿಎ ಪ್ರದೇಶದಲ್ಲಿನ ಕಾರ್ಯಕಾರಿ ಸಮಿತಿಗೆ ನಗರಾಭಿವೃದ್ಧಿ ಸಚಿವರೇ ಅಧ್ಯಕ್ಷರು ಎಂದು ಉಲ್ಲೇಖಿಸಲಾಗಿದೆ. ಅದರಂತೆ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯುವುದು ಸೂಕ್ತ ಎಂದಾದರೂ ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿಯವರಿಗೆ ಕನಿಷ್ಠ ಮಾಹಿತಿಯನ್ನು ನೀಡದಿರುವುದು ಅಚ್ಚರಿ ಮೂಡಿಸಿದೆ.

ಪ್ರಾಧಿಕಾರದ ಕಾರ್ಯಕಾರಿ ಸಮಿತಿಯ ಸಭೆಯ ಬಗ್ಗೆ ಮುಖ್ಯಮಂತ್ರಿಯವರಿಗಾಗಲಿ ಅಥವಾ ಅವರ ಕಛೇರಿಗಾಗಲೀ ಕನಿಷ್ಠ ತಿಳಿವಳಿಕೆಯ ಸೂಚನಾ ಪತ್ರವನ್ನು ಕಳುಹಿಸಿಕೊಡದಿರುವುದು ಅಚ್ಚರಿ ಮೂಡಿಸಿದೆ.

ರಾಜ್ಯ ಸರ್ಕಾರದ ಮುಖ್ಯಸ್ಥರೂ ಆಗಿರುವ ಸಿದ್ದರಾಮಯ್ಯ ಅವರನ್ನು ಉದ್ದೇಶ ಪೂರ್ವಕವಾಗಿಯೇ ಬೆಂಗಳೂರಿನ ಆಡಳಿತದಿಂದ ಡಿ.ಕೆ.ಶಿವಕುಮಾರ್‌ ದೂರ ಇಡುವ ಪ್ರಯತ್ನ ನಡೆಸುತ್ತಿದ್ದಾರೆಯೇ? ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.

ಬೆಂಗಳೂರಿನ ಆಭಿವೃದ್ಧಿಗೆ ಸುಮಾರು 1 ಲಕ್ಷ ಕೋಟಿ ರೂ.ಗೂ ಅಧಿಕ ಪ್ರಮಾಣದ ಹಣವನ್ನು ವಿನಿಯೋಗಿಸುತ್ತಿರುವುದಾಗಿ ಡಿ.ಕೆ.ಶಿವಕುಮಾರ್‌ ಪದೇ ಪದೇ ಹೇಳುತ್ತಿದ್ದಾರೆ. ಕರ್ನಾಟಕ ರಾಜ್ಯ ಬಜೆಟ್‌ನ ಶೇ. 25 ರಷ್ಟನ್ನು ಅನುದಾನ ಹಾಗೂ ಸಾಲದ ರೂಪದಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ತೊಡಗಿಸಲಾಗುತ್ತಿದೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡದಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಅಧಿಕಾರ ಹಂಚಿಕೆಯ ವಿಚಾರವಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರ ನಡುವೆ ಪದೇ ಪದೇ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಜಿಬಿಎ ಆಡಳಿತದಿಂದ ಮುಖ್ಯಮಂತ್ರಿ ಅವರನ್ನು ಡಿ.ಕೆ.ಶಿವಕುಮಾರ್‌ ಉದ್ದೇಶ ಪೂರ್ವಕವಾಗಿಯೇ ದೂರ ಇಟ್ಟಿದ್ದಾರೆಯೇ ಎಂಬ ಅನುಮಾನಗಳು ಕೇಳಿ ಬರುತ್ತಿವೆ.

RELATED ARTICLES

Latest News