Homeರಾಜ್ಯ'ಗೃಹಲಕ್ಷ್ಮೀ'ಯರಿಗೆ ಗ್ಯಾರಂಟಿ ಸರ್ಕಾರದಿಂದ ಹೊಸ ನಿಯಮಗಳ ಶಾಕ್..!

‘ಗೃಹಲಕ್ಷ್ಮೀ’ಯರಿಗೆ ಗ್ಯಾರಂಟಿ ಸರ್ಕಾರದಿಂದ ಹೊಸ ನಿಯಮಗಳ ಶಾಕ್..!

ಬೆಂಗಳೂರು: ಅ,9: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಗೆ ಬರಲಿವೆಯೇ ಎಂಬ ಕುತೂಹಲ ಮೂಡಿದೆ. ಮರುಪರಿಶೀಲನಾ ಅರ್ಜಿಯ ಅಂತಿಮ ಪ್ರತಿ ಎಂದು ಹೇಳಲಾಗುತ್ತಿರುವ ದಾಖಲೆಯಲ್ಲಿ ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಹಾಗೂ ಪಡಿತರ ಚೀಟಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಸೇರಿಸಲಾಗಿದೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮಾದರಿಯಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನೂ ಮರುಪರಿಶೀಲಿಸುವ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಮುಗಿದ ಬಳಿಕ ಸರ್ವೆ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸುವ ನಿರೀಕ್ಷೆಯಿದೆ.

ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಹೊಸ ಷರತ್ತುಗಳು?
ಮರುಪರಿಶೀಲನಾ ಅರ್ಜಿಯಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ದೇಶದ ಯಾವುದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೂ, ಕರ್ನಾಟಕ ರಾಜ್ಯದ ವ್ಯಾಪ್ತಿಯಲ್ಲಿ ಆ ಬ್ಯಾಂಕ್‌ನ ಶಾಖೆ ಇರಬೇಕು ಎಂಬ ಷರತ್ತು ಇದೆ ಎಂದು ತಿಳಿದುಬಂದಿದೆ. ಫಲಾನುಭವಿಯು ಕರ್ನಾಟಕದಲ್ಲಿರುವ ಬ್ಯಾಂಕ್ ಶಾಖೆಯಲ್ಲಿ ಖಾತೆ ಹೊಂದಿರಬೇಕು ಎಂಬ ಅಂಶಕ್ಕೂ ಒತ್ತು ನೀಡಲಾಗಿದೆ.

ಅಲ್ಲದೆ, ಸಾಲದ ಖಾತೆಯ ಬದಲಿಗೆ ಸಾಮಾನ್ಯ ಬ್ಯಾಂಕ್ ಖಾತೆಯ ವಿವರ ನೀಡಬೇಕು ಹಾಗೂ ಜಂಟಿ ಖಾತೆಯನ್ನು ಸಲ್ಲಿಸಬಾರದು ಎಂಬ ಸೂಚನೆಗಳೂ ಅರ್ಜಿಯಲ್ಲಿ ಸೇರಿವೆ ಎನ್ನಲಾಗಿದೆ. ಹೀಗಾಗಿ ಈಗಾಗಲೇ ಗೃಹಲಕ್ಷ್ಮೀ ಯೋಜನೆಯಡಿ ಹಣ ಪಡೆಯುತ್ತಿರುವ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕಾದ ಅಗತ್ಯ ಎದುರಾಗಬಹುದು.

ಪಡಿತರ ಚೀಟಿ ಸಂಖ್ಯೆ ಕಡ್ಡಾಯ?
ಮರುಪರಿಶೀಲನಾ ಅರ್ಜಿಯಲ್ಲಿ ಪಡಿತರ ಚೀಟಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕೆಂಬ ಅಂಶವನ್ನೂ ಸೇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಯೋಜನೆಯ ಫಲಾನುಭವಿಗಳ ಗುರುತು ಮತ್ತು ಕುಟುಂಬದ ವಿವರಗಳನ್ನು ಪರಿಶೀಲಿಸುವ ಉದ್ದೇಶದಿಂದ ಈ ಮಾಹಿತಿ ಪಡೆಯಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ.

ಇದರ ಜತೆಗೆ, ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗದ ಫಲಾನುಭವಿಗಳು ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸಿಕೊಳ್ಳಬೇಕು ಎಂಬ ಸೂಚನೆಯೂ ಇದೆ ಎನ್ನಲಾಗಿದೆ. ಇದರಿಂದ ಆಧಾರ್ ಆಧಾರಿತ ದೃಢೀಕರಣ ಹಾಗೂ ಫಲಾನುಭವಿಗಳ ಮಾಹಿತಿಯ ಪರಿಶೀಲನೆಗೆ ಮಹತ್ವ ನೀಡಲಾಗುತ್ತಿದೆ ಎಂಬ ಚರ್ಚೆ ಆರಂಭವಾಗಿದೆ.

ಆ್ಯಪ್‌ನಲ್ಲಿ ಸರ್ವೆ ಆದರೂ ಆಫ್‌ಲೈನ್ ಅರ್ಜಿ ಭರ್ತಿ ಮಾಡಬೇಕೇ?
ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ಆ್ಯಪ್ ಮೂಲಕ ಸರ್ವೆ ನಡೆಸಿದರೂ, ಫಲಾನುಭವಿಗಳು ಪ್ರತ್ಯೇಕವಾಗಿ ಆಫ್‌ಲೈನ್ ಮರುಪರಿಶೀಲನಾ ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಕ್ರಮ ಜಾರಿಯಾದರೆ ಫಲಾನುಭವಿಗಳು ತಮ್ಮ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕಾಗಬಹುದು.

ಆದರೆ, ಅರ್ಜಿಯಲ್ಲಿನ ಈ ಅಂಶಗಳು ಅಂತಿಮವಾಗಿ ಜಾರಿಯಾಗಿವೆಯೇ, ಸರ್ವೆ ಯಾವ ದಿನದಿಂದ ಆರಂಭವಾಗಲಿದೆ ಹಾಗೂ ಯಾರಿಗೆ ಮರುಪರಿಶೀಲನೆ ಕಡ್ಡಾಯವಾಗಲಿದೆ ಎಂಬ ಬಗ್ಗೆ ಸರ್ಕಾರದ ಅಧಿಕೃತ ಸ್ಪಷ್ಟನೆ ನಿರೀಕ್ಷಿಸಲಾಗಿದೆ.

RELATED ARTICLES
spot_img

Latest News