Homeರಾಜ್ಯಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಹೈಕೋರ್ಟ್‌ ನಿರ್ಬಂಧ

ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಹೈಕೋರ್ಟ್‌ ನಿರ್ಬಂಧ

High Court bans indefinite strike by transport employees

ಬೆಂಗಳೂರು, ಮೇ 19- ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸದೇ ಸರ್ಕಾರದೊಂದಿಗೆ ಚರ್ಚೆ ಮೂಲಕ ಸಮಸ್ಯೆಗಳನ್ನು ಬಗೆ ಹರಿಸಿ ಕೊಳ್ಳು ವಂತೆ ಹೈಕೋರ್ಟ್‌ ಸಂಘಟನೆಗಳಿಗೆ ಸೂಚನೆ ನೀಡಿದ್ದು, ನಾಳೆಯಿಂದ ಆರಂಭವಾಗ ಬೇಕಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಅತಂತ್ರಕ್ಕೆ ಸಿಲುಕಿದೆ.

ಮನೆ ಕೆಲಸದ ಮಹಿಳೆ ಸುದ್ದಗುಂಟೆಪಾಳ್ಯದ ವೇದಾವತಿ ಹಾಗೂ ಲಕ್ಕಸಂದ್ರದ ಕಟ್ಟಡ ನಿರ್ಮಾಣ ಕಾರ್ಮಿಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ನ ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಹಾಗೂ ನ್ಯಾಯಮೂರ್ತಿ ಕೆ. ಮನಥರಾವ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರು ವಾದ ಮಂಡಿಸಿದರು.

ಈ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು ವಾದ ಮಂಡಿಸಿ ಸಾರಿಗೆ ನಿಗಮಗಳ ನೌಕರರ ಬೇಡಿಕೆ ಆಧರಿಸಿ ಈಗಾಗಲೇ ಶೇ. 12.5 ರಷ್ಟು ವೇತನ ಪರಿಷ್ಕರಣೆ ಮಾಡಲಾಗಿದೆ. ಹಾಗೆಯೇ ಹಿಂಬಾಕಿ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.

ಸಿಬ್ಬಂದಿ ಹಾಗೂ ನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುತ್ತಿರುವ ಈ ಹಂತದಲ್ಲಿ ಮುಷ್ಕರ ನಡೆಸುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ. ಯಾವುದೇ ಬೇಡಿಕೆ ಹಾಗೂ ಸಮಸ್ಯೆಗಳಿದ್ದರೆ ಸರ್ಕಾರದ ಜೊತೆ ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಮುಷ್ಕರ ನಡೆಸಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ. ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ಇದೇ ವೇಳೆ ಮನೆ ಕೆಲಸ ಹಾಗೂ ಗಾರೆ ಕೆಲಸ ಮಾಡುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಮತ್ತು ಅವರ ಪರವಾಗಿ ಹಿರಿಯ ವಕೀಲರು ವಾದ ಮಂಡಿಸುತ್ತಿರುವುದರ ಬಗ್ಗೆ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್‌ನ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮತ್ತೆ ಅತಂತ್ರಕ್ಕೆ ಸಿಲುಕಿದಂತಾಗಿದೆ.

ತುರ್ತು ಪತ್ರಿಕಾಗೋಷ್ಠಿ:
ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿಯ ನಾಯಕರು ಇಂದು ಪತ್ರಿಕಾಗೋಷ್ಠಿ ನಡೆಸಿ ನಾಳೆಯಿಂದ ಸಿಐಟಿಯು ಹಾಗೂ ಇತರ ಸಂಘಟನೆಗಳ ಸಾರಿಗೆ ನೌಕರರು ನಡೆಸುವ ಮುಷ್ಕರವನ್ನು ಬೆಂಬಲಿಸಲು ಮುಂದಾಗಿದ್ದವು.

ಈ ನಡುವೆ ಹೈಕೋರ್ಟ್‌ನ ತೀರ್ಪು ಅನಿರೀಕ್ಷಿತವಾಗಿ ಎದುರಾಗಿದ್ದು ಜಂಟಿ ಕ್ರಿಯಾ ಸಮಿತಿ ಗೊಂದಲಕ್ಕೊಳಗಾಗಿತ್ತು. ಜೊತೆಗೆ ಜಂಟಿ ಕ್ರಿಯಾ ಸಮಿತಿಯಲ್ಲಿದ್ದ ಮುಖಂಡರು ಮುಷ್ಕರದಿಂದ ಹಿಂದೆ ಸರಿದು ಒಡಕು ಉಂಟಾಗಿತ್ತು.ಈ ಮೊದಲು 2025ರ ಆಗಸ್ಟ್‌ 5ರಂದು ಮುಷ್ಕರ ಆರಂಭವಾದ ಮೇಲೆ ಹೈಕೋರ್ಟ್‌ ತೀರ್ಪು ನೀಡಿ ಮುಷ್ಕರ ಸ್ಥಗಿತಗೊಳಿಸುವಂತೆ ಸೂಚಿಸಿತ್ತು. ಅದರೂ ಅರ್ಧ ದಿನದ ಮುಷ್ಕರ ನಡೆದು ಹೋಗಿತ್ತು.

ಈಗ ಮುಷ್ಕರ ಆರಂಭವಾಗುವ ಒಂದು ದಿನ ಮುಂಚಿತವಾಗಿಯೇ ಹೈಕೋರ್ಟ್‌ ಆದೇಶ ನೀಡಿರುವುದರಿಂದ ಮುಖಂಡರು ಇಕ್ಕಟ್ಟಿಗೆ ಸಿಲುಕಿದ್ದಾರೆ.ತೀರ್ಪಿನ ಪೂರ್ಣ ಪ್ರತಿಯನ್ನು ಪರಿಶೀಲಿಸಿದ ಬಳಿಕ ಸಂಜೆ ತುರ್ತು ಸಭೆ ನಡೆಸಿ ಮುಷ್ಕರ ಬಗ್ಗೆ ನಿರ್ಣಯಕೈಗೊಳ್ಳುವುದಾಗಿ ಹೇಳಿದ್ದಾರೆ.

ಆದರೆ ಈ ನಡುವೆ ಮಾತನಾಡಿದ್ದ ಮುಖಂಡರು ಸರ್ಕಾರ ತಮಗೆ ಬೇಕಾದವರ ಕಡೆಯಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿಸಿ ಕಾರ್ಮಿಕರ ಹಕ್ಕುಗಳನ್ನು ಧಮನ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.ನ್ಯಾಯಾಲಯ ಪ್ರತಿವಾದಿಗಳಿಗೆ ನೋಟಿಸ್‌‍ ನೀಡದೇ ಏಕಪಕ್ಷೀಯ ತೀರ್ಪು ಪ್ರಕಟಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಮಿಕ ಸಂಘಟನೆಗಳ ಪರ ವಕೀಲರು ಮಧ್ಯ ಪ್ರವೇಶಿಸಿದ್ದರಿಂದಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2-3ದಿನಗಳಲ್ಲಿ ಕಾರ್ಮಿಕ ಸಂಘಟನೆಗಳ ಜೊತೆ ಚರ್ಚೆ ಮಾಡುವಂತೆ ಸೂಚಿಸಿದ್ದಾರೆ. ಆ ಬಳಿಕ ಸರ್ಕಾರ ನ್ಯಾಯಾಲಯ ಆದೇಶವನ್ನು ಪಾಲನೆ ಮಾಡಲಿದೆಯೇ? ಕಾರ್ಮಿಕ ಹಕ್ಕುಗಳಿಗೆ ಸ್ಪಂದಿಸಲಿದೆಯೇ? ಂದು ಕಾದು ನೋಡುವುದಾಗಿ ಹೇಳಿದ್ದಾರೆ.

RELATED ARTICLES

Latest News